More

    ಮಾರುಕಟ್ಟೆ ಗಾದಿ ಏರಲು ತೀವ್ರ ಕಸರತ್ತು

    ಬೆಳಗಾವಿ: ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ(ಎಪಿಎಂಸಿ) ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕೊನೆಯ(20 ತಿಂಗಳ) ಅವಧಿಗಾಗಿ ಸದಸ್ಯರಲ್ಲಿ ತೀವ್ರ ಪೈಪೋಟಿ ಏರ್ಪಟಿದೆ. ಇತ್ತ ಸರ್ಕಾರವು ಚುನಾವಣೆ ಮುನ್ನವೇ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಿ ಆದೇಶಿಸಿರುವುದು ಭಾರಿ ಅಚ್ಚರಿಗೆ ಕಾರಣವಾಗಿದೆ.

    ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಕೃಷಿ ಉತ್ಪನ್ನಗಳ ಮಾರಾಟ ಕೇಂದ್ರ ಬಿಂದುವಾಗಿರುವ ಬೆಳಗಾವಿ ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ
    ಜೂ.17ಕ್ಕೆ ಪೂರ್ಣಗೊಳ್ಳಲಿದೆ. ಇದೀಗ ಕೊನೆಯ ಅವಧಿಗಾಗಿ 14 ಚುನಾಯಿತ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧೆ ಏರ್ಪಟ್ಟಿದ್ದು, ರಾಜಕೀಯ ಪಕ್ಷಗಳ
    ಬೆಂಬಲಿತ ಸದಸ್ಯರು ಇದೀಗ ತಮ್ಮ ನಾಯಕರು, ಶಾಸಕರ ಬೆನ್ನಿಗೆ ಬಿದ್ದಿದ್ದಾರೆ.

    ಬೇಕಿದೆ ಸದಸ್ಯರ ಬೆಂಬಲ: 14 ಚುನಾಯಿತ ಸದಸ್ಯ ಸ್ಥಾನಗಳನ್ನು ಹೊಂದಿರುವ ಎಪಿಎಂಸಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಲು ಬಹು ಮತಕ್ಕೆ 8 ಸದಸ್ಯರ ಬೆಂಬಲ ಅಗತ್ಯವಿದೆ. ಆದರೆ, ಬಿಜೆಪಿ, ಕಾಂಗ್ರೆಸ್ ಮತ್ತು ಎಂಇಎಸ್‌ಗೆ ಯಾವುದೇ ಸ್ಪಷ್ಟ ಬಹುಮತವಿಲ್ಲ. ಇದೀಗ ಸರ್ಕಾರ ಮೂವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿಸಿದ್ದು ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ 2 ರಿಂದ 5ಕ್ಕೆ ಏರಿಕೆಯಾಗಿದೆ. ಹಾಗಾಗಿ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ 5 ಸದಸ್ಯರು ಸೇರಿ ಒಟ್ಟಾರೆ ಸಂಖ್ಯೆ 10ಕ್ಕೆ ಏರಿಕೆಯಾಗುತ್ತದೆ. ಕಾಂಗ್ರೆಸ್ ಸಂಖ್ಯೆ 6ಕ್ಕೆ ಸೀಮಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ, ಉಪಾಧ್ಯಕ್ಷರಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

    ಸದಸ್ಯರಲ್ಲಿಯೂ ಕುತೂಹಲ: ಕೃಷಿ ಉತ್ನನ್ನ ಮಾರುಕಟ್ಟೆ ಸಮಿತಿಯ ಮೊದಲ 20 ತಿಂಗಳ ಅವಧಿಗಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ವಿಠ್ಠಲ ಜಾಧವ ಅಧ್ಯಕ್ಷ ಹಾಗೂ ಬಿಜೆಪಿ ಬೆಂಬಲಿತ ರೇಣುಕಾ ಪಾಟೀಲ ಉಪಾಧ್ಯಕ್ಷರಾಗಿದ್ದರು. ಎರಡನೇ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತ ಆನಂದ ಪಾಟೀಲ ಅಧ್ಯಕ್ಷರಾಗಿ ಮತ್ತು ಸುಧೀರ ಗಡ್ಡೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊನೆಯ ಹಾಗೂ ಅಂತಿಮ ಅವಧಿಗಾಗಿ ಯಾರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂಬ ಕುತೂಹಲ ಸದಸ್ಯರಲ್ಲಿಯೂ ಮೂಡಿದೆ.

    ಜಾರಕಿಹೊಳಿ ಸಹೋದರರ ತೀರ್ಮಾನವೇ ಫೈನಲ್: ಒಂದು ವೇಳೆ ಎಪಿಎಂಸಿ ಒಟ್ಟು 14 ಚುನಾಯಿತ ಸದಸ್ಯರು ರಾಜಕೀಯ ಹೊರತಾಗಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ಮುಂದಾದರೆ ಜಾರಕಿಹೊಳಿ ಸಹೋದರರ ಬೆಂಬಲಿತ ಅಭ್ಯರ್ಥಿಗಳೇ ಕೊನೆಯ 20 ತಿಂಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಒಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕ ಸತೀಶ ಜಾರಕಿಹೊಳಿ ಕೈಗೊಳ್ಳುವ ನಿರ್ಧಾರದ ಮೇಲೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಅವಿರೋಧ ಆಯ್ಕೆಗೆ ನಾಯಕರು ಮುಂದಾಗಿದ್ದಾರೆ ಎಂದು ಎಪಿಎಂಸಿ ಸದಸ್ಯರು ತಿಳಿಸಿದ್ದಾರೆ.

    ಬೆಳಗಾವಿ ಎಪಿಎಂಸಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಸಂಬಂಧ ಶೀಘ್ರದಲ್ಲೇ ಹಾಲಿ ಮತ್ತು ಮಾಜಿ ಶಾಸಕರು, ಎಪಿಎಂಸಿಯ ಚುನಾಯಿತ ಸದಸ್ಯರ ಸಭೆಯನ್ನು ಕರೆದು ಒಮ್ಮತ ಅಭ್ಯರ್ಥಿಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಗುವುದು. ಎಲ್ಲ ಸದಸ್ಯರು ಒಗ್ಗಟ್ಟಿನಿಂದಿರುವ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಆಗಲಿದ್ದಾರೆ.
    | ಸತೀಶ ಜಾರಕಿಹೊಳಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯದರ್ಶಿ

    ಬೆಳಗಾವಿ ಎಪಿಎಂಸಿಯ 5 ವರ್ಷದ ಅವಧಿಯ ಕೊನೆಯ 20 ತಿಂಗಳ ಅವಧಿಗಾಗಿ ತಾಲೂಕಿನ ಮುತಗಾ
    ಗ್ರಾಮದ ಅಪ್ಪಣ್ಣ ಚೌಗುಲೆ, ವೀರನಕೊಪ್ಪ ಗ್ರಾಮದ ನಿಂಗಪ್ಪ ರಾಮಪುರ ಮತ್ತು ರಾಮದೇವ ಗಲ್ಲಿಯ ರೇಷ್ಮಾ ಪಾಟೀಲ ಅವರನ್ನು ನಾಮ ನಿರ್ದೇಶನ ಸದಸ್ಯರನಾಗಿಸ್ನಿ ನೇಮಿಸಿ ಸರ್ಕಾರ ಮೇ 20ಕ್ಕೆ ಆದೇಶಿಸಿದೆ. ಜೂನ್ 15ರಂದು ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆ ಸಂಬಂಧ ಚುನಾವಣೆ ನಡೆಯಲಿದೆ.
    | ಡಾ.ಕೆ.ಕೋಡಿಗೌಡ ಎಪಿಎಂಸಿ ಕಾರ್ಯದರ್ಶಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts