More

    ಬಿತ್ತನೆ ಬೀಜ, ಗೊಬ್ಬರ ಖರೀದಿಸುವಾಗ ಎಚ್ಚರ ವಹಿಸಿ, ರೈತರಿಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಸಲಹೆ

    ಬಳ್ಳಾರಿ: ಜಿಲ್ಲೆಯ ರೈತರು ಬಿತ್ತನೆ ಬೀಜ, ಗೊಬ್ಬರ ಮತ್ತು ಕೀಟನಾಶಕ ಖರೀದಿಸುವಾಗ ಎಚ್ಚರಿಕೆ ವಹಿಸಬೇಕೆಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ತಿಳಿಸಿದ್ದಾರೆ.

    ರೈತರು ಅಧಿಕೃತವಾಗಿ ಪರವಾನಗಿ ಪಡೆದಿರುವ ಮಾರಾಟ ಕೇಂದ್ರಗಳಲ್ಲೇ ಕೃಷಿ ಪರಿಕರಗಳನ್ನು ಖರೀದಿಸಬೇಕು. ಬಿತ್ತನೆ ಬೀಜ, ಗೊಬ್ಬರ ಮತ್ತು ಕೀಟನಾಶಕ ಖರೀದಿಸಿದಾಗ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಬಿತ್ತನೆ ಬೀಜ ಖರೀದಿ ರಸೀದಿಯಲ್ಲಿ ತಳಿ ಹೆಸರು, ಲಾಟ್ ಸಂಖ್ಯೆ, ಮಾರಾಟಗಾರ ಮತ್ತು ಉತ್ಪಾದಕರ ವಿಳಾಸ ಗಮನಿಸಬೇಕು. ಸ್ವಲ್ಪ ಪ್ರಮಾಣದ ಬೀಜ ಮತ್ತು ಬೀಜ ದೃಢೀಕರಣದ ಬಗ್ಗೆ ಲಗತ್ತಿಸಿದ ಟ್ಯಾಗ್‌ನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ತೆಗೆದಿಡಬೇಕೆಂದು ಸಲಹೆ ನೀಡಿದ್ದಾರೆ.

    ಗೊಬ್ಬರ ಖರೀದಿಸುವಾಗ ಸಮರ್ಪಕ ತೂಕ ಹಾಗೂ ಚೀಲವನ್ನು ಯಂತ್ರದಿಂದ ಹೊಲಿದಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಗೊಬ್ಬರ ಚೀಲದ ಮೇಲೆ ನಮೂದಿಸಿರುವ ಗರಿಷ್ಠ ಬೆಲೆಗಿಂತ ಹೆಚ್ಚಿಗೆ ಹಣ ನೀಡಬಾರದು. ರಸೀದಿಯಲ್ಲಿ ಗೊಬ್ಬರದ ಹೆಸರು, ಬ್ರಾಂಡ್ ಹೆಸರು ಮತ್ತು ಬ್ಯಾಚ್ ಸಂಖ್ಯೆ ನಮೂದಿಸಿರಬೇಕು. ಆಧಾರ್ ಸಂಖ್ಯೆ ನೀಡಿ ಪಿಒಎಸ್ ಮಷಿನ್ ಬಿಲ್ ತಪ್ಪದೆ ಪಡೆಯಬೇಕು. ಕೀಟನಾಶಕ ಖರೀದಿ ವೇಳೆ ಬಾಟಲಿ, ಟಿನ್ ಅಥವಾ ಪಾಲಿಥೀನ್ ಪೌಚ್ ಮೇಲೆ ತಯಾರಕರ ಹೆಸರು, ತಯಾರಿಸಿದ ದಿನಾಂಕ, ಕಾಲಾವಧಿ, ಬ್ಯಾಚ್ ಸಂಖ್ಯೆ ಹಾಗೂ ಎರಡು ತ್ರಿಕೋನ ಚಿಹ್ನೆ ಗಮನಿಸಬೇಕು.

    ನಕಲಿ ಬೀಜ, ಗೊಬ್ಬರ ಮತ್ತು ಕೀಟನಾಶಕ ತಯಾರಿಕೆ ಹಾಗೂ ಮಾರಾಟ ಮಾಡುವುದು ಗಮನಕ್ಕೆ ಬಂದರೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಪರಿವೀಕ್ಷಕರಿಗೆ ಲಿಖಿತವಾಗಿ ಇಲ್ಲವೇ ದೂರವಾಣಿ ಮೂಲಕ ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು. ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts