More

    ಕೆರೆಮನೆ ಶಂಭು ಹೆಗಡೆ ಕಲ್ಪದ ಕಲಾವಿದ

    ಯಕ್ಷಗಾನದ ಪರಂಪರೆಯ ಚೌಕಟ್ಟಿನಲ್ಲಿ ಕಲೆಯ ಕಳೆ ಹೆಚ್ಚಿಸುವ ಹೊಸ ಹೊಸ ಸ್ಪರ್ಶಗಳನ್ನು ಕೊಟ್ಟು ರಂಗದಲ್ಲಿ ಅನೇಕ ಸುಧಾರಣೆ, ಸೀಮೋಲ್ಲಂಘನ ಮಾಡಿದವರು ಕೆರೆಮನೆ ಶಂಭು ಹೆಗಡೆ. ತಾವು ಮೊದಲು ಯಕ್ಷಹೆಜ್ಜೆ ಇಟ್ಟು ರಂಗಪ್ರವೇಶ ಮಾಡಿದ ಇಡಗುಂಜಿಯಲ್ಲೇ ರಾಮನಾಗಿ ಬಣ್ಣ ಹಚ್ಚಿಕೊಂಡೇ ಕೊನೆಯ ಹೆಜ್ಜೆಯನ್ನೂ ಹಾಕಿ ಬದುಕಿನಿಂದ ಅವರು ಸರಿದುಹೋಗಿ 14 ವರ್ಷಗಳಾದವು. ಆದರೆ ಈಗಲೂ ಅವರ ಒಡನಾಡಿಗಳಲ್ಲಿ ಅವರೊಂದಿಗಿನ ಮಾತುಕತೆಗಳು, ಅವರ ಅಭಿನಯ, ಸಜ್ಜನಿಕೆ, ಪಾತ್ರಗಳಿಗೆ ಅವರು ನೀಡುತ್ತಿದ್ದ ಹೊಸ ಆಯಾಮಗಳ ನೆನಪು ಹಸಿರಾಗಿದೆ. ಮೇರು ಕಲಾವಿದರಾಗಿ ಯಕ್ಷಗಾನ ರಂಗಕ್ಕೆ ಅಪಾರ ಕೊಡುಗೆ ನೀಡಿದ ಅವರು ಬದುಕಿದ್ದಿದ್ದರೆ ನಾಳೆಗೆ (ನವೆಂಬರ್ 6) 85ನೇ ವರ್ಷದಲ್ಲಿರುತ್ತಿದ್ದರು. ಈ ನೆಪದಲ್ಲಿ ಯಕ್ಷರಂಗ ಕಂಡ ಈ ಸವೋತ್ಕೃಷ್ಟ ಕಲಾವಿದನ ಒಂದು ನೆನಪು.

    | ರಾಜಶೇಖರ ಜೋಗಿನ್ಮನೆ

    ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಅಂದರೆ ಒಂದು ಯಕ್ಷಗಾನ ಮೇಳ ಮಾತ್ರವಲ್ಲ, ಅದೊಂದು ಚಳವಳಿ. ಕೆರೆಮನೆ ಅಂದರೆ ಸಾಕು, ಶ್ರೇಷ್ಠ ಯಕ್ಷಗಾನ ಕಲಾವಿದರ ಸಾಲು ಸಾಲು ಹೆಸರುಗಳು ನೆನಪಾಗುತ್ತವೆ. ದಿವಂಗತರಾದ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಗಜಾನನ ಹೆಗಡೆ ಹೀಗೆ. ಈಗ ಆ ಚಳವಳಿ ಮುನ್ನಡೆಸುತ್ತಿರುವ ಶಿವಾನಂದ ಹೆಗಡೆ ಕೂಡ ಪ್ರಸಿದ್ಧರೇ. ಅವರ ಪುತ್ರ ಶ್ರೀಧರ ಹೆಗಡೆ ಕೂಡ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಈ ರೀತಿಯಲ್ಲಿ ತಲೆಮಾರುಗಳನ್ನು ದಾಟಿ ಅದು ಸಾಗಿ ಬಂದಿದೆ. ಶಂಭು ಹೆಗಡೆ ಆ ಯಕ್ಷಚಳವಳಿಗೆ ಸಮಗ್ರತೆ ನೀಡಿದವರು. ಅವರು ನಟ, ಸಂಘಟಕ, ಚಿಂತಕ. ಅಪಾರ ಜೀವನಪ್ರೀತಿ ಹೊಂದಿದ್ದ ಅಪರೂಪದ ವ್ಯಕ್ತಿ. ನೃತ್ಯ, ಮಾತು, ಚಲನೆ, ಅಭಿವ್ಯಕ್ತಿ ಎಲ್ಲದರಲ್ಲೂ ಅವರೊಂದು ಪ್ರತಿಮೆ. ಅವರು ಪುರುಷವೇಷ, ಸ್ತ್ರೀವೇಷ ಸೇರಿ ಸುಮಾರು 175 ಪಾತ್ರಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟವರು. ವಿಶ್ವದಾದ್ಯಂತ 5000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದವರು.

    ತಾಳಮದ್ದಲೆಯ ಪ್ರಸಂಗವೆಂದೇ ಖ್ಯಾತವಾಗಿದ್ದ ಕೃಷ್ಣಸಂಧಾನದಂಥ ಪ್ರಸಂಗವನ್ನು ಯಶಸ್ವಿಯಾಗಿ ರಂಗಕ್ಕೆ ತಂದವರು. ಸ್ವತಃ ದೇವಕೃಷ್ಣನೇ ಇಳಿದುಬಂದಂತೆ ಭಾಸವಾಗುತ್ತಿದ್ದ ರೂಪ ಅವರದು. ಸಂಧಾನದ ಕೃಷ್ಣನ ವಿಶಿಷ್ಟ ನಿರ್ಲಿಪ್ತ ಭಾವವನ್ನು ಅಭಿನಯದಿಂದ ಪ್ರೇಕ್ಷಕರಿಗೆ ಮುಟ್ಟಿಸುವ ಅವರ ರೀತಿ ವಿಭಿನ್ನವಾಗಿತ್ತು. ‘ನೋಡಿದೆಯ ವಿದುರ, ಏನಯ್ಯ ಇಂಥದ್ದೇನಯ್ಯ…ಚರಣ ಎನಗೆ ಬಲು ನೋವಾಯಿತಯ್ಯ,’ ಮೊದಲಾದ ಪದ್ಯಗಳಿಗೆ ಅವರ ಅಭಿನಯ ವೈಶಿಷ್ಟ ್ಯೂರ್ಣವಾಗಿತ್ತು.

    ಕರ್ಣನ ಪಾತ್ರಕ್ಕೆ ಅವರು ನೀಡಿದ ಸ್ವರೂಪ ಅವರ ಚಿಂತನಾಶಕ್ತಿಗೊಂದು ನಿದರ್ಶನ. ದುಃಖದ ಪದ್ಯಗಳಿಗೆ ಕುಳಿತು ಅಭಿನಯಿಸುವ ಸಂಪ್ರದಾಯವನ್ನು ಅವರು ಬದಲಿಸಿ, ಅಂಥ ಪದ್ಯಗಳಿಗೂ ಸೂಕ್ತವಾಗಬಲ್ಲ ನೃತ್ಯವನ್ನು ಜೋಡಿಸಿದರು. ವೀರ, ರೌದ್ರಗಳಿಗೆ ಮಾತ್ರ ಬಳಕೆಯಾಗುತ್ತಿದ್ದ ಮಂಡಿ ಕುಣಿತವನ್ನು ಭಕ್ತಿ ಸಮರ್ಪಣೆಗೂ ಹೊಂದಿಸಿದರು. ಕರುಣರಸದ ಪಾತ್ರಗಳಿಗಂತೂ ಅವರಿಗೆ ಅವರೇ ಸಾಟಿ. ಹರಿಶ್ಚಂದ್ರ ಅದಕ್ಕೊಂದು ಉದಾಹರಣೆ. ಅದಲ್ಲದೆ ನಳ, ಬಾಹುಕ, ಕರ್ಣ, ದುರ್ಯೋಧನ, ದುಷ್ಟಬುದ್ದಿ, ಜರಾಸಂಧ, ರಾವಣ, ಭಸ್ಮಾಸುರ ಮೊದಲಾದ ವೈವಿಧ್ಯದ ಪಾತ್ರಗಳನ್ನು ತಮ್ಮದೇ ಶೈಲಿಯಲ್ಲಿ ಕಟ್ಟಿಕೊಟ್ಟು ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಸಾಲ್ವ, ಮದನ ಮೊದಲಾದ ಪಾತ್ರಗಳು ಶಂಭು ಹೆಗಡೆ ಅವರಿಂದ ಪ್ರಸಿದ್ಧವಾದವು. ಮಾತ್ರವಲ್ಲ, ಆ ಪಾತ್ರಗಳಿಂದ ಶಂಭು ಹೆಗಡೆ ಪ್ರಸಿದ್ಧರಾದರು. ಹಲವು ಪಾತ್ರಗಳನ್ನು ಅವರೇ ಕಡೆದು ನಿಲ್ಲಿಸಿದ್ದಾರೆ-ಅದು ಅವರಿಗೇ ಮೀಸಲು ಎಂದು ಇಂದಿಗೂ ನಂಬುವ ಹಾಗೆ. ಉದಾಹರಣೆಗೆ ಭೀಷ್ಮವಿಜಯದ ಸಾಲ್ವ. ಆ ಪಾತ್ರಕ್ಕೆ ಸಾಂಪ್ರದಾಯಿಕವಾಗಿ ಇದ್ದ ರಕ್ಕಸ ಸ್ವರೂಪವನ್ನು ಬದಲಿಸಿ, ಅವನನ್ನು ಪ್ರೇಮಿಯಂತೆ, ಭಗ್ನಪ್ರೇಮಿಯಂತೆ ನಿರೂಪಿಸಿದವರು ಶಂಭು ಹೆಗಡೆ. ದುಷ್ಟಬುದ್ಧಿಯ ಪಾತ್ರದಲ್ಲಿ ಅವರು ಸಾತ್ವಿಕ ತೇಜಸ್ಸಿನ ಎದುರು ಕ್ರೌಯರ್åದ ವ್ಯಕ್ತಿತ್ವ ಹೇಗೆ ಹಿಂದೆ ಸರಿಯುತ್ತದೆ ಎಂಬುದನ್ನು ತುಂಬ ಸೂಕ್ಷ್ಮವಾಗಿ ಅಭಿನಯಿಸುತ್ತಿದ್ದರು. ಅದೊಂದು ಉದಾಹರಣೆ ಅಷ್ಟೇ. ಪಾತ್ರದ ವ್ಯಕ್ತಿತ್ವವನ್ನು ಅದರ ಮನಸ್ಸನ್ನು ಸಮರ್ಥವಾಗಿ ಅಭಿವ್ಯಕ್ತಿಸಬಲ್ಲವರು ಅವರಾಗಿದ್ದರು.

    ಶಂಭು ಹೆಗಡೆ ಅವರು ಕೇವಲ ಆಟ ಮಾಡಿ ಹೋಗುತ್ತಿರಲಿಲ್ಲ. ಪ್ರತಿಯೊಂದು ಪ್ರದರ್ಶನದಲ್ಲಿಯೂ ಮೇಳದ ಬಗ್ಗೆ, ಯಕ್ಷಗಾನದ ಬಗ್ಗೆ ತಮ್ಮ ವಿಚಾರಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತಿದ್ದರು. ಈಗಲೂ ಆ ಪರಂಪರೆ ಆ ಮೇಳದಲ್ಲಿ ಮುಂದುವರಿದಿದೆ. ವ್ಯವಸಾಯ ಮೇಳ ನಿಲ್ಲಿಸಿದ ನಂತರವೂ ಅವರು ಪ್ರಾತ್ಯಕ್ಷಿಕೆ, ಉಪನ್ಯಾಸಗಳ ಮೂಲಕ ಯಕ್ಷಗಾನವನ್ನು ಪಸರಿಸಿದರು. ಗುರುತಿಸಲೇಬೇಕಾದ ಮತ್ತೊಂದು ಅಂಶವೆಂದರೆ ಕಲಾವಿದನಾದವನಿಗೆ ಎಂತಹ ಜೀವನ ಇರಬೇಕು ಎಂದು ಸಾಧಿಸಿ ತೋರಿಸಿದ ವ್ಯಕ್ತಿತ್ವ ಅವರದು. ಕಲೆಯ ಎಲ್ಲ ವಿಭಾಗಗಳ ಕುರಿತೂ ಚಿಂತಿಸಿದವರು. ಅವರಿಗಿದ್ದ ಚಟವೆಂದರೆ ಅದೊಂದೇ-ಕಲೆ. ಸಮಗ್ರವಾಗಿ ಯಕ್ಷಗಾನವನ್ನೇ ಧ್ಯಾನಿಸಿದ ಶಂಭು ಹೆಗಡೆ ಕಲ್ಪದ ಕಲಾವಿದ ಎಂದರೆ ಅತಿಶಯೋಕ್ತಿಯಲ್ಲ.

    ಪಾತ್ರ ವೈವಿಧ್ಯ
    ಕಲ್ಪಿತ ಕಥಾನಕ ಸತಿಸುಶೀಲೆಯ ಖಳನಾಯಕ ಪಾತ್ರ ದುರ್ಜಯ. ಆತ ಕಾಮುಕ, ಕ್ರೂರಿ, ಆ ಪಾತ್ರದ ‘ಸೊಲ್ಲ ಕೇಳೆ ಸಾರಸಾಕ್ಷಿ’ ಪದ್ಯದ ಅಭಿನಯ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.

    ಜಾಗತಿಕ ಮನ್ನಣೆ
    ದೇಶ-ಹೊರದೇಶಗಳಲ್ಲೂ ಶುದ್ಧ ಯಕ್ಷಗಾನವನ್ನು ಅವರು ಪರಿಚಯಿಸಿದರು. ಸದಾ ಯಕ್ಷಗಾನದ ಒಳಿತಿಗಾಗಿಯೇ ಚಿಂತಿಸುತ್ತ ಸುಧೋರಣೆಯ ಸುಧಾರಣೆಗಳನ್ನು ಅಳವಡಿಸುತ್ತ ಬಂದರು. ‘ಅವರು ಕಾರ್ಯಶೀಲ ಚಿಂತಕ. ಕಲಾತತ್ವದ ಪರಿಜ್ಞಾನ, ರಂಗಸಾಮರ್ಥ್ಯ, ಸೈದ್ಧಾಂತಿಕ ಬದ್ಧತೆ, ಪ್ರಯೋಗಶೀಲತೆ, ವಿಮರ್ಶಕ ದೃಷ್ಟಿಕೋನ ಎಲ್ಲವನ್ನೂ ಹೊಂದಿದ್ದಲ್ಲದೆ ಅಪಾರ ಜೀವನಪ್ರೀತಿ ಮತ್ತು ಮಮತೆಯ ಸೆಲೆಯಾಗಿದ್ದರು’ ಎಂದು ಹಲವು ವಿದ್ವಾಂಸರಿಂದ ಪ್ರಶಂಸೆಗೊಳಗಾಗಿದ್ದಾರೆ. ತಂದೆ ಸ್ಥಾಪಿಸಿದ ಮೇಳವನ್ನು 1974ರಲ್ಲಿ ಮರು ಸಂಘಟನೆ ಮಾಡುವಲ್ಲಿ ಅವರ ಶ್ರಮ ನಿಜಕ್ಕೂ ಇತಿಹಾಸ. ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ರಚನೆಯ ಹಿಂದೆ ಶಂಭು ಹೆಗಡೆಯವರ ಸಾತ್ವಿಕ ಹೋರಾಟದ ಪಾಲೂ ಇದೆ. ಯಕ್ಷಗಾನಕ್ಕೊಂದು ಅಕಾಡೆಮಿ ಬೇಕು, ಅದರ ಸ್ವರೂಪ ಹೇಗಿರಬೇಕು ಎಂಬುದರ ಬಗ್ಗೆ ಹಲವು ದಶಕಗಳ ಹಿಂದೆಯೇ ಸಮರ್ಥವಾಗಿ ಪ್ರತಿಪಾದಿಸಿದ್ದರು. ಈಗಾಗಲೇ ಹಲವರು ಉಲ್ಲೇಖಿಸಿದಂತೆ ಶಂಭು ಹೆಗಡೆ ತಮ್ಮ ಪರಿಸರ, ಪರಂಪರೆಗಷ್ಟೇ ಜೋತು ಬೀಳದೆ, ಕಲಿತದ್ದನ್ನು ರಂಗವಿಜ್ಞಾನದ ಬೆಳಕಿನಲ್ಲಿ ಸಂಯೋಜನೆ ಮಾಡಿದವರು. ಖ್ಯಾತ ನೃತ್ಯ ಕಲಾವಿದೆ ಮಾಯಾರಾವ್ ಅವರಲ್ಲಿ ಕೊರಿಯೋಗ್ರಫಿಯ ತಂತ್ರಗಳನ್ನು ಕಲಿತ ಅವರು ಸದಭಿರುಚಿಯ ಪ್ರಸಂಗಗಳನ್ನು ಪ್ರಸಿದ್ಧಿಗೊಳಿಸಿದರು. ಅವರು ಕರುಣಾರಸದ ಸಿದ್ಧಿಪುರುಷ. ಉತ್ಕೃಷ್ಟ ಮಟ್ಟದ ವಿಸ್ತಾರ ಹರಹು ಉಳ್ಳ ಅವರ ಚಿಂತನೆ ಪಾತ್ರಗಳಲ್ಲಿ ಸ್ಪಷ್ಟವಾಗುತ್ತಿತ್ತು. ಆಯಾ ಪಾತ್ರಗಳ ಸ್ವಭಾವವನ್ನು ಅವರೆಷ್ಟು ಅಚ್ಚುಕಟ್ಟಾಗಿ ಕಟ್ಟಿಕೊಡುತ್ತಿದ್ದರೆಂದರೆ ಆ ಪಾತ್ರ ಬದುಕಿದ್ದಾಗ ಹೀಗೆಯೇ ಇದ್ದಿರಬೇಕು ಎಂದು ಅನಿಸುತ್ತಿದ್ದವು. ಅವರು ಇಷ್ಟು ಮಾತ್ರವೇ ಅಲ್ಲ. ಇದು ಅವರು ಯಕ್ಷಗಾನ ರಂಗಕ್ಕೆ ನೀಡಿದ ಕೊಡುಗೆಯ ಒಂದು ಸ್ಥೂಲ ನೋಟವಷ್ಟೇ. ಶಂಭು ಹೆಗಡೆ ಜನಿಸಿದ್ದು 1938ರ ನವೆಂಬರ್ 6ರಂದು ಉತ್ತರಕನ್ನಡದ ಗುಣವಂತೆ ಸಮೀಪದ ಕೆರೆಮನೆಯಲ್ಲಿ. 2009 ಫೆ.3ರಂದು ಇಡಗುಂಜಿಯ ರಂಗಸ್ಥಳದಲ್ಲಿ ಕುಶ-ಲವದ ರಾಮನ ಪಾತ್ರ ನಿರ್ವಹಿಸುತ್ತಿದಾಗಲೇ ನಿಧನರಾದರು.

    ರಂಗದ ವಿನ್ಯಾಸ
    ಪ್ರೇಕ್ಷಕರಿಗೆ ರಂಗದಲ್ಲಿ ಅದರ ಕಂಬಗಳೇ ಅಡ್ಡಿಯಾಗುತ್ತಿದ್ದ ಸಂದರ್ಭದಲ್ಲಿ ವಿಶಾಲವಾದ ಅರ್ಧಚಂದ್ರಾಕೃತಿಯ ರಂಗಸ್ಥಳ ವಿನ್ಯಾಸಗೊಳಿಸಿದ್ದು ಶಂಭು ಹೆಗಡೆ. ಅದು ಮುಂದೆ ಇತರರಿಗೂ ಮಾದರಿಯಾದ ಅವರ ಯಶಸ್ವೀ ಪರಿಕಲ್ಪನೆ. ಪ್ರೇಕ್ಷಕರು ಯಕ್ಷಗಾನ ವೀಕ್ಷಿಸಲು ಅನುಕೂಲವಾಗಲೆಂದು ಮರದ ಆರಾಮ ಕುರ್ಚಿಗಳ ಬದಲು ಕಬ್ಬಿಣದ ಪಟ್ಟಿಗಳಿಂದ ಆರಾಮಕುರ್ಚಿ ವಿನ್ಯಾಸಗೊಳಿಸಿ ಅದರ ನಿರ್ವಹಣೆ, ಸಾಗಣೆಗಳಿಗಿದ್ದ ಸಮಸ್ಯೆಗೆ ಪರಿಹಾರ ಕಲ್ಪಿಸಿದವರು ಶಂಭು ಹೆಗಡೆ. ಗುಣವಂತೆಯಲ್ಲಿ ಈಗಲೂ ಯಶಸ್ವಿಯಾಗಿ ನಡೆಯುತ್ತಿರುವ ಶ್ರೀಮಯ ಕಲಾಕೇಂದ್ರ ಅವರ ಕಲ್ಪನೆಯಕೂಸು. ಅವರ ಪತ್ನಿ ಗೌರಿ ಕಷ್ಟ-ಸುಖ ಎಲ್ಲ ದಿನಗಳಲ್ಲೂ ಅವರ ಬೆಂಬಲಕ್ಕಿದ್ದರು ಎಂಬುದನ್ನು ಉಲ್ಲೇಖಿಸದೇ ಇರಲಾಗದು.

    ನಾಟಕ, ಸಿನಿಮಾ
    ಶಂಭು ಹೆಗಡೆ ನಾಟಕಗಳಲ್ಲಿಯೂ ಪಾತ್ರ ನಿರ್ವಹಿಸಿದ್ದರು. ಡಾ. ಮಾಯಾರಾವ್ ನಿರ್ದೇಶನದ ಬಸವೇಶ್ವರ ನೃತ್ಯನಾಟಕದ ಬಸವೇಶ್ವರನಾಗಿ, ರಾಮಾಯಣ ದರ್ಶನಂ ನಾಟಕದ ಮಂಥರೆ, ರಾಮ, ಊರುಭಂಗ ನಾಟಕದ ದುರ್ಯೋಧನ ಮೊದಲಾದ ಪಾತ್ರ ನಿರ್ವಹಿಸಿದ್ದರು. ಕೊರಿಯೋಗ್ರಫಿ ನಂತರ ಅವರು ಸಿನಿಮಾರಂಗಕ್ಕೆ ಹೋಗಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಕೊರಿಯೋಗ್ರಫಿ ಶಿಕ್ಷಣ ನೃತ್ಯವಿಜ್ಞಾನದ ಕಲಿಕೆ. ನೃತ್ಯವೆಲ್ಲವಕ್ಕೂ ಅವಶ್ಯವಾದ ಮೂಲಸಂಗತಿಗಳಾದ ರಂಗ, ರಂಗಚಲನೆ ಮುಂತಾದವುಗಳನ್ನು ಕಲಿಸಿಕೊಡುತ್ತದೆ. ಇದನ್ನು ಶಂಭು ಹೆಗಡೆ ಕಲಿತಿದ್ದರಾದ್ದರಿಂದ ಸಹಜವಾಗಿ ಇತರ ನೃತ್ಯಪ್ರಕಾರಗಳಾದ ಕಥಕ್, ಕಥಕ್ಕಳಿ, ಮಣಿಪುರಿ ಮುಂತಾದವುಗಳ ನಿಕಟ ಪರಿಚಯ ಅವರಿಗಿತ್ತು. ಹೀಗಾಗಿ ಯಕ್ಷಗಾನವನ್ನು ರಾಷ್ಟ್ರೀಯ ದೃಷ್ಟಿಕೋನದಿಂದ ನೋಡುವ ಸಾಮರ್ಥ್ಯ ಅವರಿಗಿತ್ತು. ಈ ವಿಶಾಲವಾದ ದೃಷ್ಟಿಕೋನದಿಂದಾಗಿ ಯಕ್ಷಗಾನ ಮಾತ್ರವಲ್ಲದೆ ಯಕ್ಷಗಾನೇತರ ಪ್ರೇಕ್ಷಕರನ್ನು ಸುಲಭವಾಗಿ ತಲುಪುವುದು ಅವರಿಗೆ ಸಾಧ್ಯವಾಯಿತು. ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಅದೆಷ್ಟೋ ಪ್ರತಿಭಾನ್ವಿತ, ತೆರೆಮರೆಯ ಕಲಾವಿದರಿಗೆ ಪೋ›ತ್ಸಾಹ ಕೊಟ್ಟು ಬೆಳಕಿಗೆ ತಂದಿದ್ದರು. ಸುನೀಲಕುಮಾರ ದೇಸಾಯಿ ಅವರ ‘ಪರ್ವ’ ಚಿತ್ರದಲ್ಲಿ ನೃತ್ಯಗುರುವಾಗಿ ಅಭಿನಯಿಸಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೂ ಅವರು ಭಾಜನರಾಗಿದ್ದರು.

    ಸೌಹಾರ್ದ ವ್ಯಕ್ತಿತ್ವ, ಶ್ರುತಿಬದ್ಧ ಶೈಲಿ
    ಶಂಭು ಹೆಗಡೆ ಅವರದು ಸೌಹಾರ್ದ ವ್ಯಕ್ತಿತ್ವ. ನಿಜ ಜೀವನದಲ್ಲಿಯೂ ಪಾತ್ರನಿರ್ವಹಿಸುವಾಗಲೂ. ಎದುರಿಗಿರುವವರು ಯಾರೇ ಇದ್ದರೂ ಅವರ ಮಾತುಗಳಲ್ಲಿ ಒಂದು ಅಕ್ಕರೆ ಇರುತ್ತಿತ್ತು. ಯಕ್ಷಗಾನದ ಕುರಿತಾದ ಕಾಳಜಿಯೊಂದು ಇರದೇ ಅವರ ಮಾತುಗಳು ಮುಗಿಯುತ್ತಿರಲಿಲ್ಲ. ರಂಗದಲ್ಲಿ ಹಾಗೂ ತಾಳಮದ್ದಲೆಗಳಲ್ಲಿ ಕೂಡ ಅವರದು ಸೌಹಾರ್ದ ವ್ಯಕ್ತಿತ್ವವೇ. ಎದುರಿಗಿರುವ ಪಾತ್ರಧಾರಿ ಜತೆ ಅನಗತ್ಯ ವಿವಾದಕ್ಕಿಳಿಯುತ್ತಿರಲಿಲ್ಲ. ಹಾಗೆಯೇ ಎದುರಿಗಿರುವ ಮಾತುಗಾರ ಎಷ್ಟೇ ಪಟ್ಟುಗಳನ್ನು ಹಾಕಿದರೂ ಅತ್ಯಂತ ಜಾಣ್ಮೆಯಿಂದ ಉತ್ತರಿಸುವುದು ಅವರಿಗೆ ಸಹಜವಾಗಿತ್ತು. ಪಾತ್ರದಾರಿಯಾಗಿ ರಂಗದಲ್ಲಿ ಅವರ ಮಾತುಗಳೆಂದರೆ ಒಂದು ಸಂಗೀತದಂತೆ ಶ್ರುತಿಬದ್ಧ. ಆಕರ್ಷಕ ಶಾರೀರ. ಅಗತ್ಯ ಏರಿಳಿತಗಳಿಂದ ಮತ್ತೆ ಮತ್ತೆ ಕೇಳಬೇಕೆನಿಸುವ ಶೈಲಿ. ಪಾತ್ರಗಳ ಚಿತ್ರಣವಂತೂ ಅತ್ಯಂತ ನವಿರು. ‘ಸುಭದ್ರಾ ಕಲ್ಯಾಣ’ದಲ್ಲಿ ಅವರ ಕೃಷ್ಣ ಹಾಗೂ ದಿವಂಗತ ಕೆರೆಮನೆ ಮಹಾಬಲ ಹೆಗಡೆಯವರ ಬಲರಾಮನ ಜೋಡಿ ಬಹುಶಃ ಇಂದಿಗೂ ಅದಕ್ಕೆ ಅದುವೇ ಸಾಟಿ ಎಂಬಂತಿದೆ. ಅವರ ಬಹುಪಾಲು ಪಾತ್ರಗಳಿಗೆ ಹಿಮ್ಮೇಳದಲ್ಲಿ ದಿವಂಗತ ನೆಬ್ಬೂರು ನಾರಾಯಣ ಭಾಗವತರಿರುತ್ತಿದ್ದರು. ಅವರಿಬ್ಬರ ಜೋಡಿ ಒಂದು ಸುಮಧುರ ಲಯದಲ್ಲಿ ಗಾಯನ ವಾದನ ನೃತ್ಯಗಳ ಹದವಾದ ಪಾಕವಾಗಿರುತ್ತಿತ್ತು. ಅದು ರಂಗವೆಂಬ ಲೋಕದಲ್ಲಿ ಯಕ್ಷಲೋಕದ ಹೊಸ ಸಾಧ್ಯತೆಯ ಮತ್ತೊಂದು ಮಜಲನ್ನು ಸೃಷ್ಟಿಸಿಬಿಡುತ್ತಿತ್ತು.

    ತೀವ್ರ ಹದಗೆಟ್ಟ ದೆಹಲಿ ವಾಯುಮಾಲಿನ್ಯ; ಮಕ್ಕಳು ಹಿರಿಯರು ಹೊರಬಾರದಂತೆ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts