More

    ಬಿತ್ತನೆ ಮಾಡದಿದ್ದರೂ ರೈತರ ಹೆಸರಲ್ಲಿ ಜೋಳ ಖರೀದಿ: ಸಿರಗುಪ್ಪ ತಾಪಂ ಸಭೆಯಲ್ಲಿ ಶಾಸಕ ಸೋಮಲಿಂಗಪ್ಪ ಪ್ರಸ್ತಾಪ

    ಸಿರಗುಪ್ಪ: ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಶಾಸಕ ಎಂ.ಎಸ್.ಸೋಮಲಿಂಗಪ್ಪ ನೇತೃತ್ವದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಜೋಳ ಖರೀದಿಯಲ್ಲಿ ಅಕ್ರಮ ನಡೆದಿರುವ ಕುರಿತು ಗಂಭೀರ ಚರ್ಚೆ ನಡೆಯಿತು.

    ಸಭೆ ಆರಂಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಜೀರ್ ಅಹ್ಮದ್, ಪ್ರಸಕ್ತ ವರ್ಷ ಜೋಳಕ್ಕೆ ಸರ್ಕಾರದಿಂದ ಉತ್ತಮ ಬೆಲೆ ಇರುವ ಕಾರಣ ಬಿತ್ತನೆ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಆಗ ಮಧ್ಯಪ್ರವೇಶಿಸಿದ ಶಾಸಕ ಸೋಮಲಿಂಗಪ್ಪ, ಕಳೆದ ವರ್ಷ ತಾಲೂಕಿನಲ್ಲಿ ಖರೀದಿ ಕೇಂದ್ರ ಆರಂಭಿಸಿ ಸುಮಾರು 55 ಸಾವಿರ ಕ್ವಿಂಟಾಲ್‌ಗಿಂತ ಹೆಚ್ಚು ಜೋಳ ಖರೀದಿಸಲಾಗಿದೆ. ಕಳೆದ ವರ್ಷ ಮೂರು ಸಾವಿರ ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆ ಆಗಿದೆ ಎನ್ನುವ ಮಾಹಿತಿ ಇದೆ. ಆದರೆ ಕೃಷಿ ಇಲಾಖೆ ಹಿಂಗಾರು ಮತ್ತು ಮುಂಗಾರಿನಲ್ಲಿ ಏಳು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಮಾಹಿತಿ ನೀಡುವ ಮೂಲಕ ಸರ್ಕಾರಕ್ಕೆ ಮೋಸ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಸಾಕ್ಷಿ ಎನ್ನುವಂತೆ ಕೆಂಚಗುಡ್ಡದಲ್ಲಿ 250 ಎಕರೆಯಲ್ಲಿ ಜೋಳ ಬಿತ್ತನೆ ಮಾಡಲಾಗಿದೆ ಎಂದು ಖರೀದಿ ಮಾಡಲಾಗಿದೆ. ಆದರೆ ಇಲ್ಲಿ ಒಂದೇ ಒಂದು ಎಕರೆ ಜೋಳ ಬಿತ್ತನೆ ಮಾಡಿಲ್ಲ. ಹಾಗಾದರೆ ಈ ರೈತರ ಹೆಸರಿನಲ್ಲಿ ಜೋಳ ಖರೀದಿ ಮಾಡಿದ್ದಾದರೂ ಹೇಗೆ? ಎಂದು ಶಾಸಕರು ಪ್ರಶ್ನಿಸಿದರು.

    ಈ ವೇಳೆ ನಾಮನಿರ್ದೇಶಿತ ಸದಸ್ಯ ದಿವಾಕರಗೌಡ, ನೆರೆಯ ಆಂಧ್ರದಲ್ಲಿ 1200 ರಿಂದ 1500 ರೂ.ಗೆ ಜೋಳ ಖರೀದಿಸಿ ತಾಲೂಕಿನಲ್ಲಿ 2650 ರೂ.ಗೆ ಮಾರಾಟ ಮಾಡುವ ಮೂಲಕ ಸರ್ಕಾರದ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು. ಆಗ ಸಮಾಜಾಯಿಷಿ ನೀಡಲು ಅಧಿಕಾರಿ ನಜೀರ್ ಅಹ್ಮದ್ ಮುಂದಾದಾಗ, ಮುಂದೆ ಇಂಥ ಪ್ರಕರಣಗಳು ಮರುಕಳಿಸದೆ ನೋಡಿಕೊಳ್ಳಿ ಎಂದು ಎಚ್ಚರಿಸುವ ಮೂಲಕ ಶಾಸಕರು ಜೋಳದ ವಿಷಯಕ್ಕೆ ವಿರಾಮ ಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts