More

    ಕೈಗಾರಿಕಾ ಕ್ರಾಂತಿಗೆ ಶೀಘ್ರದಲ್ಲೇ ಮುನ್ನುಡಿ

    ಹುಬ್ಬಳ್ಳಿ: ಕೈಗಾರಿಕೀಕರಣ, ಹೆಚ್ಚಿನ ಉದ್ಯೋಗಾವಕಾಶಕ್ಕಾಗಿ ದಶಕಗಳಿಂದ ತಹತಹಿಸುತ್ತಿರುವ ಧಾರವಾಡ ಜಿಲ್ಲೆಯಲ್ಲಿ, ಹೆಚ್ಚು ಜನರಿಗೆ ಉದ್ಯೋಗ ನೀಡಬಲ್ಲ ಉದ್ಯಮವೊಂದು ಸ್ಥಾಪನೆಯಾಗುವ ಕಾಲ ಸನ್ನಿಹಿತವಾಗಿದೆ. ಪ್ರಸಿದ್ಧ ಏಕಸ್ ಕಂಪನಿಯು ಧಾರವಾಡ ತಾಲೂಕು ಇಟಿಗಟ್ಟಿ ಬಳಿ ಬೃಹತ್ ಪ್ರಮಾಣದ ಇಲೆಕ್ಟ್ರಾನಿಕ್ಸ್ ಕ್ಲಸ್ಟರ್ ಸ್ಥಾಪನೆಗಾಗಿ ಕಟ್ಟಡ ನಿರ್ಮಾಣ ಆರಂಭಕ್ಕೆ ದಿನಾಂಕ ನಿಗದಿಪಡಿಸಿದೆ.

    ಏಕಸ್ ಎಸ್​ಇಜೆಡ್ ಪ್ರೖೆ.ಲಿ. ಕಂಪನಿಯು ‘ಕನ್​ಸ್ಯೂಮರ್ ಇಲೆಕ್ಟ್ರಾನಿಕ್ಸ್ ಮತ್ತು ಡ್ಯುರೆಬಲ್ಸ್ ಗೂಡ್ಸ್’ (ಸಿಇಡಿಜಿ) ಉದ್ಯಮ ಗುಚ್ಛಕ್ಕೆ (ಕ್ಲಸ್ಟರ್) ಆ.16ರಂದು ಭೂಮಿಪೂಜೆ ನೆರವೇರಿಸಲಿದೆ.

    ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಷಿನ್, ಏರ್ ಕಂಡೀಷನರ್, ಸುಧಾರಿತ ಅಡುಗೆಮನೆ ಉಪಕರಣಗಳು ಸೇರಿದಂತೆ ಹತ್ತು ಹಲವು ವಸ್ತುಗಳನ್ನು ಸಿಇಡಿಜಿ ಉದ್ಯಮದಲ್ಲಿ ಉತ್ಪಾದಿಸಲಾಗುತ್ತದೆ. ಅಂದರೆ, ಇಲ್ಲಿ ಸಾಮಾನ್ಯ ಹಂತದಿಂದ ಉನ್ನತ ಶಿಕ್ಷಣ ಪಡೆದ ಎಲ್ಲರಿಗೂ ಅರ್ಹತೆ ಆಧಾರದಲ್ಲಿ ಉದ್ಯೋಗ ಸಿಗಲಿದೆ. ಅಷ್ಟೇ ಅಲ್ಲ; ಧಾರವಾಡದಲ್ಲಿ ತಯಾರಾಗುವ ಉಪಕರಣಗಳು ವಿವಿಧ ದೇಶಗಳ ಮಾರುಕಟ್ಟೆಗಳಲ್ಲಿ ಗ್ರಾಹಕರ ಕಣ್ಮನ ಸೆಳೆಯಲಿವೆ!

    ಈಗಾಗಲೇ ಕೆಲವು ದೊಡ್ಡ ಕೈಗಾರಿಕೆಗಳು ಧಾರವಾಡ ಜಿಲ್ಲೆಯಲ್ಲಿದ್ದು, ಸಾವಿರಾರು ಜನರಿಗೆ ಕೆಲಸ ನೀಡಿವೆ. ಈಗ, ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಉದ್ಯಮಿ ಅರವಿಂದ ಮೆಳ್ಳಿಗೇರಿ ಅವರ ನೇತೃತ್ವದ ಏಕಸ್ ಕಂಪನಿ ಬರುತ್ತಿದೆ. ಈ ಕಂಪನಿ ಬೆಳಗಾವಿಯಲ್ಲಿ ಬೃಹತ್ ಘಟಕ ಹೊಂದಿದ್ದು, ವಿಮಾನಗಳ ಬಿಡಿ ಭಾಗಗಳನ್ನು ತಯಾರಿಸುತ್ತಿದೆ. ಅಪಾರ ಅನುಭವ ಹೊಂದಿರುವ ಆಡಳಿತ ಮಂಡಳಿ, ಧಾರವಾಡದಲ್ಲಿ ಸ್ಥಾಪಿಸುವ ಉದ್ಯಮವನ್ನೂ ಉತ್ತುಂಗಕ್ಕೆ ಕೊಂಡೊಯ್ಯುವುದರೊಂದಿಗೆ ಸುತ್ತಮುತ್ತ ಇತರ ಘಟಕಗಳ ಸ್ಥಾಪನೆಗೆ ಪ್ರೇರಣೆಯಾಗಿ ಈ ಭಾಗದಲ್ಲಿ ಕೈಗಾರಿಕಾ ಕ್ರಾಂತಿಗೆ ದಾರಿ ಮಾಡಿಕೊಡುತ್ತದೆ ಎಂದು ಭಾವಿಸಲಾಗಿದೆ.

    400 ಎಕರೆಯಲ್ಲಿ: ಧಾರವಾಡ ತಾಲೂಕು ಇಟಿಗಟ್ಟಿ ಬಳಿ 400 ಎಕರೆ ಭೂಮಿಯನ್ನು ಏಕಸ್ ಎಸ್​ಇಜೆಡ್​ಗೆ ರಾಜ್ಯ ಸರ್ಕಾರ ಕೆಐಎಡಿಬಿ ಮೂಲಕ ಒದಗಿಸಿದೆ. ಮುಂಬರುವ ದಿನಗಳಲ್ಲಿ 1350 ಕೋಟಿ ರೂ.ಗಳನ್ನು ಕಂಪನಿ ಇಲ್ಲಿ ಹೂಡಿಕೆ ಮಾಡಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಹೂಡಿಕೆ ಸಹ ಮಾಡಬಹುದಾಗಿದೆ. ಪೂರ್ಣ ಪ್ರಮಾಣದಲ್ಲಿ ಕಂಪನಿ ಆರಂಭವಾದಾಗ 20 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

    ಕಂಪನಿಯು ತನ್ನದೇ ಆದ ಕೌಶಲಾಭಿವೃದ್ಧಿ ಕೇಂದ್ರವನ್ನೂ ಹೊಂದಿರುವುದರಿಂದ ಕಾಲ ಕಾಲಕ್ಕೆ ತನ್ನ ಉದ್ಯೋಗಿಗಳ ನೈಪುಣ್ಯವನ್ನು ಹೆಚ್ಚಿಸಿಕೊಳ್ಳುತ್ತ, ಜಾಗತಿಕ ಮಟ್ಟದ ಬೇಡಿಕೆಗೆ ತಕ್ಕಂತೆ ನವೀನ ಉತ್ಪನ್ನಗಳನ್ನು ತಯಾರಿಸುವ ಮೂಲಕ ಸುಸ್ಥಿರ ಬೆಳವಣಿಗೆ ಸಾಧಿಸುವ ಸಾಮರ್ಥ್ಯ ಹೊಂದಿರಲಿದೆ.

    ಬಿಎಸ್​ವೈ, ಶೆಟ್ಟರ್ ಯತ್ನ: ಹಿಂದಿನ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ವಿಶೇಷ ಕಾಳಜಿ ವಹಿಸಿ ಆಯೋಜಿಸಿದ್ದ ‘ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ’ ಹೂಡಿಕೆದಾರರ ಸಮಾವೇಶ ಏರ್ಪಡಿಸಿದ್ದರು. ಸ್ವತಃ ಶೆಟ್ಟರ್ ಅವರು ಅರವಿಂದ ಮೆಳ್ಳಿಗೇರಿ ಅವರನ್ನು ಆಹ್ವಾನಿಸಿದ್ದರು. ನಂತರದಲ್ಲಿ 2020ರ ಅಕ್ಟೋಬರ್​ದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ಸಮಿತಿಯು ಏಕಸ್ ಎಸ್​ಇಜೆಡ್ ಪ್ರಸ್ತಾವಕ್ಕೆ ಅಸ್ತು ಎಂದಿತ್ತು. ಹೀಗಾಗಿ, ಧಾರವಾಡದಲ್ಲಿ ಈ ಕಂಪನಿ ಸ್ಥಾಪನೆಯಾಗುವುದರಲ್ಲಿ ಬಿಎಸ್​ವೈ ಮತ್ತು ಜಗದೀಶ ಶೆಟ್ಟರ್ ಇಬ್ಬರದ್ದೂ ಕೊಡುಗೆ ಇದೆ.

    ಏಕಸ್ ಕಂಪನಿಯವರು ಧಾರವಾಡ ತಾಲೂಕು ಇಟಿಗಟ್ಟಿಯಲ್ಲಿ 16ರಂದು ಭೂಮಿಪೂಜೆ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ. ಈ ಎಸ್​ಇಜೆಡ್ ಬೃಹತ್ ಕೈಗಾರಿಕೆ ವ್ಯಾಪ್ತಿಗೆ ಬರುತ್ತದೆ. ಸರ್ಕಾರ ಮತ್ತು ಜಿಲ್ಲಾಡಳಿತದ ಸೂಚನೆ ಪ್ರಕಾರ ಕಂಪನಿಯವರಿಗೆ ಎಲ್ಲ ರೀತಿಯ ಸಹಕಾರವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ನೀಡುತ್ತಿದ್ದೇವೆ.

    | ದೊಡ್ಡಬಸವರಾಜು, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts