More

    ವಿಶಿಷ್ಟ ಇತಿಹಾಸದ ಸವಿತಾ ಸಮಾಜ; ಇಂದು ಸವಿತಾ ಮಹರ್ಷಿ ಜಯಂತಿ

    ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಸವಿತಾ ಸಮಾಜ ತನ್ನದೇ ಆದ ಪರಂಪರೆ ಹೊಂದಿದೆ. ಸವಿತಾ ಮಹರ್ಷಿ ಕ್ಷೌರಿಕ ಸಮಾಜದ ಮೂಲಪುರುಷರು. ಸವಿತಾ ಮಹರ್ಷಿಗಳು ದೇವಾನುದೇವತೆಗಳಿಗೆ ಕ್ಷೌರ ಮಾಡುತ್ತಿದ್ದರು ಎಂಬ ನಂಬಿಕೆಯಿದೆ. ಅಲ್ಲದೆ, ದೇವತೆಗಳ ಜತೆಗೆ ತಪಸ್ಸು ಮಾಡುತ್ತಿದ್ದರು.

    ಸವಿತಾ ಸಮಾಜದಲ್ಲಿಯೇ 27 ಉಪಜಾತಿಗಳಿವೆ. ಇದರಲ್ಲಿ ಬರುವ ಹಡಪದ ಸಮಾಜದವರು ಜಗದ್ಗುರು ಬಸವಣ್ಣನ ಕಾಲದಲ್ಲಿ ಲಿಂಗ ಕಟ್ಟಿಸಿಕೊಂಡರು. ಹಡಪದರೂ ಕ್ಷೌರಿಕ ವೃತ್ತಿ ಮಾಡುತ್ತಿದ್ದಾರೆ. ಸವಿತಾ ಸಮಾಜವನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಸವಿತಾ ಸಮಾಜ, ಉತ್ತರ ಕರ್ನಾಟಕದಲ್ಲಿ ಹಡಪದ, ದಕ್ಷಿಣ ಕನ್ನಡದಲ್ಲಿ ಭಂಡಾರಿ ಇನ್ನಿತರ ಭಾಗಗಳಲ್ಲಿ ನಾವಿ ಹಾಗೂ ನಯನ ಕ್ಷೇತ್ರಿಯಾ ಎಂಬ ಹೆಸರು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ ಘೋಷಿಸಲಾಗಿತ್ತು. ಬಳಿಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸವಿತಾ ಮಹರ್ಷಿ ಜಯಂತಿಯನ್ನು ಘೋಷಿಸಲಾಗಿದೆ.

    ರಾಷ್ಟ್ರಕೂಟ, ವಿಜಯನಗರ, ಕಲ್ಯಾಣ ಚಾಲ್ಯುಕರ ಶಾಸನಗಳಲ್ಲಿ ಸವಿತಾ ಸಮಾಜದ ಬಗ್ಗೆ ಉಲ್ಲೇಖವಿದೆ. ಅನೇಕ ಶಾಸನಗಳ ಮೇಲೆ ಸವಿತಾ ಸಮಾಜದ ಸಾಧನಗಳಾದ ಕತ್ತಿ, ಕನ್ನಡಿ ಹಾಗೂ ಕತ್ತರಿಗಳನ್ನು ಕೆತ್ತಲಾಗಿದೆ. ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸವಿತಾ ಸಮಾಜ ತನ್ನ ಸೇವಾಕಾರ್ಯದಿಂದಲೇ ಹೆಸರುವಾಸಿಯಾಗಿದೆ.

    ‘‘ಸವಿತಾ ಮಹರ್ಷಿ ಜಯಂತಿ ಆಚರಣೆಯಿಂದ ಸಮುದಾಯದ ಜನರನ್ನು ಸಂಘಟಿಸಲು ಸಹಾಯವಾಗುತ್ತದೆ. ಕಡಿಮೆ ಜನಸಂಖ್ಯೆ ಹೊಂದಿರುವ ಸವಿತಾ ಸಮಾಜದವರು ಸಂಘಟಿತರಾದರೆ ಮಾತ್ರ ಸಮುದಾಯ ಮುಖ್ಯವಾಹಿನಿಗೆ ಬರಲು ಸಾಧ್ಯ. ಚುನಾವಣೆ ಬಂದಾಗ ರಾಜಕಾರಣಿಗಳಿಗೆ ಎಲ್ಲರ ನೆನಪು ಬರುತ್ತದೆ. ಅಂತಹ ಸಂದರ್ಭದಲ್ಲಿ ಎಲ್ಲ ಸಮುದಾಯದವರು ನಿರ್ಣಾಯಕ ಪಾತ್ರವಹಿಸಬೇಕು. ಸವಿತಾ ಸಮಾಜ ಶುಭಕಾರ್ಯಗಳಿಗೆ ಮುಂದಿರುತ್ತದೆ. ಆದರೆ, ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮುಖಂಡರಿಗೆ ಸಾಧ್ಯವಾಗುತ್ತಿಲ್ಲ. ಸಂಘಟಿತವಾಗುವ ಮೂಲಕ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು’ ಎಂದಿದ್ದಾರೆ ರಾಜ್ಯ ಸವಿತಾ ಸಮಾಜದ ಮೀಸಲಾತಿ ಒಕ್ಕೂಟ ಅಧ್ಯಕ್ಷ ಎಂ.ಬಿ.ಶಿವಕುಮಾರ್.

    ಗುರುಗಳ ಹಾದಿಯಲ್ಲಿ ಸಾಗಿ ಆಚಾರ-ವಿಚಾರ ಮೈಗೂಡಿಸಿಕೊಂಡರೆ ಸಮಾಜದಲ್ಲಿ ಸತ್ಪ್ರಜೆಗಳಾಗಬಹುದು. ಸವಿತಾ ಸಮಾಜ ಎಲ್ಲ ವರ್ಗದ ಜನರಿಗೂ ತಾರತಮ್ಯವಿಲ್ಲದೆ ಸೇವೆ ನೀಡುತ್ತಿದೆ. ಹಾಗಾಗಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಈ ಸಮುದಾಯ ಮತ್ತಷ್ಟು ಸದೃಢವಾಗಬೇಕಿದೆ.

    | ಎಂ.ಬಿ.ಶಿವಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts