More

    ಕಾಯಕ, ದಾಸೋಹ ಪರಿಕಲ್ಪನೆಯಿಂದ ಸಮಾಜ ಶುದ್ಧಿ

    ವಿಜಯಪುರ : ಪ್ರಪಂಚದಲ್ಲಿ ಅನಾಚಾರವೇ ಮಿತಿಮೀರಿದ್ದು ಅದನ್ನು ಬುಡಸಮೇತ ಕಿತ್ತೊಗೆಯಲು ಬಸವಾದಿ ಶರಣರ ಕಾಯಕ, ದಾಸೋಹ ಪರಿಕಲ್ಪನೆಯ ಅನುಕರಣೆ ಅತ್ಯವಶ್ಯ ಎಂದು ಗದಗ ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

    ಮಂಗಳವಾರ ಸಂಜೆ ನಗರದ ಇಬ್ರಾಹಿಂಪುರ ಸಮೀಪ ಗುರುಪಾದೇಶ ನಗರದಲ್ಲಿರುವ ಶ್ರೀ ತೋಂಟದಾರ್ಯ ಅನುಭವ ಮಂಟಪದಲ್ಲಿ ಶ್ರಾವಣ ಮಾಸ ನಿಮಿತ್ತ ಹಮ್ಮಿಕೊಂಡಿರುವ ಮುಂಡಗೋಡದ ಅತ್ತಿವೇರಿಯ ಶ್ರೀ ಬಸವೇಶ್ವರಿ ಮಾತಾಜಿ ಅವರ ಅಮೃತ ವಾಣಿಯಿಂದ ‘ಕಲ್ಯಾಣದ ಶರಣ-ಶರಣೆಯರ ದರ್ಶನ’ ಪ್ರವಚನ ಉದ್ಘಾಟನೆ ನೆರವೇರಿಸಿ ಶ್ರೀಗಳು ಮಾತನಾಡಿ, ಶರಣರ ಜೀವನ ಚರಿತ್ರೆಗಳನ್ನು ಕೇಳುವುದರಿಂದ ಮನ ಪರಿವರ್ತನೆ ಆಗುವುದಲ್ಲದೇ, ಜೀವನ ಮೌಲ್ಯ ವೃದ್ಧಿಯಾಗಿ ಬದುಕು ಸರಳ, ಸುಂದರವಾಗುತ್ತದೆ ಎಂದು ಹೇಳಿದರು.

    ವಿಜಯಪುರದ ಷಣ್ಮುಖಾರೂಢಮಠದ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಮಾತನಾಡಿ, ಶರಣರ ವಚನಗಳು ಸತ್ಯ ಹಾಗೂ ಸತ್ವಭರಿತವಾಗಿದ್ದು, ಸರಳವಾಗಿರುವ ವಚನಗಳನ್ನು ಅರ್ಥೈಸಿಕೊಂಡು ಅನುಕರಣೆ ಮಾಡಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.

    ಕಲಬುರ್ಗಿ ಆಳಂದದ ತೋಂಟದಾರ್ಯ ಅನುಭವ ಮಂಟಪದ ಸಂಚಾಲಕರಾದ ಕೋರಣೇಶ್ವರ ಶ್ರೀಗಳು ಮಾತನಾಡಿ, ಸಮಾಜದಲ್ಲಿದ್ದ ಅಸಮಾನತೆಯ ವಿರುದ್ಧ ಧ್ವನಿ ಎತ್ತಲು ಹಾಗೂ ಸಮಾಜದಲ್ಲಿರುವ ಅಂಕು-ಡೊಂಕುಗಳನ್ನು ತಿದ್ದಲು ಬಸವಣ್ಣನವರು ಬರಬೇಕಾಯಿತು. ಅವರು ಭಕ್ತಿ ಮಾರ್ಗದಿಂದ ಕ್ರಾಂತಿಯನ್ನೇ ಮಾಡಿ, ಸಮಾಜದ ಉದ್ಧಾರಕ್ಕೆ ಕಾರಣೀಭೂತರಾದರು ಎಂದರು.

    ವೇದಿಕೆಯಲ್ಲಿ ಶ್ರೀ ಬಸವೇಶ್ವರಿ ಮಾತಾಜಿ, ಕಾರ್ಯಾಧ್ಯಕ್ಷ ಎಸ್.ಎಚ್. ನಾಡಗೌಡ, ಉಪಾಧ್ಯಕ್ಷ ಎಂ.ಎಸ್. ರುದ್ರಗೌಡ, ಕಾರ್ಯದರ್ಶಿ ಎನ್.ಕೆ. ಕುಂಬಾರ ಉಪಸ್ಥಿತರಿದ್ದರು.

    ಸದಸ್ಯರಾದ ಪಂಚಪ್ಪ ಕಲ್ಬುರ್ಗಿ, ಸುಭಾಷ್ ಇಂಗಳೇಶ್ವರ, ರಾಜು ಪಾಟೀಲ, ಸೂರ್ಯಕಾಂತ ಗಡಗಿ, ಸಾಹಿತಿಗಳಾದ ಶಂಕರ ಬೈಚಬಾಳ ಹಾಗೂ ಮೋಹನ ಕಟ್ಟಿಮನಿ, ಶರಣ-ಶರಣೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts