More

    ಕುಡ್ಲದಲ್ಲಿ ಹಳದಿ ಗಂಟಲಿನ ಗುಬ್ಬಚ್ಚಿ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಪಕ್ಷಿ ತಜ್ಞ ಸಲೀಂ ಅಲಿ ಅವರ ಹಕ್ಕಿ ಎಂದೇ ಕರೆಯಲ್ಪಡುವ ಹಳದಿ ಗಂಟಲಿನ ಗುಬ್ಬಚ್ಚಿ(ಯಲ್ಲೋ ತ್ರೋಟೆಡ್ ಸ್ಪಾೃರೋ) ಮೊದಲ ಬಾರಿ ಮಂಗಳೂರಿನಲ್ಲಿ ಕಾಣಿಸಿಕೊಂಡಿದೆ.

    ಡಿಸೆಂಬರ್ 4ರಂದು ಜೋಕಟ್ಟೆ ರೈಲ್ವೆ ಕ್ರಾಸಿಂಗ್ ಸಮೀಪದ ಗದ್ದೆಯಲ್ಲಿ ಗೋಚರಿಸಿದ ಈ ಹಕ್ಕಿಯನ್ನು ಪಕ್ಷಿ ವೀಕ್ಷಕರಾದ ರೋಷನ್ ಕಾಮತ್ ಮತ್ತು ವಿವೇಕ್ ನಾಯಕ್ ಮೊದಲು ಗಮನಿಸಿದ್ದು, ರೋಷನ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಲಭ್ಯ ದಾಖಲೆ ಪ್ರಕಾರ ಇದು ದಕ್ಷಿಣ ಕನ್ನಡದಲ್ಲಿ ದಾಖಲಿಸಿದ ಹಳದಿ ಗಂಟಲಿನ ಗುಬ್ಬಚ್ಚಿಯ ಮೊದಲ ಚಿತ್ರ.

    ದಕ್ಷಿಣ ಕನ್ನಡಕ್ಕೆ ಸಮೀಪ ಅಂದರೆ ಕೇರಳದ ಕಣ್ಣೂರು ತನಕ ಹಾಗೂ ಕುಮಟಾ ಭಾಗದಲ್ಲಿ ಈ ಹಕ್ಕಿ ಹಿಂದೆ ಕಾಣಿಸಿಕೊಂಡಿತ್ತು. ಗುಬ್ಬಚ್ಚಿ ಜಾತಿಗೆ ಸೇರಿದ ಈ ಹಕ್ಕಿ ಬೂದು ಮಿಶ್ರಿತ ಕಂದು ಬಣ್ಣದ ದೇಹ, ಪುಟಾಣಿ ರೆಕ್ಕೆ ಹೊಂದಿದೆ. ಚಿಕ್ಕ ಬಾಲ, ಮೊಂಡು ಕೊಕ್ಕು ಇದೆ. ಗಂಡು ಹಕ್ಕಿಯ ಗಂಟಲಿನ ಮೇಲೆ ಹಳದಿ ಪಟ್ಟಿ ಇರುತ್ತದೆ. ಹೆಣ್ಣು ಹಕ್ಕಿಯಲ್ಲಿ ಈ ಹಳದಿ ಬಣ್ಣದ ಪಟ್ಟಿ ಪೇಲವವಾಗಿರುತ್ತದೆ. ಜೋಕಟ್ಟೆ ಬಳಿ ಪತ್ತೆಯಾದ ಹಕ್ಕಿಯ ಕೊರಳಲ್ಲಿದ್ದ ಹಳದಿ ಬಣ್ಣದ ಪಟ್ಟಿ ಸ್ವಲ್ಪ ಪೇಲವವಾಗಿದ್ದು, ಹಕ್ಕಿ ಹೆಣ್ಣು ಆಗಿರಬೇಕು ಅಥವಾ ತುಂಬ ಚಿಕ್ಕದು ಇರಬೇಕು ಎನ್ನುತ್ತಾರೆ ರೋಷನ್.
    ಕಾಳು, ಕ್ರಿಮಿ ಕೀಟ, ಹೂವಿನ ಮಕರಂದ ಇವುಗಳ ಮುಖ್ಯ ಆಹಾರ. ಸಲೀಂ ಅಲಿ ಅವರಿಗೆ ಪಕ್ಷಿಗಳ ಬಗ್ಗೆ ಆಸಕ್ತಿ ಕುದುರಿಸಲು ಈ ಪಕ್ಷಿಗಳೇ ಪ್ರೇರಣೆ. ಆದ್ದರಿಂದಲೇ ಇದು ಸಲೀಂ ಅಲಿಯವರ ಹಕ್ಕಿ ಎಂದೇ ಜನಪ್ರಿಯ.

    ಇಸಬೆಲಿಯನ್ ವೀಟಿಆರ್: ರೋಷನ್ ಕಾಮತ್ ಇತ್ತೀಚೆಗೆ ಸೆರೆಹಿಡಿದ ಇನ್ನೊಂದು ಅಪೂರ್ವ ಚಿತ್ರ ಇಸಬೆಲಿಯನ್ ವೀಟಿಆರ್. ನವೆಂಬರ್ 1ರಂದು ಬಜ್ಪೆ ವಿಮಾನ ನಿಲ್ದಾಣ ಸಮೀಪದ ಬೆಟ್ಟದಲ್ಲಿ ಇರುವ ಸಂದರ್ಭ ಈ ವಲಸೆ ಹಕ್ಕಿಯ ಚಿತ್ರವನ್ನು ರೋಷನ್ ಸೆರೆಹಿಡಿದಿದ್ದರು. ನವೆಂಬರ್ 5ರ ತನಕವೂ ಹಕ್ಕಿ ಈ ಪರಿಸರದಲ್ಲಿ ಇತ್ತು ಎನ್ನುತ್ತಾರೆ ಸ್ಥಳೀಯ ಪಕ್ಷಿ ವೀಕ್ಷಕರು. ಲಭ್ಯ ಮಾಹಿತಿ ಪ್ರಕಾರ ಇದು ಜಿಲ್ಲೆಯ ಪಕ್ಷಿ ವೀಕ್ಷಕರ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದ ಎರಡನೇ ಚಿತ್ರ. ಮೂರು ವರ್ಷದ ಹಿಂದೆ ಹಿರಿಯ ಪಕ್ಷಿ ವೀಕ್ಷಕ ಅರ್ನಾಲ್ಡ್ ಗೋವಿಯಸ್ ಇಸಬೆಲಿಯನ್ ವೀಟಿಆರ್ ಹಕ್ಕಿಯ ಚಿತ್ರವನ್ನು ಸೆರೆ ಹಿಡಿದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts