More

    ಬಿತ್ತಿದ ಜಮೀನುಗಳಿಗೆ ತಂಪೆರೆದ ವರುಣ, ಬೆಳೆಗಳಿಗೆ ಅನುಕೂಲ

    ಕನಕಗಿರಿ: ಮುಂಗಾರು ವೈಫಲ್ಯದಿಂದ ತಾಲೂಕು ವ್ಯಾಪ್ತಿಯಲ್ಲಿ ಹಿನ್ನೆಡೆಯಾಗಿದ್ದ ಕೃಷಿ ಚಟುವಟಿಕೆಗೆ ಕಳೆದ ಹತ್ತು ದಿನಗಳ ಹಿಂದೆ ಸುರಿದ ಅಲ್ಪ ಸ್ವಲ್ಪ ಮಳೆ ರೈತರನ್ನು ಬಿತ್ತನೆಗೆ ಮುಂದಾಗಿಸಿತ್ತು. ಅರೆಬರೆ ಹಸಿಯಲ್ಲಿಯೇ ರೈತರು ಬಿತ್ತನೆ ಮಾಡಿದ್ದು, ಬುಧವಾರ ಸಂಜೆ ಸುರಿದ ಮಳೆ ಭೂಮಿಯನ್ನು ಮತ್ತಷ್ಟು ತಂಪಾಗಿಸಿದೆ.

    ತಾಲೂಕು ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗೆ ಲಭ್ಯವಿರುವ 36,236 ಹೆಕ್ಟೇರ್ ಖುಷ್ಕಿ ಹಾಗೂ ಇತರ ಜಮೀನಿನ ಪೈಕಿ ಜುಲೈ ಆರಂಭದಲ್ಲಿ 9216 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು. ಇದು ಲಭ್ಯವಿರುವ ಕೃಷಿ ಜಮೀನಿನ (ನೀರಾವರಿಯೂ ಸೇರಿ) ಪ್ರಮಾಣದ ಕೇವಲ 25.4 ರಷ್ಟಾಗಿತ್ತು.

    ಇನ್ನೇನು ಮಳೆಯಾಗುವುದಿಲ್ಲ ಎಂದು ಕೈ ಚೆಲ್ಲಿ ಕುಳಿತಿದ್ದ ರೈತನಿಗೆ ಹತ್ತು ದಿನಗಳ ಹಿಂದೆ ಸುರಿದ ಮಳೆ ಮುಂದಿನ ದಿನಗಳಲ್ಲಿ ಮಳೆಯಾಗಬಹುದೆಂಬ ನಿರೀಕ್ಷೆ ಹುಟ್ಟು ಹಾಕಿತ್ತು. ಇದರಿಂದ ತೊಗರಿ, ಸಜ್ಜೆ ಬಿತ್ತನೆ ಪ್ರಮಾಣ ಹೆಚ್ಚಾಯಿತು. ಜು.11ರವೆಗೆ 12,261 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಇದು ಕೃಷಿ ಭೂಮಿಯ ಒಟ್ಟು ಶೇ.33.8 ರಷ್ಟಾದಂತಾಗಿದೆ.

    ಇದನ್ನೂ ಓದಿ: ಕೊಪ್ಪಳದಲ್ಲಿ ತಂಪೆರೆದ ವರುಣ

    ಆದರೆ, ಅರೆಬರೆ ಹಸಿಯಲ್ಲಿಯೇ ಖುಷ್ಕಿ ಜಮೀನಿನಲ್ಲಿ ಬಿತ್ತಿದ ರೈತನ ನಂಬಿಕೆಗೆ ಮಳೆರಾಯ ಹುಸಿ ಮಾಡಿಲ್ಲ. ಬುಧವಾರ ತಾಲೂಕು ವ್ಯಾಪ್ತಿಯಲ್ಲಿ ಸುಮಾರು ಎರಡ್ಮೂರು ತಾಸು ಮಳೆ ಸುರಿದಿದ್ದು, ಭೂಮಿ ಮತ್ತಷ್ಟು ಹಸಿಯಾಗಿದೆ. ಇದರಿಂದ ಚಿಗುರು ಮೂಡಿದ ಬೆಳೆಗಳಿಗೆ ಅನುಕೂಲವಾಗಲಿದೆ. ಕಳೆದ ಎರಡು ದಿನಗಳ ಹಿಂದೆ ಉಳುಮೆ ಜಮೀನು ಹೆಪ್ಪುಗಟ್ಟಿದಂತಾಗಿದೆ. ಗುರುವಾರವೂ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿರುವುದು 20 ದಿನಗಳವರೆಗೆ ಹಸಿಯಿದ್ದು, ಆಗ ಮತ್ತೊಂದು ಮಳೆಯಾದರೆ, ಫಸಲು ಕಾಣಬಹುದು ಎನ್ನುವ ಆಶಾಭಾವನೆ ರೈತರಲ್ಲಿ ಮೂಡಿಸಿದೆ.

    ಯಾವುದು ಎಷ್ಟು ಬಿತ್ತನೆ?

    ತಾಲೂಕಿನ ಮೂರು ಹೋಬಳಿಗಳ ಪೈಕಿ ಮೆಕ್ಕೆಜೋಳ 970 ಹೆಕ್ಟೇರ್, ಸಜ್ಜೆ 4370 ಹೆ., ನವಣೆ 788 ಹೆ, ತೊಗರಿ 3019 ಹೆ, ಹೆಸರು 22 ಹೆ, ಸೂರ್ಯಕಾಂತಿ 881 ಹೆ, ಎಳ್ಳು 17 ಹೆ, ಹತ್ತಿ 2189 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ, ತೇವಾಂಶ ಕೊರತೆಯಿಂದ ತಾಲೂಕಿನೆಲ್ಲೆಡೆ ಬಿತ್ತನೆಯಾಗಿರುವ ಹತ್ತಿ ಕೆಂಪು ರೋಗಕ್ಕೆ ತುತ್ತಾಗಿದ್ದು, ರೈತ ನಷ್ಟ ಅನುಭವಿಸಿದ್ದಾನೆ.

    ಬರಪೀಡಿತ ತಾಲೂಕು ಘೋಷಣೆ?

    ಇದುವರೆಗೂ ತಾಲೂಕು ವ್ಯಾಪ್ತಿಯಲ್ಲಿ ಸಮೃದ್ಧ ಮಳೆಯಾಗದೇ ಇರುವುದರಿಂದ ಬಿತ್ತನೆ ಪ್ರಮಾಣ ಶೇ.40 ದಾಟಿಲ್ಲ. ಇದರಿಂದ ತಾಲೂಕನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡುವ ಸಾಧ್ಯತೆಯಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

    ಈ ಹಿಂದೆ ಸುರಿದ ಮಳೆಗೆ, ದೇವರ ಮೇಲೆ ಭಾರ ಹಾಕಿ ಧೈರ್ಯ ಮಾಡಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದೆ. ಇದೀಗ ಮಳೆಯಾಗಿರುವುದು ಸಂತಸ ಮೂಡಿಸಿದೆ. ಇನ್ನೆರಡು ಒಳ್ಳೆಯ ಮಳೆಯಾದರೆ, ಫಸಲು ಕೈ ಸೇರುವ ಭರವಸೆಯಿದೆ.
    | ಹನುಮಂತಪ್ಪ, ಹಿರೇಖೇಡ ರೈತ

    ಕನಕಗಿರಿ ತಾಲೂಕಿನಲ್ಲಿ ಶೇ.40ಕ್ಕಿಂತ ಹೆಚ್ಚು ಭೂಮಿಯಲ್ಲಿ ಬಿತ್ತನೆಯಾಗಿದೆ. ಬುಧವಾರ, ಗುರುವಾರ ಸುರಿದ ಮಳೆಗೆ ಕಳೆದ ಎಂಟತ್ತು ದಿನಗಳ ಹಿಂದೆ ಬಿತ್ತಿದ ಜಮೀನಿಗೆ ಸಹಕಾರಿಯಾಗಲಿದೆ. ಮೆಕ್ಕೆಜೋಳ, ಸಜ್ಜೆ, ತೊಗರಿ ಮುಖ್ಯವಾಗಿ ಹೆಚ್ಚಿನ ರೀತಿಯಲ್ಲಿ ಬಿತ್ತಲಾಗಿದೆ. ಉತ್ತರ ಕರ್ನಾಟಕದಲ್ಲಿ ತಡವಾಗಿ ಮಳೆ ಆರಂಭವಾಗಿದ್ದು, ತಾಲೂಕು ಬರಪೀಡಿತ ಎಂದು ಸರ್ಕಾರದ ಮಟ್ಟದಲ್ಲಿ ಘೋಷಣೆಯಾಗಬೇಕು.
    | ಸಂತೋಷ ಪಟ್ಟದಕಲ್, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಗಂಗಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts