More

    ಕಾಲೇಜುಗಳಿಂದ ಕದ್ದುಮುಚ್ಚಿ ತರಗತಿ!

    ಮಂಗಳೂರು/ಉಡುಪಿ: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಶೈಕ್ಷಣಿಕ ಚಟುವಟಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಆದರೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಕೆಲವು ಶಾಲಾ ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಸುತ್ತಿವೆ.

    ಶಾಲಾ ಕಾಲೇಜುಗಳು, ಕೋಚಿಂಗ್ ತರಗತಿಗಳನ್ನು ಮೇ 4ರವರೆಗೂ ನಡೆಸುವಂತಿಲ್ಲ. ಆದರೆ ಅನೇಕ ಕಾಲೇಜುಗಳು ವಿದ್ಯಾರ್ಥಿಗಳನ್ನು ಕರೆಯಿಸಿ ತರಗತಿ ನಡೆಸಿರುವುದು ವರದಿಯಾಗಿದೆ. ನಿಯಮ ಉಲ್ಲಂಘಿಸಿದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹಮ್ಮದ್ ಇಮ್ತಿಯಾಜ್ ಎಚ್ಚರಿಕೆ ನೀಡಿದ್ದಾರೆ.

    ಮಂಗಳೂರು ನಗರ ಹಾಗೂ ಹೊರವಲಯದ ಕೆಲವು ಮೆಡಿಕಲ್, ಪ್ಯಾರಾಮೆಡಿಕಲ್, ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬರಲು ಹೇಳಿರುವ ಮಾಹಿತಿ ಇದೆ. ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತರಗತಿಗೆ ಹೋಗುವ ವಿಡಿಯೋಗಳನ್ನೂ ಯಾರೋ ಬಹಿರಂಗ ಪಡಿಸಿದ್ದಾರೆ. ರಾಜ್ಯ ಸರ್ಕಾರದ ಆದೇಶವನ್ನು ಹಲವು ವಿದ್ಯಾಸಂಸ್ಥೆಗಳು ಪಾಲಿಸದಿರುವುದು ಸ್ಪಷ್ಟಗೊಂಡಿದೆ. ಈ ಬಗ್ಗೆ ವಿದ್ಯಾರ್ಥಿಗಳ ಹೆತ್ತವರಿಂದ ಮಾಹಿತಿ ಬಂದಿದೆ. ತರಗತಿ ನಡೆಸುವ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಆಡಳಿತವನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು, ವಿಪತ್ತು ನಿರ್ವಹಣಾ ಕಾನೂನಿನನ್ವಯ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

    ಹಾಸ್ಟೆಲ್‌ಗಳಲ್ಲಿ ಇರಿಸಿ ಪಾಠ: ಕೆಲವು ಕಾಲೇಜುಗಳ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಬಾಕಿಯಾಗಿದ್ದು, ಅವರಿಗೆ ಊರಿಗೆ ತೆರಳಲು ಅನುಮತಿ ನೀಡದಿರುವ ಬಗ್ಗೆಯೂ ದೂರುಗಳು ಬಂದಿವೆ. ಯಾರೆಲ್ಲ ಊರಿಗೆ ತೆರಳಲು ಆಸಕ್ತರಿದ್ದಾರೋ ಅವರೆಲ್ಲರಿಗೂ ಅನುಮತಿ ನೀಡಲು ಸೂಚಿಸಲಾಗಿದೆ ಎಂದು ಡಿಡಿಪಿಯು ಇಮ್ತಿಯಾಜ್ ತಿಳಿಸಿದ್ದಾರೆ.
    ಉಡುಪಿಯಲ್ಲೂ ಇದೇ ಸ್ಥಿತಿ ಇದ್ದು, ವಿದ್ಯಾರ್ಥಿಗಳನ್ನು ವಸತಿ ನಿಲಯಗಳಲ್ಲಿ ಇರಿಸಿಕೊಂಡು ಪಾಠ, ಪ್ರವಚನ ನಡೆಸಲಾಗುತ್ತಿದೆ. ಉಪನ್ಯಾಸಕರಿಗೆ ಕಾಲೇಜಿಗೆ ಬಂದು ಪಾಠ ಮಾಡುವಂತೆ ಆಡಳಿತ ಮಂಡಳಿ ಸೂಚನೆ ನೀಡಿದೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಭಗವಂತ ಕಟ್ಟಿಮನಿ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts