More

    ಪರ್ಯಾಯ ಚಿತ್ರಗಳ ಪಿತಾಮಹ ಸತ್ಯಜಿತ್ ರೇ; ಇಂದು ಬರ್ತ್​ಡೇ

    ಜಗತ್ತು ಕಂಡ ಶ್ರೇಷ್ಠ ನಿರ್ದೇಶಕರಲ್ಲೊಬ್ಬರು ಸತ್ಯಜಿತ್ ರೇ. ಅವರ ಕೆಲಸ, ಸಾಧನೆಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಅವರ ಹೆಗ್ಗಳಿಕೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಒಂದು ವಿಷಯವೆಂದರೆ, ಭಾರತೀಯ ಸಿನಿಮಾ ಸಾಧಕರ ಪೈಕಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದವರು ಅವರು. ರೇ ಜನಿಸಿದ್ದು 1921ರ ಮೇ 2ರಂದು. ಇಂದು ಅವರಿದ್ದಿದ್ದರೆ ನೂರು ವರ್ಷ ಪೂರೈಸಿ 101ನೇ ವರ್ಷಕ್ಕೆ ಕಾಲಿರಿಸುತ್ತಿದ್ದರು.

    | ಚೇತನ್ ನಾಡಿಗೇರ್

    ಭಾರತದಲ್ಲಿ ಪೌರಾಣಿಕ ಮತ್ತು ಸಾಮಾಜಿಕ ಚಿತ್ರಗಳದ್ದೇ ಪಾರುಪತ್ಯ ಇದ್ದ ಸಂದರ್ಭದಲ್ಲಿ ಕಲಾತ್ಮಕ ಅಥವಾ ಹೊಸ ಅಲೆಯ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಪರ್ಯಾಯ ಚಿತ್ರಗಳನ್ನು ತೆರೆಗೆ ತಂದವರು ಸತ್ಯಜಿತ್ ರೇ. ತಮ್ಮ ಮೊದಲ ಚಿತ್ರ ‘ಪಥೇರ್ ಪಾಂಚಾಲಿ’ಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಚಿತ್ರಗಳಿಗೆ ದೊಡ್ಡ ಮಟ್ಟದಲ್ಲಿ ಗೌರವ ತಂದುಕೊಟ್ಟರು.

    ಅವರು ನಿರ್ದೇಶಕರಷ್ಟೇ ಅಲ್ಲ, ಬಹುಮುಖ ಪ್ರತಿಭೆ. ಸಂಗೀತ ನಿರ್ದೇಶನ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸೌಂಡ್ ಡಿಸೈನ್, ಕಲಾ ನಿರ್ದೇಶನ, ಕಾಸ್ಟೂ್ಯಮ್ ಡಿಸೈನ್ … ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು. ಮಕ್ಕಳಿಗಾಗಿಯೂ ಕಥೆಗಳನ್ನು ಬರೆಯುತ್ತಿದ್ದರು. ಬಹುಶಃ ‘ಪಥೇರ್ ಪಾಂಚಾಲಿ’ ಚಿತ್ರವನ್ನು ಪ್ರಾರಂಭಿಸಿದಾಗ, ಮುಂದೊಂದು ದಿನ ಅಷ್ಟು ದೊಡ್ಡದಾಗಿ ಬೆಳೆಯುವ ನಿರೀಕ್ಷೆ ಅವರಿಗಿತ್ತೋ ಇಲ್ಲವೋ ಗೊತ್ತಿಲ್ಲ. ಏಕೆಂದರೆ, ಮೊದಲ ಚಿತ್ರವನ್ನೇ ಮುಗಿಸುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕೆ ಅವರಿಗೆ 3 ವರ್ಷ ಬೇಕಾಯ್ತು. ಮಧ್ಯೆ ಹಣದ ಸಮಸ್ಯೆಯಿಂದ ಚಿತ್ರ ನಿಲ್ಲಿಸಿದ್ದರಂತೆ. ಕೊನೆಗೆ ಪ.ಬಂ.ಸರ್ಕಾರದಿಂದ ಸಾಲ ಪಡೆದು ಚಿತ್ರ ಪೂರ್ಣಗೊಳಿಸಿ ಬಿಡುಗಡೆ ಮಾಡಿದರು.

    ನಂತರದ ವರ್ಷಗಳಲ್ಲಿ ಕಲಾತ್ಮಕ, ಹೊಸ ಅಲೆಯ ಚಿತ್ರಗಳಿಗೆ ಅದು ಮುನ್ನುಡಿ ಬರೆದಿದ್ದಷ್ಟೇ ಅಲ್ಲ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಅದರ ಕಥೆಯನ್ನು ಮುಂದುವರೆಸಿ, ‘ಅಪರಾಜಿತೋ’ ಮತ್ತು ‘ಅಪುರ್ ಸಂಸಾರ್’ ಎಂಬ ಇನ್ನೆರಡು ಚಿತ್ರಗಳನ್ನು ತೆರೆಗೆ ತಂದರು. ಈ ಮೂರೂ ಚಿತ್ರಗಳು ಭಾರತೀಯ ಚಿತ್ರರಂಗದ ಮೊದಲ ಟ್ರಯಾಲಜಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ನಂತರ ಸತ್ಯಜಿತ್ ರೇ ಹೊಸಹೊಸ ಪ್ರಯೋಗಗಳನ್ನು ಮಾಡುತ್ತಾ ಹೋದರು. ರವೀಂದ್ರನಾಥ ಟ್ಯಾಗೋರರ ಮೂರು ವಿಭಿನ್ನ ಕಥೆಗಳನ್ನು ತೆಗೆದುಕೊಂಡು ‘ತೀನ್ ಕನ್ಯಾ’ ಎಂಬ ಚಿತ್ರ ಮಾಡಿದರು. ಕೊಲ್ಕತ್ತದ ಕುರಿತಾಗಿ ‘ಪ್ರತಿಧ್ವನಿ’, ‘ಸೀಮಾಬದ್ದ’ ಮತ್ತು ‘ಜನ ಅರಣ್ಯ’ ಎಂಬ ಟ್ರಯಾಲಜಿ ಚಿತ್ರಗಳನ್ನು ಮಾಡಿದರು. ಸಿಕ್ಕಿಂ, ರವೀಂದ್ರನಾಥ್ ಟ್ಯಾಗೋರ್, ಬಾಲ, ಸುಕುಮಾರ್ ರೇ ಕುರಿತಾದ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು. ಬ್ಯೋಮಕೇಶ ಭಕ್ಷಿ ಸಾಹಸಗಳನ್ನೊಳಗೊಂಡ ‘ಚಿರಾಯಿಖಾನ’, ತಾವೇ ಸೃಷ್ಟಿಸಿದ ಫೆಲುದಾ ಎಂಬ ಕಾಲ್ಪನಿಕ ಪತ್ತೇದಾರನ ಸಾಹಸಗಳನ್ನೊಳಗೊಂಡ ‘ಸೋನಾರ್ ಕೆಲ್ಲಾ’, ‘ಜೊಯ್ ಬಾಬಾ ಫೆಲುನಾಥ್’ ಚಿತ್ರಗಳನ್ನು ಮಾಡಿದರು. ಮಕ್ಕಳಿಗಾಗಿ ‘ಗೂಪಿ ಬೈನೆ ಭಾಘಾ ಬೈನೆ’ ಮತ್ತು ‘ಹಿರಕ್ ರಾಜರ್ ದೆಶೆ’ ಚಿತ್ರಗಳನ್ನು ನಿರ್ದೇಶಿಸಿದರು. ‘ಮಹಾನಗರ್’, ‘ಚಾರುಲತಾ’, ‘ನಾಯಕ್’, ‘ಅರಣ್ಯೇರ್ ದಿನ್ ರಾತ್ರಿ’, ‘ಅಶಾನಿ ಸಂಕೇತ್’, ‘ಘರೆ ಭೈರೆ’, ‘ಘನಶತ್ರು’, ‘ಆಗುಂತಕ್’, ‘ಶತರಂಜ್ ಕೆ ಕಿಲಾಡಿ’ ಮುಂತಾದ ಸೂಕ್ಷ್ಮಸಂವೇದನೆಯ ಮತ್ತು ವಿಭಿನ್ನ ನೆಲೆಗಟ್ಟಿನ ಚಿತ್ರಗಳನ್ನು ನಿರ್ದೇಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 1992ರಲ್ಲಿ ಇಹಲೋಕ ತ್ಯಜಿಸಿದರು.

    ಕಥೆ-ಕಾದಂಬರಿಗಳ ಮೋಹ: ತಮ್ಮ 29 ಚಿತ್ರಗಳ ಪೈಕಿ, ‘ಕಾಂಚನಗಂಗಾ’ ಮತ್ತು ‘ನಾಯಕ್’ ಚಿತ್ರಗಳಿಗೆ ಮಾತ್ರ ಅವರು ಕಥೆ- ಚಿತ್ರಕಥೆ ರಚಿಸಿದ್ದು ಬಿಟ್ಟರೆ, ಮಿಕ್ಕೆಲ್ಲಾ ಸಿನಿಮಾಗಳು ಕಥೆ, ಕಾದಂಬರಿಗಳನ್ನು ಆಧರಿಸಿದ್ದಾಗಿದೆ. ಈ ಪೈಕಿ ಐದು ಚಿತ್ರಗಳು ಅವರದೇ ಕಥೆ ಕಾದಂಬರಿಗಳನ್ನು ಆಧರಿಸಿದ್ದು ವಿಶೇಷ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ದಾಖಲೆಯ 27 ಕಥೆ-ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ ಇನ್ನೊಬ್ಬ ನಿರ್ದೇಶಕರು ಸಿಗುವುದಿಲ್ಲ.

    ನಟಿ, ನಿರೂಪಕಿ, ಸಿಸ್ಟರ್​ ಕನುಪ್ರಿಯಾ ಕೋವಿಡ್​ಗೆ ಬಲಿ; 2 ದಿನ ಕೃತಕ ಉಸಿರಾಟದಲ್ಲಿ ಜೀವನ್ಮರಣ ಹೋರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts