

ಚೆನ್ನೈ: ಕಳೆದ ವರ್ಷದ ಕೊನೆಯಲ್ಲಿ ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಸೂರ್ಯ ಅಭಿನಯದ ತಮಿಳಿನ 'ಸೂರರೈ ಪೋಟ್ರು' ಚಿತ್ರವು ಇದೀಗ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಲಗ್ಗೆ ಇಟ್ಟಿದೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ ಸೇರಿದಂತೆ ಹಲವು ವಿಭಾಗಗಳಲ್ಲಿ ಈ ಚಿತ್ರವು ಸ್ಪರ್ಧೆಸಿದೆ.
ಇದಕ್ಕೂ ಮುನ್ನ ವಿದ್ಯಾ ಬಾಲನ್ ಅಭಿನಯದ 'ನಟ್ಕಟ್' ಎಂಬ ಹಿಂದಿ ಕಿರುಚಿತ್ರವು ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಆಯ್ಕೆಯಾಗಿತ್ತು. ಇದೀಗ ಆಸ್ಕರ್ ಪ್ರಶಸ್ತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿರುವ ಹಿನ್ನೆಲೆಯಲ್ಲಿ ಇದೀಗ 'ಸೂರರೈ ಪೋಟ್ರು' ಚಿತ್ರ ಸ್ಪರ್ಧಿಸಿದೆ.
ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ ಸೇರಿದಂತೆ ಹಲವರು ವಿಭಾಗಗಳಲ್ಲಿ 'ಸೂರರೈ ಪೋಟ್ರು' ಚಿತ್ರವು ಸ್ಪರ್ಧಿಸಿದ್ದು, ಈ ಪೈಕಿ ಯಾವ ವಿಭಾಗದಲ್ಲಿ ಪ್ರಶಸ್ತಿ ಸಿಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.
ದುಬಾರಿಯಾಗಿದ ಗಗನಯಾನವನ್ನು ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡಿದ ಏರ್ ಡೆಕ್ಕನ್ನ ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಮತ್ತು ಸಾಹಸಗಳನ್ನು ಆಧರಿಸಿ ಈ ಚಿತ್ರ ಮಾಡಲಾಗಿದ್ದು, ಸೂರ್ಯ ಅವರು ಕ್ಯಾಪ್ಟನ್ ಗೋಪಿನಾಥ್ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಸೂರರೈ ಪೋಟ್ರು' ಚಿತ್ರದಲ್ಲಿ ಸೂರ್ಯ ಜತೆಗೆ, ಅಪರ್ಣಾ ಬಾಲಮುರಳಿ, ಪರೇಶ್ ರಾವಲ್, ಊರ್ವಶಿ, ಕರುಣಾಸ್ ಮುಂತಾದವರು ನಟಿಸಿದ್ದು, ಸುಧಾ ಕೊಂಗರಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂಗೀತ ಈ ಚಿತ್ರಕ್ಕಿದೆ.