More

    ಕರಾವಳಿ ಉತ್ಸವ ಮೈದಾನದಲ್ಲಿ ವರ್ಷ ಕಳೆದರೂ ತೆರವಾಗದ ಮಣ್ಣು

    ಭರತ್ ಶೆಟ್ಟಿಗಾರ್ ಮಂಗಳೂರು

    ಕರಾವಳಿ ಉತ್ಸವ ಮೈದಾನದ ಒಂದು ಭಾಗದಲ್ಲಿ ತಂದು ಸುರಿಯಲಾಗಿದ್ದ ಮಣ್ಣು ವರ್ಷ ಕಳೆದರೂ ತೆರವಾಗಿಲ್ಲ. ಪರಿಣಾಮ ಹುಲ್ಲು ಪೊದೆಗಳು ಬೆಳೆದು ಇದೇನು ಮೈದಾನವೋ, ಕುರುಚಲು ಗುಡ್ಡವೋ? ಎಂದು ಕೇಳುವಂತಾಗಿದೆ.

    ಈ ಮೊದಲು ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ತ್ಯಾಜ್ಯ ವಿಲೇವಾರಿ ಮಾಡಲು ಪಾಲಿಕೆ ವ್ಯಾಪ್ತಿಯಲ್ಲಿ ಜಾಗವಿಲ್ಲದೆ ಕರಾವಳಿ ಉತ್ಸವ ಮೈದಾನದ ಒಂದು ಭಾಗದಲ್ಲಿ ತಂದು ಸುರಿಯಲಾಗಿತ್ತು. ದಿನಗಳು ಕಳೆದಂತೆ ಅರ್ಧ ಮೈದಾನದಲ್ಲಿ ಮಣ್ಣು ತುಂಬಿ ಹೋಗಿತ್ತು. ಬಳಿಕ ಕಟ್ಟಡ ತ್ಯಾಜ್ಯದ ಮಣ್ಣನ್ನು ಸ್ಮಾರ್ಟ್‌ಸಿಟಿಯಿಂದಲೇ ತೆರವುಗೊಳಿಸಲಾಗಿದೆ. ಆದರೆ ಕ್ರೀಡಾ ಇಲಾಖೆಂದಲೇ ಹಾಕಿದ ಮಣ್ಣು ಪ್ರಸ್ತುತ ಇನ್ನೂ ಹಲವು ಲೋಡ್‌ಗಳಷ್ಟು ರಾಶಿ ಬಿದ್ದಿದೆ.

    ವಸ್ತು ಪ್ರದರ್ಶನ ಸ್ಥಳದಲ್ಲಿ ರಾಶಿ: ಕರಾವಳಿ ಉತ್ಸವ ಮೈದಾನವನ್ನು ಮಧ್ಯದಲ್ಲಿ ತಂತಿ ಬೇಲಿ ಹಾಕಿ ಎರಡು ವಿಭಾಗಗಳಾಗಿ ಮಾಡಲಾಗಿದ್ದು, ವಸ್ತು ಪ್ರದರ್ಶನ ನಡೆಯುವ ಭಾಗದಲ್ಲಿ ಮಣ್ಣಿನ ರಾಶಿ ಇದೆ. ಕಳೆದೊಂದು ವರ್ಷದಿಂದ ಯಾವುದೇ ಕಾರ್ಯಕ್ರಮಗಳು ನಡೆಯದ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಸಮಸ್ಯೆಯಾಗಿಲ್ಲ. ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳಬೇಕಿದ್ದಲ್ಲಿ ಮಣ್ಣು ತೆರವುಗೊಳಿಸಲೇಬೇಕಿದೆ.

    ಕುರುಚಲು ಪೊದೆ: ಮಣ್ಣು ಇರುವುದರಿಂದ ಪ್ರತಿನಿತ್ಯ ವಾಕಿಂಗ್, ಜಾಗಿಂಗ್ ಮಾಡುವವರಿಗೆ, ಮೈದಾನದಲ್ಲಿ ಆಡುತ್ತಿದ್ದವರಿಗೆ ಸಮಸ್ಯೆಯಾಗಿದೆ. ಲಘುವಾಹನ ಕಲಿಯುವವರೂ ಈ ಮೈದಾನವನ್ನು ಅಭ್ಯಾಸಕ್ಕೆ ಬಳಸುತ್ತಿದ್ದರು. ಪ್ರಸ್ತುತ ಇವರೆಲ್ಲರಿಗೆ ಜಾಗವಿಲ್ಲದಂತಾಗಿದೆ. ರಾಶಿ ಹಾಕಿರುವ ಮಣ್ಣಿನ ಮೇಲೆಯೇ ಹಲವು ಅಡಿಗಳಷ್ಟು ಎತ್ತರಕ್ಕೆ ಹುಲ್ಲು ಪೊದೆ ಬೆಳೆದಿದೆ. ಅಲೆಮಾರಿಗಳೂ ಅಲ್ಲಿ ಬಂದು ಮಲಗುವುದು, ಮಲಮೂತ್ರ ವಿಸರ್ಜನೆ ಮಾಡುವುದು ಕಂಡು ಬರುತ್ತದೆ. ಇನ್ನೊಂದೆಡೆ ಬೆಳಗ್ಗೆ ಬೇಗ ಅಥವಾ ಸಾಯಂಕಾಲದ ಹೊತ್ತು ವಾಕಿಂಗ್ ಮಾಡುವವರು, ಹಾವು, ಚೇಳುಗಳ ಭೀತಿ ಎದುರಿಸುವಂತಾಗಿದೆ.

    ತಾತ್ಕಾಲಿಕ ಶೇಖರಣೆ: ಮಂಗಳಾ ಸ್ಟೇಡಿಯಂನ ಗ್ಯಾಲರಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ದೊರೆತ ಮಣ್ಣನ್ನು ಕರಾವಳಿ ಉತ್ಸವ ಮೈದಾನದಲ್ಲಿ ಮಣ್ಣು ಸುರಿಯಲಾಗಿದೆ. ಮುಂದಕ್ಕೆ ಮೈದಾನ ಸಮತಟ್ಟುಗೊಳಿಸಲು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮಣ್ಣಿನ ಅವಶ್ಯಕತೆಯಿದ್ದಲ್ಲಿ ಅದೇ ಮಣ್ಣನ್ನು ಬಳಸಲು ಉದ್ದೇಶಿಸಲಾಗಿದೆ. ಆದ್ದರಿಂದ ಬೇರೆ ಜಾಗ ಇಲ್ಲದೆ ತಾತ್ಕಾಲಿಕವಾಗಿ ಮಣ್ಣು ಶೇಖರಿಸಿಡಲಾಗಿದೆ. ಕ್ರೀಡಾಕೂಟಗಳಿಗೆ ಇನ್ನೊಂದು ಪಾರ್ಶ್ವದಲ್ಲಿ ಅವಕಾಶ ಮಾಡಿ ಕೊಡಲಾಗಿದ್ದು, ಸಮಸ್ಯೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಶಿ ಹಾಕಿರುವ ಮಣ್ಣು ಕ್ರೀಡಾ ಇಲಾಖೆಗೆ ಸಂಬಂಧಿಸಿದ್ದು. ಮಂಗಳಾ ಸ್ಟೇಡಿಯಂನಲ್ಲಿ ಕಟ್ಟಡ ನಿರ್ಮಾಣ ಸಂದರ್ಭ ತೆಗೆದಿರಿಸಲಾಗಿದೆ. ಅಗತ್ಯ ಸಂದರ್ಭ ಹೊರಗಿನಿಂದ ದುಡ್ಡುಕೊಟ್ಟು ತರುವುದರ ಬದಲು ಅದನ್ನೇ ಉಪಯೋಗಿಸಲು ಉದ್ದೇಶಿಸಲಾಗಿದೆ. ಮೈದಾನದಲ್ಲಿ ಯಾವುದೇ ಕಾರ್ಯಕ್ರಮಗಳೂ ಇಲ್ಲದಿರುವುದರಿಂದ ತೆಗೆಯಲು ಹೋಗಿಲ್ಲ.

    ಪ್ರದೀಪ್ ಡಿಸೋಜ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts