More

    ಸಚಿವಗಿರಿ ಆತುರ ಬಿಜೆಪಿಗೆ ಮುಜುಗರ; ಕಿರಿಕ್​ಗೆ ಬಿಎಸ್​ವೈ ಬೇಸರ

    ಬೆಂಗಳೂರು: ಲಾಕ್​ಡೌನ್ ಸಡಿಲಿಕೆಯಾಗುತ್ತಿದ್ದಂತೆ ‘ಅಧಿಕಾರ ವಂಚಿತರ’ ಅಸಮಾಧಾನ ಮತ್ತೆ ಪುಟಿದೇಳ ತೊಡಗಿದೆ. ಕೆಲವು ಶಾಸಕರು ಸಚಿವಗಿರಿ, ಮತ್ತಿನ್ಯಾವುದೋ ಬೇಡಿಕೆ ಈಡೇರಿಸಿಕೊಳ್ಳಲು ತೋರುತ್ತಿರುವ ಆತುರ, ಕೈಗೊಂಡಿರುವ ಚಟುವಟಿಕೆಗಳು ಬಿಜೆಪಿಗೆ ಮುಜುಗರ ತಂದೊಡ್ಡಿವೆ.

    ಅಧಿಕಾರದ ಗದ್ದುಗೆ ಏರಿದಾಗಿನಿಂದಲೂ ಬಿ.ಎಸ್.ಯಡಿಯೂರಪ್ಪ ನೆಮ್ಮದಿಯಿಂದ ಆಡಳಿತ ನಿರ್ವಹಿಸಿದ್ದೇ ದುರ್ಲಭ. ಇದೀಗ ಕರೊನಾ ಸಂಕಷ್ಟ ಕಾಲದಲ್ಲೇ ಕೆಲವರ ಪರೋಕ್ಷ ಕಿರಿಕ್ ಬಿಎಸ್​ವೈ ಕೆಂಗಣ್ಣಿಗೆ ಗುರಿಯಾಗಿದೆ.

    ಈ ಹಿಂದೆ ಶತಮಾನ ಕಂಡರಿಯದ ಅತಿವೃಷ್ಟಿ, ಪ್ರವಾಹದಿಂದ ರಾಜ್ಯ ತತ್ತರಿಸಿದ್ದಾಗ ಆಡಳಿತಾರೂಢ ಬಿಜೆಪಿಯಲ್ಲಿ ಭಿನ್ನಮತ ಚಟುವಟಿಕೆಗಳು ಭುಗಿಲೆದ್ದಿದ್ದವು. ತತ್ಪರಿಣಾಮ ಮೂವರು ಮುಖ್ಯಮಂತ್ರಿಗಳನ್ನು ಕಂಡ ಪಕ್ಷ ನಂತರದ ಚುನಾವಣೆಯಲ್ಲಿ ಧೂಳೀಪಟವಾಯಿತು. ಈಗಲೂ ಅಷ್ಟೇ, ಮಾರಕ ಪಿಡುಗು ಕಾಡುತ್ತಿರುವಾಗ ಅಪಸ್ವರ, ಬಂಡಾಯದ ಧ್ವನಿ ಎದ್ದಿದ್ದು, ಹಿಂದಿನ ಕಹಿ ಅನುಭವದಿಂದ ಕಮಲ ಪಡೆ ಪಾಠ ಕಲಿತಿಲ್ಲ ಎಂಬುದನ್ನು ಸಾರುತ್ತದೆ.

    ಬಿಎಸ್​ವೈ ಬಗ್ಗೆ ಮುನಿಸಿಕೊಂಡವರು, ತೆರೆಮರೆಯ ‘ಅಧಿಕಾರ ಕೇಂದ್ರ’ದ ಹಸ್ತಕ್ಷೇಪಕ್ಕೆ ಬೇಸತ್ತವರು, ಸ್ಥಾನಮಾನದ ಹಪಾಹಪಿ, ಸೇವಾ ಹಿರಿತನಕ್ಕೆ ಮನ್ನಣೆ ಸಿಗಲಿಲ್ಲವೆಂಬ ಅತೃಪ್ತಿಯ ಚಡಪಡಿಕೆ ಉಳ್ಳವರ ಚಟುವಟಿಕೆ ಮತ್ತೆ ತಲೆ ಎತ್ತಿದ್ದು, ಇವುಗಳ ನಿಯಂತ್ರಣ ಸಾಧಿಸಬೇಕಾದ ಪಕ್ಷದ ರಾಜ್ಯ ನಾಯಕತ್ವ ತಟಸ್ಥ ನಿಲುವು ತಳೆದಿರುವುದು ಅನುಮಾನ ಹುಟ್ಟುಹಾಕಿದೆ.

    ಇದನ್ನೂ ಓದಿ: ‘ಪಾತಾಳ ಲೋಕ’ ವೆಬ್‌ಸಿರೀಸ್ ನಿಷೇಧಿಸಲು ಹೆಚ್ಚಿದ ಒತ್ತಡ

    ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯತೆ ಕೊರತೆಯಿದೆ. ಸಂಘಟನಾತ್ಮಕ ಚೈತನ್ಯವೂ ಕುಂದಿದ್ದು, ವಿವಿಧ ಹಂತದ ಸಭೆಗಳು ನಾಮ್​ ಕೆ ವಾಸ್ತೆಗೆ ಸೀಮಿತವಾಗಿ ತಿಂಗಳುಗಳೇ ಕಳೆದಿವೆ. ಅಪನಂಬಿಕೆ ಹಾಗೂ ಸಂವಹನ ಸಮಸ್ಯೆಯು ಸಿಎಂ ಬಿಎಸ್​ವೈ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್​ಗೆ ತಲೆನೋವಾಗಿ ಪರಿಣಮಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಪ್ರಚೋದಿತ ಭಿನ್ನಮತ?: ಕಠಿಣ ಸನ್ನಿವೇಶದಲ್ಲಿ ಬಂಡಾಯದ ಧ್ವನಿ ಸರಿಯಲ್ಲ ಎನ್ನುವುದು ಎಳಸು ರಾಜಕಾರಣಿಗಳಿಗೂ ಗೊತ್ತಿರುತ್ತದೆ. ಆದರೆ ಈಗಿನದು ಹೈಕಮಾಂಡ್ ಜತೆಗೆ ನಿಕಟಬಾಂಧವ್ಯವುಳ್ಳ, ಪ್ರಭಾವಿ ನಾಯಕರದ್ದು ಪ್ರಚೋದಿತ ಭಿನ್ನಮತ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮುಂದಿನ ಹಂತದ ಲಾಕ್​ಡೌನ್ ಸ್ವರೂಪ ನಿರ್ಧಾರ, ಆರ್ಥಿಕ ಬಿಕ್ಕಟ್ಟು, ಹಲವಾರು ಕ್ಷೇತ್ರಗಳ ಬೇಡಿಕೆ ಇನ್ನಿತರ ಸಿಕ್ಕುಗಳನ್ನು ಬಿಡಿಸುವುದೇ ಸರ್ಕಾರಕ್ಕೆ ಸವಾಲಾಗಿದೆ. ಈ ಹೊತ್ತಿನಲ್ಲಿ ಅಪಸ್ವರ ಮತ್ತೆ ಚಿಗುರಿಕೊಂಡಿದ್ದರಲ್ಲಿ ತೆರೆಮರೆಯ ಚಿತಾವಣೆಯಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಪರಸ್ಪರ ‘ಹಿತರಕ್ಷಣೆ’ ಭಿನ್ನಮತೀಯ ಚಟುವಟಿಕೆ ಮತ್ತಷ್ಟು ಚುರುಕಾಗುವ ಲಕ್ಷಣಗಳಿವೆ.

    ಇದನ್ನೂ ಓದಿ: ಇನ್ನು ಮುಂದೆ ವರ್ಷಕ್ಕೆ 100 ದಿನ ಮಾತ್ರ ಶಾಲೆ!

    ಮೆದುವಾದ ಉಮೇಶ್ ಕತ್ತಿ ವರಸೆ

    ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ಜವಾಬ್ದಾರಿಯುತ ಶಾಸಕನಾಗಿ ರಾಜಕೀಯ, ಬಂಡಾಯ ಇತ್ಯಾದಿ ಸಲ್ಲದು, ನಮಗೂ ಜವಾಬ್ದಾರಿ ಇದೆ ಎಂದು ಉಮೇಶ್ ಕತ್ತಿ ತಿಳಿಸಿದರು. ಗುರುವಾರ ರಾತ್ರಿ ಶಾಸಕರ ಜತೆ ಊಟ ಮಾಡಿದ್ದು ನಿಜ. ಆದರೆ ಯಾವುದೇ ರೀತಿಯ ಬಂಡಾಯ ಚಟುವಟಿಕೆ ನಡೆಸಿಲ್ಲ ಎಂದ ಕತ್ತಿ, ಎರಡು ದಿನಗಳ ಹಿಂದೆ ಸಿಎಂ ಭೇಟಿಯಾಗಿದ್ದೆ, ರಾಜ್ಯಸಭೆ ಟಿಕೆಟ್ ಕುರಿತು ಚರ್ಚೆ ಮಾಡಿದ್ದೇನೆ ಎಂದು ಹೇಳಿದರು. ಕರೊನಾ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಶಾಸಕರು ಭೇಟಿ ಆಗಿರಲಿಲ್ಲ. ಹೋಟೆಲ್​ಗಳಿಲ್ಲದೆ ಊಟದ ಸಮಸ್ಯೆ ಇತ್ತು. ಹಾಗಾಗಿ ಊಟಕ್ಕೆ ಸೇರಿದ್ದೆವು. ಸಿಎಂಗೂ ಊಟಕ್ಕೆ ಸೇರುತ್ತಿರುವ ಬಗ್ಗೆ ತಿಳಿಸಿದ್ದೆವು ಎಂದರು. ಯತ್ನಾಳ್ ಹೇಳಿದ್ದನ್ನೇ ನಾನು ಹೇಳುತ್ತಿದ್ದೇನೆ. ಟಿಕೆಟ್ ಕೊಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದೇ ವಿಚಾರದಲ್ಲಿ ರಾಜ್ಯಾಧ್ಯಕ್ಷರನ್ನು ಭೇಟಿ ಆಗಿದ್ದೆವು. ಮಾಧ್ಯಮಗಳು ಬೇರೆ ಬೇರೆ ರೀತಿಯಲ್ಲಿ ಸುದ್ದಿ ಬಿತ್ತರಿಸುತ್ತಿವೆ ಎಂದರು.

    ನಾನು ಚಡ್ಡಿ ಗ್ಯಾಂಗ್ ಲೀಡರ್

    ಬಿಜೆಪಿ ಶಾಸಕರ ಬಂಡಾಯ, ಅಸಮಾಧಾನ ಅವರವರ ಭಾವಕ್ಕೆ ಭಕುತಿಗೆ ಬಿಟ್ಟಿದ್ದು ಎಂದು ಸಚಿವ ಸಿ.ಟಿ.ರವಿ ಹೇಳಿದರು. ಚುನಾವಣೆಪೂರ್ವದಲ್ಲೇ ನಾವು ಯಡಿಯೂರಪ್ಪ ಅವರ ನಾಯಕತ್ವ ಒಪ್ಪಿಕೊಂಡಾಗಿದೆ. ಈಗ ಏನಿದ್ದರೂ ಕರೊನಾ ವಿರುದ್ಧ ಹೋರಾಟವಷ್ಟೇ ನಮ್ಮ ಗುರಿ. ಉಳಿದ ವಿಷಯಗಳಿಗೆ ವಿವಾದ ಸೃಷ್ಟಿಸಲು ನಾನು ಇಚ್ಛಿಸುವುದಿಲ್ಲ. ನಾನು ಯಾವತ್ತಿದ್ದರೂ ಚಡ್ಡಿ ಗ್ಯಾಂಗ್ ಲೀಡರ್ ಎಂದು ಒಪ್ಪಿಕೊಂಡಿದ್ದೇನೆ. ಪಕ್ಷದ ವಿಷಯಕ್ಕೆ ಬರುವುದಾದರೆ ಮಾತ್ರ ನಾನು ಏನು ಬೇಕಾದರೂ ಆಡಲು, ಮಾಡಲು ರೆಡಿ. ಆದರೆ, ವೈಯಕ್ತಿಕ ವಿಷಯಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.

    ಬಿಜೆಪಿ ಶಾಸಕರ ಪ್ರತ್ಯೇಕ ಸಭೆಗೂ ನನಗೂ ಸಂಬಂಧವಿಲ್ಲ. ನಾನು ಕೆಲಸದ ಮೇಲೆ ಬೆಂಗಳೂರಿನಲ್ಲಿದ್ದೇನೆ.

    | ಮಹೇಶ್ ಕುಮಠಳ್ಳಿ ಅರ್ಹ ಶಾಸಕ

    ಯಾವುದೇ ಸಭೆಗೆ ಹೋಗಿರಲಿಲ್ಲ. ನಾನು ಸ್ಥಿತ ಪ್ರಜ್ಞೆಯಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಸಂಬಂಧ ಸಾಕಷ್ಟು ಅನುದಾನ ಕೊಡುತ್ತಿದ್ದಾರೆ. ಯಾವುದೇ ಸಮಸ್ಯೆ ಇದ್ದರೂ ಹಿರಿಯರು ಬಗೆಹರಿಸುತ್ತಾರೆ.

    | ಮುರುಗೇಶ್ ನಿರಾಣಿ ಮಾಜಿ ಸಚಿವ

    ಕೇಂದ್ರ ಮತ್ತು ರಾಜ್ಯದಲ್ಲಿ ಸುಭದ್ರ ಆಡಳಿತ ನಡೆಸುತ್ತಿರುವ ಬಿಜೆಪಿ ಯಾವುದೇ ಭಿನ್ನಮತಕ್ಕೆ ಅವಕಾಶ ಕಲ್ಪಿಸಿಕೊಡುವುದಿಲ್ಲ. ಹಾಗಾಗಿ ಶಾಸಕ ಉಮೇಶ ಕತ್ತಿ ಅವರಿಗೆ ಏನಾದರೂ ಸಮಸ್ಯೆ ಇದ್ದರೆ ಸಿಎಂ ಯಡಿಯೂರಪ್ಪ ಅವರೊಂದಿಗೆ ರ್ಚಚಿಸಿ ಬಗೆಹರಿಸಿಕೊಳ್ಳುವುದು ಸೂಕ್ತ.

    | ಸುರೇಶ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವ

    2ನೇ ಅವಧಿಗೆ ಪ್ರಧಾನಿಯಾಗಿ ಒಂದು ವರ್ಷ: ದೇಶದ ಜನರಿಗೆ ಮೋದಿ ಭಾವನಾತ್ಮಕ ಪತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts