More

    ಪಿಎಸ್​ಯುು ಎಂಬ ಬಿಳಿಯಾನೆ; 60ರಲ್ಲಿ 19 ಸಾರ್ವಜನಿಕ ಉದ್ಯಮಗಳಿಂದ ರಾಜ್ಯ ಸರ್ಕಾರಕ್ಕೆ ಲುಕ್ಸಾನು

    ಮೃತ್ಯುಂಜಯ ಕಪಗಲ್ ಬೆಂಗಳೂರು

    ಕರೊನಾದಿಂದ ಎದುರಾಗಿರುವ ಆರ್ಥಿಕ ಸಂಕಷ್ಟ, ಆಡಳಿತ ನಿರ್ವಹಣೆಗೆ ಹಣಕಾಸು ಹೊಂದಾಣಿಕೆಯಂತಹ ಸವಾಲುಗಳು ಮುಂದಿರುವ ನಡುವೆಯೇ ಸಾರ್ವಜನಿಕ ಉದ್ಯಮ (ಪಿಎಸ್​ಯುು)ಗಳ ಪೈಕಿ 19 ಉದ್ದಿಮೆಗಳು ನಷ್ಟದ ಸುಳಿಯಿಂದ ಹೊರ ಬರಲಾಗದೆ ಬೊಕ್ಕಸವನ್ನು ಇನ್ನಷ್ಟು ಬರಿದಾಗಿಸುತ್ತಿವೆ. ಸಕಾಲಕ್ಕೆ ಆಗದ ಉನ್ನತೀಕರಣ, ದಕ್ಷ ಆಡಳಿತದ ಕೊರತೆ ಜತೆಗೆ ಸರ್ಕಾರದ ಪಾಲಿಗೆ ಬಿಳಿಯಾನೆಯಂತಾಗಿರುವ ಈ ಉದ್ಯಮಗಳಿಗೆ ಕಾಯಕಲ್ಪ ನೀಡುವ ಬದಲು ಪಕ್ಷದಲ್ಲಿ ಬಂಡಾಯವೆದ್ದವರ, ಸಚಿವ ಸ್ಥಾನ ಕೈತಪ್ಪಿದವರಿಗೆ ಪುನರ್ವಸತಿ ಕೇಂದ್ರವಾಗಿ ಬಳಸುತ್ತಿರುವುದು ಪಿಎಸ್​ಯುುಗಳನ್ನು ಇನ್ನಷ್ಟು ಬಡವಾಗಿಸಿದೆ.

    ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಯನ್ನು ಖಾಸಗಿಗೆ ಒಪ್ಪಿಸಲು ನಿರ್ಧರಿಸಲಾಗಿದೆ. ಸಕ್ಕರೆ, ವಿದ್ಯುತ್ ಉತ್ಪಾದನೆ, 50,000 ಎಕರೆಯಷ್ಟು ವಿಸ್ತಾರದ ಅರಣ್ಯ ಭೂಮಿಯಿದ್ದರೂ ‘ನಷ್ಟದ ಉದ್ಯಮ’ವೆಂಬ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಾಗಿಲ್ಲ. ಅವ್ಯವಹಾರ, ಅದಕ್ಷ ಆಡಳಿತ, ನಿರ್ಲಕ್ಷ್ಯ ಹಾಗೂ ಸಂಪನ್ಮೂಲಗಳ ಸದ್ಬಳಕೆಯಲ್ಲಿ ವೈಫಲ್ಯ ಈ ಕಾರ್ಖಾನೆಯನ್ನು ದುಸ್ಥಿತಿಗೆ ದೂಡಿದೆ. ಆಧುನೀಕರಣಕ್ಕೆ 2,500 ಕೋಟಿ ರೂ. ಹೊಂದಿಸುವುದು ಕಷ್ಟ ಸಾಧ್ಯವೆಂದು ಸರ್ಕಾರ ಕೈಚೆಲ್ಲಿದೆ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಈಗಾಗಲೇ ಗುತ್ತಿಗೆ ನೀಡಲಾಗಿದೆ. ಇನ್ನೂ ಕೆಲವು ನಷ್ಟಬಾಧಿತ ಉದ್ಯಮಗಳನ್ನು ಸರ್ಕಾರ ಕೈಬಿಡುವ ಚಿಂತನೆ ನಡೆಸಿದೆ. ಸಾರ್ವಜನಿಕ ಉದ್ಯಮಗಳ ಸ್ಥಿತಿಗತಿ ಅಧ್ಯಯನ ಹಾಗೂ ಮೌಲ್ಯಮಾಪನ ನಡೆಸಿರುವ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ವರದಿ ಪ್ರಕಾರ 60ರಲ್ಲಿ 19 ಪಿಎಸ್​ಯುುಗಳು ನಷ್ಟದಲ್ಲಿವೆ. ಪ್ರತಿ 10 ವರ್ಷಗಳಿಗೊಮ್ಮೆ ಪ್ರಾಧಿಕಾರ ಮೌಲ್ಯಮಾಪನ ಮಾಡುತ್ತದೆ.

    ಇದಕ್ಕಾಗಿ 2019-20ನೇ ಸಾಲಿನ ಬಜೆಟ್​ನಲ್ಲಿ 30 ಲಕ್ಷ ರೂ. ಮೀಸಲಿರಿಸಲಾಗಿತ್ತು. ಸಾರ್ವಜನಿಕ ಉದ್ಯಮಗಳಿಗೆ ಕಳೆದ 10 ವರ್ಷಗಳಲ್ಲಿ 1.04 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದ್ದು, ಪಟ್ಟಿ ಮಾಡಿರುವ ಉದ್ಯಮಗಳಿಂದ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಆದರೆ ಈ ವರದಿಗಳಲ್ಲಿ ಉಲ್ಲೇಖಿಸಿದ ಅಂಶಗಳತ್ತ ಗಮನಹರಿಸುವುದು ಅಪರೂಪವೆಂದು ಮೂಲಗಳು ಹೇಳುತ್ತವೆ. ಹಿಂದಿನ ವರದಿಗಳಲ್ಲಿ ಲೋಪ-ದೋಷಗಳನ್ನು ಎತ್ತಿ ತೋರಿಸಲಾಗಿತ್ತು. ಸುಧಾರಣೆ ಕ್ರಮಗಳನ್ನು ಕೈಗೊಂಡಿದ್ದರೆ ನಷ್ಟದಿಂದ ಪಾರುಮಾಡಲು ಸಾಧ್ಯವಿತ್ತು ಎಂದು ಹೇಳಲಾಗುತ್ತಿದೆ. ಕರೊನಾ ತಂದೊಡ್ಡಿರುವ ಆರ್ಥಿಕ ಬಿಕ್ಕಟ್ಟಿನ ಕಾಲದಲ್ಲಿ ಕಾಯಕಲ್ಪ ದೂರದ ಮಾತು. ಮೈಸೂರು ಪೇಪರ್ ಮಿಲ್ಸ್, ಪಾಂಡವಪುರ ಸಕ್ಕರೆ ಕಾರ್ಖಾನೆ ದಾರಿಯನ್ನೇ ಕೆಲವು ಉದ್ಯಮಗಳು ಹಿಡಿದರೆ ಅಚ್ಚರಿಯಿಲ್ಲ ಎಂದು ಮೂಲಗಳು ತಿಳಿಸಿವೆ.

    ನಷ್ಟದಲ್ಲಿರುವ ಉದ್ಯಮಗಳು

    • ರಾಜ್ಯ ರಸ್ತೆ ಸಾರಿಗೆ ನಿಗಮ
    • ಬೆಂಗಳೂರು ಮಹಾನಗರ ಸಾರಿಗೆ ನಿಗಮ
    • ವಾಯವ್ಯ ಕರ್ನಾಟಕ ಸಾರಿಗೆ ನಿಗಮ
    • ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ
    • ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ
    • ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ
    • ಕರ್ನಾಟಕ ನೀರಾವರಿ ನಿಗಮ
    • ಕೃಷ್ಣಾ ಭಾಗ್ಯ ಜಲ ನಿಗಮ
    • ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ
    • ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮ
    • ಮೈಸೂರು ಕಾಗದ ಕಾರ್ಖಾನೆ
    • ಮೈಸೂರು ಸಕ್ಕರೆ ಕಾರ್ಖಾನೆ ಕಂಪನಿ
    • ಬಾಬು ಜಗಜೀವನರಾಮ್ ಚರ್ಮ
    • ಕೈಗಾರಿಕಾ ಅಭಿವೃದ್ಧಿ ನಿಗಮ
    • ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ
    • ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ
    • ರಾಜ್ಯ ಕೈಗಾರಿಕಾ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ನಿಗಮ
    • ರಾಜೀವ್​ಗಾಂಧಿ ಗ್ರಾಮೀಣ ವಸತಿ ನಿಗಮ
    • ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
    • ಎನ್​ಜಿಇಎಫ್ (ಹುಬ್ಬಳ್ಳಿ) ನಿಯಮಿತ

    ಲಾಭದಾಯಕ ಉದ್ಯಮಗಳು

    • ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ
    • ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ
    • ಕರ್ನಾಟಕ ವಿದ್ಯುತ್ ಕಾರ್ಖಾನೆ
    • ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.,
    • ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
    • ಹಟ್ಟಿ ಚಿನ್ನದ ಗಣಿ ಕಂಪನಿ
    • ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾಪೋರೇಷನ್
    • ಕರ್ನಾಟಕ ವಿದ್ಯುತ್ ನಿಗಮ
    • ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ
    • ಮಂಗಳೂರು ವಿದ್ಯುತ್ ಸರಬರಾಜು ಕಂಪನಿ
    • ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ
    • ಡಿ.ದೇವರಾಜ ಅರಸು ಟ್ರಕ್ ಟರ್ವಿುನಲ್
    • ಕರ್ನಾಟಕ ರಾಜ್ಯ ಪಾನೀಯ ನಿಗಮ
    • ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿ.,
    • ಕಾವೇರಿ ನೀರಾವರಿ ನಿಗಮ
    • ಕರ್ನಾಟಕ ಗ್ರಾಮೀಣ ಮೂಲ ಸವಲತ್ತು ಅಭಿವೃದ್ಧಿ ನಿಗಮ
    • ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ
    • ಕರ್ನಾಟಕ ಗೇರು ಅಭಿವೃದ್ಧಿ ನಿಗಮ
    • ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

    ರಾಜಕೀಯ ಪುನರ್ವಸತಿ ಕೇಂದ್ರ: ಆರ್ಥಿಕ ಮಿತವ್ಯಯ ಸಾಧಿಸುವ ಮಾತು ಹೇಳುತ್ತಲೇ ನಿಗಮ-ಮಂಡಳಿಗಳನ್ನು ಎಲ್ಲ ಸರ್ಕಾರಗಳು ಪೋಷಿಸುತ್ತಾ ಬಂದಿವೆ. ಇವು ರಾಜಕೀಯ ಪುನರ್ವಸತಿ ಕೇಂದ್ರಗಳಾಗಿದ್ದು, ಸಚಿವ ಸಂಪುಟ ಬಿಕ್ಕಟ್ಟು, ಪಕ್ಷದೊಳಗೆ ಅತೃಪ್ತಿ, ಅಸಮಾಧಾನ ಹಾಗೂ ಪ್ರಾತಿನಿಧ್ಯವಿಲ್ಲವೆಂಬ ಅಪಸ್ವರ ನಿವಾರಣೆಗೆ ಊರುಗೋಲಾಗಿವೆ. ಇದು ಮಾತ್ರವಲ್ಲ, ಕೆಲವು ಅಪ್ರಸ್ತುತ ಕಂಪನಿಗಳ ಅಸ್ತಿತ್ವದ ಹಿಂದೆ ಅಧಿಕಾರಶಾಹಿ ಒತ್ತಾಸೆಯೂ ಇದೆ ಎಂದು ಮೂಲಗಳು ಹೇಳುತ್ತವೆ.

    ಸಂಕಷ್ಟದಲ್ಲಿದ್ದರೂ ಅನಿವಾರ್ಯ ಏಕೆ?: ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ನಿರ್ವಹಿಸುವ ನಿಗಮಗಳು ನಷ್ಟದ ಪಟ್ಟಿಯಲ್ಲಿವೆ. ಆದರೆ ಸೇವಾ ಕ್ಷೇತ್ರದ ವಿಷಯಕ್ಕೆ ಬಂದಾಗ ಲಾಭ-ನಷ್ಟದ ಪ್ರಶ್ನೆ ಉದ್ಭವಿಸದು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಈ ಪಟ್ಟಿಯಲ್ಲಿವೆ. ಇದರ ಜತೆಯಲ್ಲೇ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳು. ಬಿಎಂಟಿಸಿ ಸಹಿತ 4 ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಆದರೂ ಕರೊನಾಘಾತಕ್ಕಿಂತ ಮುಂಚೆ ಮಾಸಿಕ ವೇತನವನ್ನು ಭರಿಸುತ್ತಿದ್ದವು. ಏಪ್ರಿಲ್​ನಿಂದ 4 ನಿಗಮಗಳ ಮಾಸಿಕ ವೇತನ ಒಟ್ಟು ವೆಚ್ಚ 619.30 ಕೋಟಿ ರೂ.ಗಳನ್ನು ಸರ್ಕಾರವೇ ಭರಿಸುತ್ತಿದೆ.

    ಸ್ವಾಮೀಜಿಯ ಇಶಾರೆಗೇ ತಂತಾನೇ ಚಲಿಸಿ ತೇರುಮನೆ ಸೇರಿಕೊಂಡ ರಥ; ವಿಡಿಯೋ ವೈರಲ್​..

    ಸರಗಳ್ಳನ ತಳ್ಳಿ ಕೆಡವಿದಳು, ಆದರೂ ಆಕೆಗೆ ಇರಿದು ಆತ ಪರಾರಿ; ಆಸ್ಪತ್ರೆಯಲ್ಲಿ ಪ್ರಾಣಬಿಟ್ಟಳು 2 ವರ್ಷದ ಮಗುವಿನ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts