More

    ಆರೋಪಿಗಳನ್ನು ಶೀಘ್ರ ಪತ್ತೆಗೆ ದಕ್ಷಿಣ ವಲಯ ಐಜಿ ಸೂಚನೆ

    ಗುಂಡ್ಲುಪೇಟೆ: ಪಟ್ಟಣದ ಜಾಕೀರ್ ಹುಸೇನ್ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಮಾರಣಹೋಮ ಇಡೀ ತಾಲೂಕನ್ನೇ ತಲ್ಲಣಗೊಳಿಸುವಂತೆ ಮಾಡಿದ್ದು, ಸ್ಥಳಕ್ಕೆ ದಕ್ಷಿಣ ವಲಯ ಐಜಿ ಭೇಟಿ ನೀಡಿ ಆರೋಪಿಗಳ ಶೀಘ್ರ ಪತ್ತೆಗೆ ಆದೇಶ ನೀಡಿದ್ದಾರೆ.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮಂಗಳವಾರ ರಾತ್ರಿ ಭೇಟಿ ನೀಡಿದ ದಕ್ಷಿಣ ವಲಯ ಐಜಿ ವಿಪುಲ್ ಕುಮಾರ್ ಗಾಯಾಳುಗಳಿಂದ ಘಟನೆಯ ಮಾಹಿತಿ ಪಡೆದರು. ಬುಧವಾರವೂ ಆಗಮಿಸಿದ ವಿಪುಲ್ ಕುಮಾರ್, ಮಾಧ್ಯಮದವರೊಂದಿಗೆ ಮಾತನಾಡಿ, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲಾಗುವುದು. ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಲಾಗುವುದು ಎಂದು ತಿಳಿಸಿದರು.

    ನೆರೆ ರಾಜ್ಯಗಳಿಗೆ ಅಕ್ರಮ ಜಾನುವಾರು ಸಾಗಾಣೆ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಇದ್ದ ತೊಡಕಿನಿಂದ ವೈಮನಸ್ಸಿತ್ತು. ಮೀಟರ್ ಬಡ್ಡಿ ವ್ಯವಹಾರದಲ್ಲಿ ವಿವಾದವಿತ್ತು ಎನ್ನಲಾಗಿದೆ. ಘಟನೆಯಲ್ಲಿ ಪುರಸಭೆ ಮಾಜಿ ಸದಸ್ಯ ನೂರುಲ್ಲಾ ಅವರ ಮೂವರು ಸಹೋದರರು ಸಾವಿಗೀಡಾಗಿದ್ದಾರೆ. ಇನ್ನೊಬ್ಬ ಸಹೋದರ ಸೇರಿದಂತೆ ಇನ್ನೂ ಐವರು ತೀವ್ರ ಗಾಯಗೊಂಡು ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು ಇನ್ನೂ ಮೂವರು ಅಪಾಯದಿಂದ ಪಾರಾಗಿದ್ದಾರೆ ಎಂದು ಎಸ್‌ಪಿ ಎಚ್.ಡಿ.ಆನಂದಕುಮಾರ್ ತಿಳಿಸಿದರು.

    ಈಗಾಗಲೇ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು ಉಳಿದ ಆರೋಪಿಗಳ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಫೊರೆನ್ಸಿಕ್ ತಜ್ಞರು ಎಲ್ಲ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಮೊಬೈಲ್ ಟವರ್ ಪತ್ತೆ ಹಾಗೂ ವಿಶ್ಲೇಷಣೆಗೆ ತಾಂತ್ರಿಕ ತಂಡವೂ ನೆರವಾಗಲಿದೆ. ದುಷ್ಕೃತ್ಯಕ್ಕೆ ಬಳಸಿದ ವಾಹನಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಒಬ್ಬ ಡಿವೈಎಸ್‌ಪಿ ನೇತೃತ್ವದಲ್ಲಿ ರಾಜ್ಯ ಹಾಗೂ ಜಿಲ್ಲಾ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ ಎಂದರು.

    ಮಧ್ಯಾಹ್ನದ ವೇಳೆಗೆ ಮೂವರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರ ವಶಕ್ಕೆ ನೀಡಲಾಯಿತು. ಜಿಲ್ಲೆಯ ವಿವಿಧ ಠಾಣೆಗಳ ಅಧಿಕಾರಿಗಳು ಹಾಗೂ ಸುಮಾರು 70ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಸಿ ಬಂದೋಬಸ್ತ್ ಮಾಡಲಾಗಿತ್ತು.

    ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷ ಕೆ.ಎಸ್. ಮಹೇಶ್, ಕಾಂಗ್ರೆಸ್ ಮುಖಂಡ ಎಚ್.ಎಂ. ಗಣೇಶ್ ಪ್ರಸಾದ್ ಭೇಟಿ ನೀಡಿ ಮೃತರ ಕುಂಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

    ನಂತರ ಗಣೇಶ್ ಪ್ರಸಾದ್ ಮಾತನಾಡಿ, ಶಾಂತವಾಗಿದ್ದ ಗುಂಡ್ಲುಪೇಟೆಯಲ್ಲಿ ರಕ್ತಸಿಕ್ತ ಅಧ್ಯಾಯ ಪ್ರಾರಂಭವಾಗಿರುವುದು ದುರದೃಷ್ಟಕರ. ಕೇರಳಕ್ಕೆ ಜಾನುವಾರು ಸಾಗಾಣಿಕೆ ವಿಚಾರದಲ್ಲಿ ಉಂಟಾದ ವೈಷಮ್ಯವೇ ಘಟನೆಗೆ ಕಾರಣವಾಗಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಪೊಲೀಸ್ ವೈಫಲ್ಯ ಎದ್ದುಕಾಣುತ್ತಿದೆ. ರಾಜಕಾರಣಿಯೊಬ್ಬರನ್ನು ರಕ್ಷಿಸುವ ಸಲುವಾಗಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts