More

    ಮಣ್ಣಿನ ಸತ್ವ, ಉತ್ತಮ ಬೆಳೆಗೆ ಮಹತ್ವ: ನೈಸರ್ಗಿಕ ಕೃಷಿಗೆ ಸರ್ಕಾರದ ಆದ್ಯತೆ , ಪ್ರತಿ ಎಕರೆಗೆ 7 ಸಾವಿರ ರೂ. ಪ್ರೋತ್ಸಾಹಧನ

    | ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ರಾಜ್ಯದಲ್ಲಿ ಕೃಷಿ ಭೂಮಿ ಉಳಿಸುವುದರೊಂದಿಗೆ ಉತ್ತಮ ಗುಣಮಟ್ಟದ ಆಹಾರ ಧಾನ್ಯ ಬೆಳೆಯುವ ನೈಸರ್ಗಿಕ ಕೃಷಿಯ ಮೂಲಕ ಸಿರಿಧಾನ್ಯಗಳಿಗೆ ಇನ್ನಷ್ಟು ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯದ ಕೃಷಿ ಭೂಮಿಯಲ್ಲಿ ಹೆಚ್ಚಿನ ರಾಸಾಯನಿಕ ಬಳಕೆಯಿಂದ ಇಂಗಾಲ ಸಾಂದ್ರತೆ ಕಡಿಮೆಯಾಗಿ ಫಲವತ್ತತೆ ಹಾಳಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಆಹಾರ ಧಾನ್ಯದ ಉತ್ಪಾದನೆ ಮೇಲೆ ಅಡ್ಡ ಪರಿಣಾಮ ಬೀರುವುದನ್ನು ತಪ್ಪಿಸಲು ಸರ್ಕಾರ ಎಚ್ಚೆತ್ತುಕೊಂಡಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮೊದಲ ಬಜೆಟ್​ನಲ್ಲಿ ಘೋಷಣೆ ಮಾಡಿದ್ದ ನೈಸರ್ಗಿಕ ಕೃಷಿ ಯೋಜನೆಯನ್ನು ಇನ್ನಷ್ಟು ವಿಸ್ತರಣೆ ಮಾಡಲು ಕೃಷಿ ಇಲಾಖೆಯನ್ನು ಸಚಿವ ಬಿ.ಸಿ. ಪಾಟೀಲ್ ಸಜ್ಜುಗೊಳಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಐದು ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ತಲಾ ಒಂದು ಸಾವಿರ ಹೆಕ್ಟೇರ್​ನಲ್ಲಿ ನೈಸರ್ಗಿಕ ಕೃಷಿ ಮಾಡಲು ಘೋಷಣೆ ಮಾಡಲಾಗಿತ್ತು. ಅದಕ್ಕೀಗ ಸಿದ್ಧತೆ ಮಾಡಲಾಗಿದೆ.

    ಕ್ಲಸ್ಟರ್ ಗುರುತು: ಐದು ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿಯೂ ನೈಸರ್ಗಿಕ ಕೃಷಿಗೆ ಸಂಬಂಧಿಸಿದಂತೆ ಕ್ಲಸ್ಟರ್​ಗಳನ್ನು ಗುರುತಿಸಲಾಗಿದೆ. ಅಲ್ಲಿ ರೈತರನ್ನು ಮನವೊಲಿಸುವ ಮೂಲಕ ಸುಸ್ಥಿರ ಪರಿಸರ ಕೃಷಿಗೆ ಸಿದ್ಧತೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ವಿವರಿಸುತ್ತಾರೆ.

    ಅಲ್ಲಿನ ಹವಾಮಾನ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರತಿ ಕ್ಲಸ್ಟರ್​ನಲ್ಲಿ ಇಂತಿಷ್ಟು ಎಕರೆಗಳನ್ನು ನಿಗದಿ ಮಾಡಲಾಗುತ್ತದೆ. ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ರೈತರಿಗೆ ಕಾಲಕಾಲಕ್ಕೆ ಸಲಹೆ ನೀಡುವ ಮೂಲಕ ಯೋಜನೆ ಪರಿಣಾಮಕಾರಿ ಜಾರಿಗೆ ಮಹತ್ವದ ಪಾತ್ರ ವಹಿಸಲಿದ್ದಾರೆ. ನೈಸರ್ಗಿಕ ಕೃಷಿ ಅವಲಂಬಿಸುವ ರೈತರಿಗೆ ಪ್ರತಿ ಎಕರೆಗೆ 7 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದನ್ನು ಹೆಚ್ಚಿಸುವ ಚಿಂತನೆಯೂ ಸರ್ಕಾರಕ್ಕಿದೆ.

    ಏನಿದು ನೈಸರ್ಗಿಕ ಕೃಷಿ?: ರಾಜ್ಯದಲ್ಲಿ ಮಾತ್ರವಲ್ಲದೆ ದೇಶ, ವಿದೇಶದಲ್ಲಿ ಉತ್ತಮ ಹಾಗೂ ರಾಸಾಯನಿಕಮುಕ್ತ ಆಹಾರ ಧಾನ್ಯ, ಹಣ್ಣು, ತರಕಾರಿಗೆ ಬೇಡಿಕೆ ಹೆಚ್ಚುತ್ತಿದೆ. ಭತ್ತ, ರಾಗಿ, ದ್ವಿದಳ ಧಾನ್ಯ, ಜೋಳ, ಅಡಕೆ, ಹಣ್ಣು, ತರಕಾರಿಯನ್ನು ನೈಸರ್ಗಿಕ ಕೃಷಿಯಲ್ಲಿ ಬಳಸುವುದು ಸರ್ಕಾರದ ಉದ್ದೇಶವಾಗಿದೆ.

    ಸ್ಥಳೀಯವಾಗಿ ಸಿಗುವಂತಹ ಹಸಿರೆಲೆ ಗೊಬ್ಬರ, ಬೇವು, ಜಾನುವಾರುಗಳ ಸೆಗಣಿಯನ್ನು ಜಮೀನುಗಳಿಗೆ ಹೆಚ್ಚು ಬಳಸುವುದು, ಸುಭಾಷ್ ಪಾಳೇಕಾರ್ ಪದ್ಧತಿ ಅನುಸರಿಸಿ ವ್ಯವಸಾಯ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತದೆ. ಇದರಿಂದ ರಾಸಾಯನಿಕ ಬಳಕೆ ಕಡಿಮೆಯಾಗಿ ಭೂಮಿಯ ಫಲವತ್ತತೆ ಉಳಿಯುತ್ತದೆ ಹಾಗೂ ಉತ್ತಮ ಗುಣಮಟ್ಟದ ಆಹಾರ ಪದಾರ್ಥ ಸಿಗುತ್ತದೆ.

    ಸಿರಿಧಾನ್ಯಕ್ಕೆ ಆದ್ಯತೆ: ನೈಸರ್ಗಿಕ ಕೃಷಿಯಲ್ಲಿ ಸಿರಿಧಾನ್ಯಕ್ಕೆ ಆದ್ಯತೆ ನೀಡಲಾಗುತ್ತದೆ. ಸಿರಿಧಾನ್ಯ ಹಾಗೂ ಸಾವಯವ ಉತ್ಪನ್ನಗಳನ್ನು ಹೆಚ್ಚು ಬೆಳೆದು ಅವುಗಳನ್ನು ಸಂಸ್ಕರಿಸಿ, ಪ್ಯಾಕಿಂಗ್ ಮತ್ತು ಬ್ರಾ್ಯಂಡಿಂಗ್ ಮಾಡುವ ಕಡೆ ಸರ್ಕಾರ ಗಮನ ಹರಿಸಿದೆ. ಹೆಚ್ಚಿನ ಪ್ರೋತ್ಸಾಹ ನೀಡುವುದಕ್ಕೂ ಆದ್ಯತೆ ನೀಡುತ್ತಿದೆ. ಸಿರಿಧಾನ್ಯಗಳನ್ನು ‘ಸಿರಿ ಕರ್ನಾಟಕ’ ಹೆಸರಿನಲ್ಲಿಯೂ, ಸಾವಯವ ಉತ್ಪನ್ನಗಳನ್ನು ‘ಶ್ರೇಷ್ಠ ಕರ್ನಾಟಕ’ ಹೆಸರಿನಲ್ಲಿಯೂ ಬ್ರಾ್ಯಂಡಿಂಗ್ ಮಾಡಿ ರಫ್ತುಗೆ ಆದ್ಯತೆ ನೀಡುವುದಕ್ಕೆ ಸರ್ಕಾರ ಮುಂದಾಗಿದೆ.

    ರಾಜ್ಯದಲ್ಲಿ ಈಗ 16.39 ಲಕ್ಷ ಹೆಕ್ಟೇರ್​ನಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. 20.55 ಲಕ್ಷ ಟನ್ ಉತ್ಪಾದನೆ ಇದೆ. ಸಿರಿಧಾನ್ಯ ಬೆಳೆಯಲು ಹೆಕ್ಟೇರ್​ಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಅದನ್ನು 15 ಸಾವಿರ ರೂ.ಗಳಿಗೆ ಹೆಚ್ಚಿಸುವ ಉದ್ದೇಶ ಸರ್ಕಾರಕ್ಕಿದೆ. ಸಿರಿಧಾನ್ಯಗಳನ್ನು ಬ್ರಾ್ಯಂಡಿಂಗ್ ಮಾಡಿ ರಫ್ತು ಮಾಡಲು 15 ಪ್ರಾಂತೀಯ ಒಕ್ಕೂಟಗಳು ರಾಜ್ಯದಲ್ಲಿ ಸರ್ಕಾರದ ಪ್ರೋತ್ಸಾಹದಲ್ಲಿ ಕೆಲಸ ಆರಂಭಿಸಿವೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ 19 ಕೋಟಿ ರೂ. ವೆಚ್ಚದಲ್ಲಿ 12 ಆಹಾರ ಸಂಸ್ಕರಣೆ ಇನ್​ಕ್ಯೂಬೇಷನ್ ಸೆಂಟರ್​ಗಳನ್ನು ಸ್ಥಾಪನೆ ಸಹ ಮಾಡಲಾಗಿದೆ.

    ಮಣ್ಣಿನಲ್ಲಿ ಏನೇನು ಇರಬೇಕು

    * ಶೇ.25 ನೀರು

    * ಶೇ.25 ಗಾಳಿ

    * ಶೇ. 45 ಖನಿಜ

    * ಶೇ. 5 ಸಾವಯವ ಪದಾರ್ಥ

    * ಸಾವಯವ ಪದಾರ್ಥದಲ್ಲಿ ಶೇ.1 ಸೂಕ್ಷ್ಮ ಜೀವಾಳು

    ಗೊಬ್ಬರ ಸಬ್ಸಿಡಿ
    ದೇಶದಲ್ಲಿ ಪ್ರತಿ ವರ್ಷ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಗೆ 2.39 ಲಕ್ಷ ಕೋಟಿ ರೂ.ಗಳ ಸಬ್ಸಿಡಿ ನೀಡಲಾಗುತ್ತಿದೆ. ಆ ಸಬ್ಸಿಡಿ ಮೊತ್ತವನ್ನು ಕಡಿಮೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಅದಕ್ಕಾಗಿಯೇ ನೈಸರ್ಗಿಕ ಕೃಷಿ ಪದ್ಧತಿಗೆ ಆದ್ಯತೆ ನೀಡುವುದು ಸರ್ಕಾರದ ಉದ್ದೇಶವಾಗಿದೆ.

    ಸವಳು-ಜವಳು
    ಒಂದೆಡೆ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ನೀರು ಬಳಕೆಯಿಂದ ಭೂಮಿ ಸವಳು-ಜವಳು ಆಗುತ್ತಿದೆ. ರಾಜ್ಯದಲ್ಲಿ ಸುಮಾರು 4 ಲಕ್ಷ ಹೆಕ್ಟೇರ್ ಸವಳು-ಜವಳು ಭೂಮಿ ಇದೆ ಎಂಬ ಅಂದಾಜಿದೆ. ಅಲ್ಲಿ ಯಾವುದೇ ಬೆಳೆ ಬೆಳೆಯಲು ಆಗುತ್ತಿಲ್ಲ, ಸಾವಯವ ಇಂಗಾಲ ಕಡಿಮೆ ಆಗಿರುವ ಪ್ರದೇಶದಲ್ಲಿ ಇಳುವರಿ ಬರುತ್ತಿಲ್ಲ ಹಾಗೂ ಭೂಮಿಯಲ್ಲಿ ಮಣ್ಣು ಕೊಚ್ಚಿ ಹೋಗುತ್ತಿದೆ.

    ಇಂಗಾಲ ಎಷ್ಟು ಕಡಿಮೆ ಇದೆ?
    ಒಂದೂವರೆ ದಶಕದ ಹಿಂದೆ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಶೇ.1 ರಿಂದ 1.5 ಇತ್ತು. ಆದರೀಗ ಅದು 0.5ಕ್ಕೆ ಇಳಿದಿರುವ ಆತಂಕದ ಸ್ಥಿತಿ ಇದೆ. ಇದೇ ರೀತಿಯ ಪರಿಸ್ಥಿತಿ ಮುಂದುವರಿದರೆ ಕೃಷಿ ಉತ್ಪನ್ನಗಳಿಗೆ ಪರಾವಲಂಬಿಯಾಗಬೇಕಾಗುತ್ತದೆ. ಇದರಿಂದ ಶೇ.25 ಆಹಾರ ಉತ್ಪಾದನೆ ಕಡಿಮೆಯಾಗುತ್ತದೆ.

    ಆಹಾರ ಉತ್ಪಾದನೆ ಕಡಿಮೆಯಾಗದಂತೆ ನೋಡಿಕೊಳ್ಳುವುದು, ಭೂಮಿಯನ್ನು ಫಲವತ್ತಾಗಿಯೇ ಉಳಿಸಿಕೊಳ್ಳುವ ಸಲುವಾಗಿ ನೈಸರ್ಗಿಕ ಕೃಷಿಗೆ ಆದ್ಯತೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಾಮುಖ್ಯತೆಯ ಮೂಲಕ ರೈತರಿಗೆ ನೆರವಾಗುವ ಉದ್ದೇಶವಿದೆ. ಮಣ್ಣು ಫಲವತ್ತತೆ ಕಾಪಾಡಲು 88 ಲಕ್ಷ ಮಣ್ಣು ಆರೋಗ್ಯ ಕಾರ್ಡ್​ಗಳನ್ನು ವಿತರಿಸಲಾಗಿದೆ.

    | ಬಿ.ಸಿ. ಪಾಟೀಲ್ ಕೃಷಿ ಸಚಿವ

    ನೈಸರ್ಗಿಕ ಕೃಷಿ ಏಕೆ?

    * ಮಣ್ಣಿನ ಫಲವತ್ತತೆ ಕಡಿಮೆ ಆಗುವುದನ್ನು ತಪ್ಪಿಸುವುದು

    * ಸಾಂಪ್ರದಾಯಿಕ ಕೃಷಿಯಿಂದ ಆಗುವ ವೆಚ್ಚ ಹೆಚ್ಚಳಕ್ಕೆ ಬ್ರೇಕ್ ಹಾಕಲು

    * ರಸಗೊಬ್ಬರ ಬಳಕೆ ಕಡಿಮೆ ಮಾಡುವುದು

    * ಆಹಾರ ಸುರಕ್ಷತೆಯ ಹೆಚ್ಚಳ ಮಾಡುವುದು

    * ಸುಸ್ಥಿರ ಅಭಿವೃದ್ಧಿ ಸಾಧಿಸುವುದು

    * ಸಾವಯವ ಉತ್ಪನ್ನಗಳಿಗೆ ಆದ್ಯತೆ ನೀಡುವುದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts