More

    ಒಬ್ಬರ ಹಣ ಇನ್ನೊಬ್ಬರ ಖಾತೆಗೆ!

    ಬಾವನಸೌಂದತ್ತಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ಪ್ರತಿವರ್ಷ ಕೃಷ್ಣಾ ನದಿ ಪ್ರವಾಹಕ್ಕೆ ನಲುಗುತ್ತದೆ. ಹಾನಿ ಅನುಭವಿಸಿದ ಜನರಿಗೆ ಸರ್ಕಾರ ಪರಿಹಾರವನ್ನೂ ಬಿಡುಗಡೆ ಮಾಡುತ್ತದೆ. ಆದರೆ, ಆ ಹಣ ಜನರನ್ನು ತಲುಪದೆ ಸಮಸ್ಯೆ ಅನುಭವಿಸಿದವರ ನೂರಾರು ನೋವಿನ ಕತೆಗಳು ಕೇಳುವವರಿಲ್ಲದೆ ಮುಚ್ಚಿ ಹೋಗುತ್ತಿವೆ. ಅಂಥ ಸಮಸ್ಯೆ ಎದುರಿಸುತ್ತಿರುವ ತಾಲೂಕಿನ ಬಾವನ ಸೌಂದತ್ತಿಯ ನೆರೆ ಸಂತ್ರಸ್ತರೊಬ್ಬರ ಸಮಸ್ಯೆ ಈಗ ಕಗ್ಗಂಟಾಗಿ ಪರಿಣಮಿಸಿದೆ.

    ಪರಿಹಾರ ಅನ್ಯರ ಖಾತೆಗೆ ಜಮೆ: ಕಳೆದ ವರ್ಷ ಕೃಷ್ಣಾ ನದಿ ಪ್ರವಾಹದಿಂದ ಕುಸಿದ ಮನೆಗಳ ಸರ್ವೇ ಮಾಡಿ ಎ,ಬಿ,ಸಿ ಕೆಟಗರಿಯಾಗಿ ವಿಂಗಡಿಸಲಾಗಿತ್ತು. ಮನೆ ನಿರ್ಮಿಸಿಕೊಳ್ಳಲು ಮೊದಲ ಕಂತಿನ ಹಣ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ, ರಾಯಬಾಗ ತಹಸೀಲ್ದಾರ್ ಕಚೇರಿ ಮತ್ತು ಬೆಳಗಾವಿ ಜಿಪಂ ಇಲಾಖೆ ಗಣಕಯಂತ್ರ ಸಿಬ್ಬಂದಿ ಎಡವಟ್ಟಿನಿಂದಾಗಿ ಸಂತ್ರಸ್ತರ ಖಾತೆಗೆ ಜಮೆ ಆಗಬೇಕಾಗಿದ್ದ ಹಣ ಬೇರೆ ವ್ಯಕ್ತಿ ಖಾತೆಗೆ ಜಮೆ ಆಗಿ ಸಮಸ್ಯೆ ಬಿಗಡಾಯಿಸಿದೆ. ಅನ್ಯ ವ್ಯಕ್ತಿಯ ಖಾತೆಗೆ ಹಣ ಜಮೆ ಆಗಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ರಾಯಬಾಗ ತಾಲೂಕಿನಲ್ಲಿ ಇದೇ ರೀತಿಯ ಸುಮಾರು 10-12 ಪ್ರಕರಣ ಬೆಳಕಿಗೆ ಬಂದಿವೆ. ಅಷ್ಟಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿರುವುದು ಮಾತ್ರ ವಿಪರ್ಯಾಸವೇ ಸರಿ.

    ಪರಿಶೀಲನೆಯಿಂದ ಪ್ರಕರಣ ಬೆಳಕಿಗೆ: ಬಾವನಸೌಂದತ್ತಿ ಗ್ರಾಮದ ದಶರಥ ಭೋವಿ ಅವರಿಗೆ ಕಳೆದ ವರ್ಷ ನೆರೆ ಹಾವಳಿಯಿಂದ ಮನೆ ಕಳೆದುಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಎ ಕೆಟೆಗರಿಯಲ್ಲಿ ಮನೆ ಮಂಜೂರು ಮಾಡಿತ್ತು. ಆದರೆ, ಮನೆ ಕಟ್ಟಿಕೊಳ್ಳಲು ಹಣ ಮಾತ್ರ ಖಾತೆಗೆ ಜಮೆ ಆಗದಿರುವುದರಿಂದ ಸಾಕಷ್ಟು ಸಲ ಗ್ರಾಪಂಗೆ ಎಡತಾಕಿದ್ದರು. ಪಿಡಿಒ ಅವರ ಹಾರಿಕೆ ಉತ್ತರಕ್ಕೆ ಬೇಸತ್ತು ತಾವೇ ರಾಯಬಾಗ ತಹಸೀಲ್ದಾರ್ ಮತ್ತು ಬೆಳಗಾವಿ ಜಿಪಂ ಕಚೇರಿಗೆ ಹೋಗಿ ಪರಿಶೀಲನೆ ನಡೆಸಿದ್ದರು. ತಮ್ಮ ಖಾತೆಗೆ ಮಂಜೂರಾಗಬೇಕಿದ್ದ ಹಣ ಬೇರೆ ವ್ಯಕ್ತಿಯೊಬ್ಬರ ಖಾತೆಗೆ ಜಮೆ ಆಗಿದ್ದು ಆಗ ಬೆಳಕಿಗೆ ಬಂದಿತ್ತು. ಸಮಸ್ಯೆ ಬಗೆಹರಿಸುವಂತೆ ಪಿಡಿಒ, ರಾಯಬಾಗ ತಹಸೀಲ್ದಾರ್ ಅವರನ್ನು ಒತ್ತಾಯಿಸಿದಾಗ, ಸರ್ಕಾರಕ್ಕೆ ಒಂದು ಲಕ್ಷ ರೂ. ಮೊತ್ತದ ಡಿಡಿ ನೀಡಿ, ಜಮೆ ಆಗಿದ್ದ ವ್ಯಕ್ತಿಯಿಂದ ಹಣ ಮರಳಿ ಪಡೆದಿದ್ದರು. ಆದರೆ ಸಂಬಂಧಿಸಿದ ಇಲಾಖೆ ಸಿಬ್ಬಂದಿ ಮುಂದಿನ ಕಂತಿನ ಹಣ ಕೂಡ ಬೇರೆ ವ್ಯಕ್ತಿಯ ಖಾತೆಗೆ ಜಮೆ ಮಾಡಿದ್ದರಿಂದ ದಶರಥ ಭೋವಿ ದಿಕ್ಕು ತೋಚದಂತಾಗಿದ್ದು, ಸಂಪೂರ್ಣ ಹಣ ಬರುವ ನಿರೀಕ್ಷೆಯಲ್ಲಿದ್ದಾರೆ.

    ಮನೆ ಕಳೆದುಕೊಂಡು ವರ್ಷವಾದರೂ ಮರು ನಿರ್ಮಾಣ ಸಾಧ್ಯವಾಗಿಲ್ಲ. ಮನೆ ನಿರ್ಮಾಣ ಪ್ರಾರಂಭದ ಹಂತದಲ್ಲಿದೆ. ತಮ್ಮ ಖಾತೆಗೆ ಹಣ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಕೇಳಿಕೊಂಡರೂ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಮೇಲಧಿಕಾರಿಗಳು ಕೂಡಲೇ ಎಚ್ಚೆತ್ತು ಸೂಕ್ತ ತನಿಖೆ ನಡೆಸಿ, ತಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.
    | ದಶರಥ ಭೋವಿ, ಮನೆ ಕಳೆದುಕೊಂಡ ಸಂತ್ರಸ್ತ, ಬಾವನ ಸೌಂದತ್ತಿ

    ರಾಯಬಾಗ ತಾಲೂಕಿನಲ್ಲಿ ಕಳೆದ ವರ್ಷದ ನೆರೆ ಪರಿಹಾರದ ಹಣ ಬೇರೆಯವರ ಖಾತೆಗೆ ಜಮೆ ಆಗಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲಾಗುವುದು.
    | ಎನ್.ಬಿ.ಗೆಜ್ಜಿ, ತಹಸೀಲ್ದಾರ್, ರಾಯಬಾಗ

    | ಸಂತೋಷ ಗಿರಿ ಬಾವನಸೌಂದತ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts