More

    ಕೊಟ್ಟಮಾತಿನಂತೆ ಮಲೆನಾಡಿನ ಸಮಸ್ಯೆ ಬಗೆಹರಿಸಿ

    ಶಿವಮೊಗ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯುವನಿಧಿ ಕಾರ್ಯಕ್ರಮಕ್ಕೆ ಜ.12ರಂದು ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಚುನಾವಣಾ ಪೂರ್ವದಲ್ಲಿ ಕೊಟ್ಟ ಭರವಸೆಯಂತೆ ಮಲೆನಾಡಿನ ಸಮಸ್ಯೆಗಳನ್ನು ಬಗೆಹರಿಸಬೇಕು. ಆ ಮೂಲಕ ನುಡಿದಂತೆ ನಡೆದುಕೊಳ್ಳಬೇಕು ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಆಗ್ರಹಿಸಿದರು.

    ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಮಲೆನಾಡಿನ ಸಮಸ್ಯೆಗಳನ್ನು ಬಗೆಹರಿಸಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಮಧು ಬಂಗಾರಪ್ಪ ನೇತೃತ್ವದಲ್ಲಿ ಮಲೆನಾಡ ಜನಾಕ್ರೋಶ ಕಾರ್ಯಕ್ರಮ ನಡೆಸಿ ಶರಾವತಿ, ವಾರಾಹಿ ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಆಯನೂರಿನಿಂದ ಶಿವಮೊಗ್ಗವರೆಗೆ ಪಾದಯಾತ್ರೆ ಮಾಡಿದ್ದರು. ಕೊಟ್ಟ ಮಾತಿನಂತೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
    ಸಿಎಂ ಸಿದ್ದರಾಮಯ್ಯ ಅವರಿಗೆ ಐದು ಗ್ಯಾರಂಟಿಗಳನ್ನು ಈಡೇರಿಸುವುದೇ ದೊಡ್ಡ ಚಿಂತೆಯಾಗಿದೆ. ಸರ್ಕಾರ ಕೊಡುತ್ತಿರುವ ಈ ಎಲ್ಲ ಗ್ಯಾರಂಟಿಗಳು ತಾತ್ಕಾಲಿಕ ಮಾತ್ರ. ಹಾಗಾಗಿ ಭೂಮಿ ಹಕ್ಕು ಕೊಡಿಸುವ ಮೂಲಕ ಶಾಶ್ವತ ಗ್ಯಾರಂಟಿಗಳ ಬಗ್ಗೆ ಚಿಂತನೆ ಮಾಡಬೇಕಿದೆ. ಮಲೆನಾಡು ಹೋರಾಟಗಾರರ ಸಮಿತಿ ರಚಿಸಿ 11 ಜಿಲ್ಲೆಗಳ ರೈತರ ಸಮಸ್ಯೆಗಳನ್ನು ಈಡೇರಿಸುವ ಭರವಸೆ ಕೊಟ್ಟಿದ್ದರು. ಆ ಎಲ್ಲ ಸಮಸ್ಯೆಗಳನ್ನು ಈಡೇರಿಸಬೇಕಿದೆ. ಹಿಂದಿನ ಬಿಜೆಪಿ ಸರ್ಕಾರವೂ ರೈತರಿಗೆ ಅನ್ಯಾಯ ಮಾಡಿತು. ಇದೀಗ ಕಾಂಗ್ರೆಸ್ ಕೂಡ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
    ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಶಿವಮೊಗ್ಗ ಜಿಲ್ಲೆಯಲ್ಲೇ 80 ಸಾವಿರ ಬಗರ್‌ಹುಕ್ಕುಂ ಅರ್ಜಿಗಳನ್ನು ವಜಾ ಮಾಡಲಾಗಿದೆ. ಇವು ಜನವಿರೋಧಿ ಮತ್ತು ರೈತ ವಿರೋಧಿ ಸರ್ಕಾರಗಳಾಗಿದ್ದು, ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲವಾಗಿದೆ. ಕೇವಲ ಯುವನಿಧಿ ಕೊಟ್ಟರೆ ಪ್ರಯೋಜನವಿಲ್ಲ. ಮುಖ್ಯವಾಗಿ ಈ ಭಾಗದ ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಛೀಮಾರಿ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೊದಲು ಶರಾವತಿ ಸಂತ್ರಸ್ತರ ಮತ್ತು ಅರಣ್ಯ ಭೂಮಿ ಸಾಗುವಳಿದಾರರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮಾತುಕೊಟ್ಟಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿದ್ದು, ಆ ಮಾತನ್ನು ಈಗ ಉಳಿಸಿಕೊಳ್ಳಬೇಕಾಗಿದೆ. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಒಂದು ವಾರದೊಳಗೆ ಬಗೆಹರಿಸುತ್ತೇವೆ ಎದಿದ್ದರು. ಇದು ಕೇಂದ್ರ ಸರ್ಕಾರಕ್ಕೂ ಸಂಬಂಧಿಸಿದ ವಿಷಯವಾಗಿದೆ. ರಾಘವೇಂದ್ರ ಸೇರಿ ಒಬ್ಬ ಸಂಸದರೂ ಕೇಂದ್ರಕ್ಕೆ ಮನವಿ ಮಾಡಿ ಈ ಸಮಸ್ಯೆಯನ್ನು ಬಗೆಹರಿಸಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡು ಮಲೆನಾಡ ರೈತರಿಗೆ ದ್ರೋಹ ಬಗೆದಿವೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts