More

    ಪ್ರತಿಯೊಬ್ಬ ನಾಗರಿಕನೂ ಯೋಧ; ಇಂದು ವಿಶ್ವ ಸಿವಿಲ್ ಡಿಫೆನ್ಸ್ ದಿನ

    | ಹರೀಶ ಬೇಲೂರು ಬೆಂಗಳೂರು

    ಭೂಕುಸಿತ, ಮಳೆ ಅನಾಹುತ, ಕಟ್ಟಡ ಕುಸಿತ ಸೇರಿ ಯಾವುದೇ ದುರಂತ ಸಂಭವಿಸಿದರೂ ಸಿವಿಲ್ ಡಿಫೆನ್ಸ್ ಪಡೆ ಮೊದಲು ಘಟನಾ ಸ್ಥಳದಲ್ಲಿ ಇರುತ್ತದೆ. ಕೂಲಿ ಕಾರ್ವಿುಕರಿಂದ ಹಿಡಿದು ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರೂ ಎಲೆಮರೆ ಕಾಯಿಯಂತೆ ಇದರಲ್ಲಿ ದುಡಿಯುತ್ತಿದ್ದಾರೆ. ಸಾಫ್ಟ್​ವೇರ್ ಉದ್ಯೋಗಿಗಳು, ವೈದ್ಯರು, ಉದ್ಯಮಿಗಳು, ವಿದ್ಯಾರ್ಥಿಗಳು, ಕೂಲಿ ಕಾರ್ವಿುಕರು, ಬೀದಿ ಬದಿ ವ್ಯಾಪಾರಿಗಳು ಸೇರಿ ಎಲ್ಲ ವರ್ಗದ ಜನ ಈ ಪಡೆಯಲ್ಲಿದ್ದಾರೆ.

    ಸಿವಿಲ್ ಡಿಫೆನ್ಸ್ ಆರಂಭ: ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ 1935ರಲ್ಲಿ ‘ಏರ್ ರೈಡ್ ಪ್ರಿಕಾಷನ್’ ಹೆಸರಿನಲ್ಲಿ ಸ್ವಯಂಸೇವಾ ಸಂಘಟನೆ ಹುಟ್ಟಿಕೊಂಡಿತ್ತು. ಅದೇ ಮಾದರಿಯಲ್ಲಿ ಭಾರತದಲ್ಲೂ 1965ರಲ್ಲಿ ‘ಸಿವಿಲ್ ಡಿಫೆನ್ಸ್’ ಪ್ರಾರಂಭವಾಯಿತು. ಯುದ್ಧಗಳು ನಡೆಯುವಾಗ ಸೈನಿಕರು ಗಡಿಗಳಲ್ಲಿ ಹೋರಾಡುತ್ತಿದ್ದರೆ, ಸಿವಿಲ್ ಡಿಫೆನ್ಸ್ ಪಡೆ ಗಡಿಯೊಳಗಿನ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ಸೇನೆ ಸೇರಬೇಕು ಹಾಗೂ ಐಪಿಎಸ್ ಅಧಿಕಾರಿ ಆಗಬೇಕೆಂಬ ಆಸೆ ಇಟ್ಟುಕೊಂಡು ಬಹಳಷ್ಟು ಮಂದಿ ರಾಜ್ಯದಲ್ಲಿದ್ದಾರೆ. ಆದರೆ, ವಿವಿಧ ಕಾರಣಗಳಿಂದಾಗಿ ಬೇರೆ ಕೆಲಸ ತೊಡಗಿಸಿಕೊಂಡಿರುವ ಅವರೆಲ್ಲರೂ ಈಗ ಸಿವಿಲ್ ಡಿಫೆನ್ಸ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಸದಸ್ಯರ ಸಂಖ್ಯೆ ತುಂಬ ಕಡಿಮೆ ಇತ್ತು. ಕಾಲೇಜುಗಳಲ್ಲಿ, ಕಂಪನಿಗಳಲ್ಲಿ ಹಾಗೂ ಅಪಾರ್ಟ್​ವೆುಂಟ್​ಗಳು ಸೇರಿ ಇನ್ನಿತರ ಸ್ಥಳಗಳಲ್ಲಿ ಸಿವಿಲ್ ಡಿಫೆನ್ಸ್ ಬಗ್ಗೆ ಜನರಿಗೆ ಅರಿವು ಮೂಡಿಸಿದಾಗ ಹೆಚ್ಚಿನ ಸಂಖ್ಯೆಯ ಜನರು ಸೇರ್ಪಡೆಗೊಂಡಿದ್ದಾರೆ. ಈಗಲೂ ಜನರು ಸ್ವಯಂಪ್ರೇರಿತವಾಗಿ ಸೇರಿಕೊಳ್ಳುತ್ತಿದ್ದಾರೆ.

    ಕೋಟಿ ಸ್ವಯಂಸೇವಕರ ಸೇರ್ಪಡೆಯ ಗುರಿ: ಬರುವ ದಿನಗಳಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಸಿವಿಲ್ ಡಿಫೆನ್ಸ್ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿ ಜಾರಿಗೆ ತರಲು, ಸ್ವಯಂ ಸೇವಕರ ಸಂಖ್ಯೆಯನ್ನು 1 ಕೋಟಿಗೆ ಹೆಚ್ಚಿಸಲು ಕೇಂದ್ರ ಸಿವಿಲ್ ಡಿಫೆನ್ಸ್ ಗುರಿ ಹಾಕಿಕೊಂಡಿದೆ. 1968ರಲ್ಲಿ ಸಂಸತ್ತಿನಲ್ಲಿ ಸಿವಿಲ್ ಡಿಫೆನ್ಸ್ ಆಕ್ಟ್ ಅಂಗೀಕಾರವಾಗಿದೆ.

    ಪ್ರತಿ ಮನೆಯಲ್ಲೂ ಪ್ರಥಮ ಚಿಕಿತ್ಸಕ: ಅಂತಾರಾಷ್ಟ್ರೀಯ ಸಿವಿಲ್ ಡಿಫೆನ್ಸ್ ಸಂಸ್ಥೆ (ಐಸಿಡಿಒ) ಸಿವಿಲ್ ಡಿಫೆನ್ಸ್ ದಿನವನ್ನು ಪ್ರತಿ ವರ್ಷ ಮಾ.1ರಂದು ವಿಶ್ವಾದಾದ್ಯಂತ ಆಚರಿಸುತ್ತಿದೆ. ಈ ಬಾರಿ ‘ನಾಗರಿಕ ರಕ್ಷಣೆ ಮತ್ತು ಪ್ರತಿ ಮನೆಯಲ್ಲೂ ಪ್ರಥಮ ಚಿಕಿತ್ಸಕ’ ಎಂಬ ವಿಷಯದಡಿ ಸಿವಿಲ್ ಡಿಫೆನ್ಸ್ ದಿನವನ್ನು ಆಚರಿಸಲಾಗುತ್ತಿದೆ. ಯಾವುದೇ ಆರೋಗ್ಯ ಸಮಸ್ಯೆ, ಅಪಘಾತ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಗೆ ಹೆಚ್ಚಿನ ಮಹತ್ವವಿದೆ. ರಕ್ತಸ್ರಾವ ತಡೆಯುವಿಕೆ ಸೇರಿದಂತೆ ಮತ್ತಷ್ಟು ಹಾನಿಯನ್ನು ಪ್ರಥಮ ಚಿಕಿತ್ಸೆ ತಡೆಯುತ್ತದೆ, ಈ ಮೂಲಕ ಪ್ರಾಣ ಕಾಪಾಡುವಲ್ಲಿ ಸಹಾಯಕವಾಗುತ್ತದೆ. ಪ್ರಥಮ ಚಿಕಿತ್ಸೆ ನೀಡಲು ಅಗತ್ಯ ತರಬೇತಿ ಬೇಕಾಗುತ್ತದೆ. ತಕ್ಕ ಸಲಕರಣೆಗಳು, ಔಷಧಗಳು, ಅವುಗಳನ್ನು ಬಳಸುವ ಕುರಿತು ತರಬೇತಿ ಪಡೆದವರು ಪ್ರತಿ ಮನೆಯಲ್ಲೂ ಇದ್ದರೆ, ತಮ್ಮ ಸುತ್ತಮುತ್ತ, ಕಚೇರಿಗಳಲ್ಲಿ ಹಾಗೂ ಸಾರ್ವಜನಿಕ ಸ್ಥಲಗಳಲ್ಲಿ ಸಾಕಷ್ಟು ಪ್ರಾಣ ಹಾನಿಗಳನ್ನು ತಡೆಗಟ್ಟಬಹುದು.

    ಸಿವಿಲ್ ಡಿಫೆನ್ಸ್ ಸೇರ್ಪಡೆ ವಿಧಾನ: 18 ವರ್ಷ ದಾಟಿದವರು ಯಾರು ಬೇಕಾದರೂ ಸಿವಿಲ್ ಡಿಫೆನ್ಸ್​ಗೆ ಸೇರಿಕೊಳ್ಳಬಹುದು. ವಿದ್ಯಾರ್ಹತೆ ಅಗತ್ಯವಿಲ್ಲ. ಆದರೆ, ಆಯ್ಕೆ ಬಯಸಿದವರ ಪೂರ್ವಾಪರದ ಬಗ್ಗೆ ಪೊಲೀಸ್ ಪರಿಶೀಲನೆ ನಡೆಯುತ್ತದೆ. ಆಯ್ಕೆಯಾದವರಿಗೆ ಹಲಸೂರಿನ ಸಿವಿಲ್ ಡಿಫೆನ್ಸ್ ಅಕಾಡೆಮಿಯಲ್ಲಿ 12 ತಿಂಗಳು ತರಬೇತಿ ಇರುತ್ತದೆ. ನಂತರ, ಮೈಸೂರಿನ ಆಡಳಿತ ತರಬೇತಿ ಕೇಂದ್ರ(ಎಟಿಐ), ನಾಗಪುರದ ನ್ಯಾಷನಲ್ ಸಿವಿಲ್ ಡಿಫೆನ್ಸ್ ಕಾಲೇಜು,ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದಲ್ಲಿ ತರಬೇತಿ ಇರುತ್ತದೆ. ಇದರ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ಭರಿಸುತ್ತದೆ. ರಾಜ್ಯದಲ್ಲಿ ಬೆಂಗಳೂರಲ್ಲಿ 63, ಕೈಗಾ, ರಾಯಚೂರು ಹಾಗೂ ಉಡುಪಿಯಲ್ಲಿ ತಲಾ 1 ಸೇರಿ ಒಟ್ಟು 66 ಸಿವಿಲ್ ಡಿಫೆನ್ಸ್ ಘಟಕಗಳಿದ್ದು, 11,843 ಸದಸ್ಯರಿದ್ದಾರೆ.

    ಸಿವಿಲ್ ಡಿಫೆನ್ಸ್ ಕಾರ್ಯಗಳೇನು?

    • ಗಾಯಾಳುಗಳ ರಕ್ಷಣೆ
    • ಪ್ರಥಮ ಚಿಕಿತ್ಸೆ ನೀಡುವುದು
    • ಸುರಕ್ಷಿತ ಪ್ರದೇಶಕ್ಕೆ ಸಾಗಣೆ
    • ನಿರಾಶ್ರಿತರಿಗೆ ಪುನರ್ ವಸತಿ ಅತ್ಯವಶ್ಯಕ ಸಾಮಗ್ರಿಗಳ ಶೇಖರಣೆ, ಹಂಚುವಿಕೆ
    • ವೈದ್ಯರು, ದಾದಿಯರ ಸಿಬ್ಬಂದಿ ಒದಗಿಸುವುದು
    • ತುರ್ತು ಒಳಚರಂಡಿ, ಪರ್ಯಾಯ ನೀರು ಸರಬರಾಜು ವ್ಯವಸ್ಥೆ
    • ಮನೆಗಳ ದುರಸ್ತಿ, ಬೆಲೆ ಬಾಳುವ ವಸ್ತುಗಳ ಸಂರಕ್ಷಣೆ
    • ಪ್ರಾಕೃತಿಕ ಮತ್ತು ಇತರೆ ವಿಕೋಪಗಳ ಸಂದರ್ಭದಲ್ಲಿ ರಕ್ಷಣೆ, ಪರಿಹಾರ ಕಾರ್ಯ
    • ಯುದ್ಧದ ಸಂದರ್ಭದಲ್ಲಿ ಸಹಾಯ ಮಾಡುವುದು
    • ಅನಾಹುತದಲ್ಲಿ ಸಿಲುಕಿದ ಜನರಿಗೆ ಮನೋಸ್ಥೈರ್ಯ ತುಂಬುವುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts