More

    ತಾಯಿ ನಂತರ ಮಗನಿಗೆ ಸೋಂಕು ದೃಢ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ಜಿಲ್ಲೆಯಲ್ಲಿ ಭಾನುವಾರ ಮೊತ್ತೊಂದು ಕರೊನಾ ಪಾಸಿಟಿವ್ ಪತ್ತೆಯಾಗಿದ್ದು, ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

    ಶಿಗ್ಗಾಂವಿ ಪಟ್ಟಣದ ಗೌಡರ ಓಣಿಯ ನಿವಾಸಿ 46 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿಯ 72 ವರ್ಷದ ತಾಯಿಗೆ ಈಗಾಗಲೇ ಸೋಂಕು ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಸೋಂಕಿತ ವ್ಯಕ್ತಿಯ ತಾಯಿಗೆ ಜೂ. 8ರಂದು ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಉಲ್ಬಣಗೊಂಡ ಕಾರಣ ಶಿಗ್ಗಾಂವಿ ಪಟ್ಟಣದ ತೋಟಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆದುಕೊಂಡು ಹೋಗಿದ್ದರು. ಮರುದಿನ ಜೂ. 9ರಂದು ಸ್ವಂತ ಕಾರು ಕೆಎ-30, ಎಂ-1435ರಲ್ಲಿ ಹುಬ್ಬಳ್ಳಿಯ ತತ್ತ್ವದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದರು. ಜ್ವರ ಜಾಸ್ತಿಯಾದಾಗ ಮಹಿಳೆಯನ್ನು ಕಿಮ್ಸ್​ಗೆ ದಾಖಲು ಮಾಡಲಾಗಿತ್ತು. ಮಹಿಳೆಯ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆ ಮಾಡಿದಾಗ ಶುಕ್ರವಾರ ಪಾಸಿಟಿವ್ ಬಂದಿತ್ತು. ತಾಯಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಜೂ. 10ರಂದು ಹುಬ್ಬಳ್ಳಿ ಕಿಮ್ಸ್​ನಲ್ಲಿ ಮಗನ ಗಂಟಲ ದ್ರವವನ್ನು ಪರೀಕ್ಷೆಗೆ ಪಡೆಯಲಾಗಿತ್ತು. ಅದರ ವರದಿ ಭಾನುವಾರ ಬಂದಿದ್ದು, ಪಾಸಿಟಿವ್ ಆಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ತಾಯಿ ಹುಬ್ಬಳ್ಳಿ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಧಾರವಾಡ ಜಿಲ್ಲೆ ವ್ಯಾಪ್ತಿಗೆ ಸೇರಿದೆ. ಆದರೆ, ಮಗನನ್ನು ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವ್ಯಕ್ತಿ ವಾಸವಿದ್ದ ಶಿಗ್ಗಾಂವಿ ಗೌಡ್ರ ಓಣಿಯ ವೀರಭದ್ರೇಶ್ವರ ದೇವಸ್ಥಾನ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದೆ. 200 ಮೀಟರ್ ಪ್ರದೇಶವನ್ನು ಬಫರ್ ಜೋನ್ ಎಂದು ಘೊಷಿಸಿ, ಶಿಗ್ಗಾಂವಿ ತಹಸೀಲ್ದಾರ್​ರನ್ನು ಇನ್ಸಿಂಡೆಂಟ್ ಕಮಾಂಡರ್ ಎಂದು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ: ಹಾವೇರಿ ತಾಲೂಕು ಹೊಸರಿತ್ತಿ ಗ್ರಾಮದ 68 ವರ್ಷದ ವೃದ್ಧೆ ಪುಟ್ಟಮ್ಮ ಕೊಟ್ರಪ್ಪ ಗೋಪಾಳಿ ವಯೋಸಹಜ ಕಾಯಿಲೆಯಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಕೋವಿಡ್ ಮಾರ್ಗಸೂಚಿಯಂತೆ ಮೃತಳ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದ್ದು, ಭಾನುವಾರ ತಹಸೀಲ್ದಾರ್ ಶಂಕರ ಜಿ.ಎಸ್., ಕಂದಾಯ ನಿರೀಕ್ಷಕ ಆರ್.ಐ. ಮಲ್ಲಾಡದ, ಗ್ರಾಮಲೆಕ್ಕಾಧಿಕಾರಿ ಬಸಯ್ಯ ಮಠಪತಿ, ಟಿಎಚ್​ಒ ಡಾ. ಪ್ರಭಾಕರ ಕುಂದೂರ ನೇತೃತ್ವದಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಗಂಟಲ ದ್ರವದ ಪರೀಕ್ಷಾ ವರದಿ ಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts