More

    ಉಡುಪಿ ಜಿಲ್ಲೆಯಾದ್ಯಂತ 7 ಸಾವಿರ ಸೋಕ್‌ಪಿಟ್ ನಿರ್ಮಾಣ ಗುರಿ

    ಉಡುಪಿ: ಮನೆ ಪರಿಸರ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಈ ವರ್ಷ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜಿಲ್ಲೆಯಾದ್ಯಂತ 7,750 ಬಚ್ಚಲು ಗುಂಡಿ ನಿರ್ಮಾಣ ಗುರಿ ಹೊಂದಲಾಗಿದೆ. ಈವರೆಗೆ ಕೇವಲ ಶೇ.22ರಷ್ಟು ಕಾಮಗಾರಿ ಪೂರ್ತಿಯಾಗಿದ್ದು, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಾಕಿ ಕೆಲಸ ಪೂರ್ಣಗೊಳಿಸುವಂತೆ ಎಲ್ಲಾ ಪಿಡಿಒಗಳಿಗೆ ಜಿಪಂ ಸೂಚನೆ ನೀಡಿದೆ.

    ಜಿಲ್ಲೆಯಲ್ಲಿ ಬಚ್ಚಲಿನ ನೀರು, ಪಾತ್ರೆ, ಬಟ್ಟೆ ತೊಳೆದ ನೀರನ್ನು ಹೆಚ್ಚಾಗಿ ತೆಂಗಿನ ಬುಡಕ್ಕೆ ಅಥವಾ ತೋಟಕ್ಕೆ ಬಿಡಲಾಗುತ್ತದೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿದೆ. ಇದನ್ನು ತಡೆಗಟ್ಟಿ ನೈರ್ಮಲ್ಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ 2020-21ನೇ ಸಾಲಿನಲ್ಲಿ 155 ಗ್ರಾಪಂಗೆ ತಲಾ 50 ಬಚ್ಚಲುಗುಂಡಿ ನಿರ್ಮಾಣಕ್ಕೆ ಗುರಿ ನಿಗದಿ ಮಾಡಲಾಗಿದೆ. ಆದರೆ ಸಮುದ್ರ ತೀರದ ಗ್ರಾಮಗಳಲ್ಲಿ ಸೋಕ್‌ಪಿಟ್ ಗುಂಡಿ ತೆಗೆದಾಗ ನೀರಿನ ಒರತೆ ಬರುವ ಕಾರಣದಿಂದ ಹೆಚ್ಚಿನ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ.

    1,255 ಕಾಮಗಾರಿ ಪೂರ್ಣ
    ಬ್ರಹ್ಮಾವರ ತಾಲೂಕಿನ 27 ಗ್ರಾಪಂಗಳಲ್ಲಿ 1,350 ಸೋಕ್ ಪಿಟ್ ಗುರಿ ನೀಡಲಾಗಿದ್ದು, 196 ಕಾಮಗಾರಿ ಪೂರ್ಣಗೊಂಡಿದೆ. 261 ಕಾಮಗಾರಿ ನಿರ್ಮಾಣ ಹಂತದಲ್ಲಿದೆ. ಅದೇ ರೀತಿ ಬೈಂದೂರಿನ 15 ಗ್ರಾಪಂಗಳಿಗೆ ನೀಡಿದ 750 ಪಿಟ್‌ನಲ್ಲಿ 102 ಪೂರ್ತಿಯಾಗಿದ್ದು, 290 ನಿರ್ಮಾಣವಾಗುತ್ತಿದೆ. ಹೆಬ್ರಿಯಲ್ಲಿ 9 ಗ್ರಾಪಂಗಳ 450ರಲ್ಲಿ 78 ಪೂರ್ಣಗೊಂಡಿದ್ದು, 12 ನಿರ್ಮಾಣವಾಗುತ್ತಿದೆ. ಕಾಪುವಿನಲ್ಲಿ 16 ಗ್ರಾಪಂಗಳಿಗೆ 800 ಗುರಿ ನೀಡಲಾಗಿದ್ದು, 164 ಪೂರ್ತಿಯಾಗಿದ್ದು, 162 ನಿರ್ಮಾಣವಾಗುತ್ತಿದೆ. ಕಾರ್ಕಳದಲ್ಲಿ 27 ಗ್ರಾಪಂಗಳಿಗೆ 1,350 ಗುರಿ ನೀಡಲಾಗಿದ್ದು, 243 ಪೂರ್ತಿಯಾಗಿದೆ. 67 ನಿರ್ಮಾಣವಾಗುತ್ತಿದೆ. ಕುಂದಾಪುರದಲ್ಲಿ 45 ಗ್ರಾಪಂಗಳಿಗೆ 2250 ಗುರಿ ನೀಡಿದ್ದು, 387 ಪೂರ್ತಿಯಾಗಿದೆ. 1,154 ನಿರ್ಮಾಣ ಹಂತದಲ್ಲಿದೆ. ಉಡುಪಿಯಲ್ಲಿ 16 ಗ್ರಾಪಂಗಳಲ್ಲಿ 800 ಗುರಿ ನೀಡಿದ್ದು, 85 ಪೂರ್ತಿಯಾಗಿದ್ದು, 182 ನಿರ್ಮಾಣವಾಗುತ್ತಿದೆ. ಒಟ್ಟು 1255 ಬಚ್ಚಲುಗುಂಡಿ ಪೂರ್ಣಗೊಂಡಿದ್ದು, 2128 ಕಾಮಗಾರಿ ನಿರ್ಮಾಣಹಂತದಲ್ಲಿದೆ. ಹೊಸದಾಗಿ 1298 ಕಾಮಗಾರಿಗಳಿಗೆ ಮಂಜೂರಾತಿ ಲಭಿಸಿದೆ. ಕುಂದಾಪುರದಲ್ಲಿ ಶೇ.34ರಷ್ಟು ಕಾಮಗಾರಿ ಪೂರ್ಣಗೊಂಡು ಮೊದಲ ಸ್ಥಾನದಲ್ಲಿದ್ದರೆ ಹೆಬ್ರಿ ತಾಲೂಕಿನಲ್ಲಿ ಶೇ.10ರಷ್ಟು ಮಾತ್ರ ಕೆಲಸ ನಡೆದಿದ್ದು, ಕೊನೆಯ ಸ್ಥಾನದಲ್ಲಿದೆ.

    ಎಷ್ಟು ಅನುದಾನ ?
    ಬಚ್ಚಲು ಗುಂಡಿಗೆ ಒಟ್ಟು ಮೊತ್ತ 14,000 ರೂ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಲಭಿಸುತ್ತದೆ. ಇದರಲ್ಲಿ 7,980 ರೂ. ಕೂಲಿ ಮೊತ್ತ ಹಾಗೂ 6020 ರೂ. ಸಾಮಗ್ರಿ ವೆಚ್ಚ ನೀಡಲಾಗುತ್ತದೆ. 2021-22 ನೇ ಸಾಲಿನಲ್ಲಿ ಕೂಡ ಪ್ರತಿ ಗ್ರಾಮ ಪಂಚಾಯಿತಿಗೆ 50 ಬಚ್ಚಲು ಗುಂಡಿ ನಿರ್ಮಾಣ ಗುರಿ ನೀಡಲಾಗಿದೆ.

    ಜಿಲ್ಲೆಯ ಗ್ರಾಪಂಗಳ ನಿಗದಿತ 50 ಪಿಟ್‌ಗಳಲ್ಲಿ ಸರಾಸರಿ 30 ಪಿಟ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆಶ್ರಯ ಕಾಲನಿಗಳನ್ನು ಗುರುತಿಸಿ ಎಲ್ಲ ಕಾಮಗಾರಿ ಮಳೆಗಾಲಕ್ಕಿಂತ ಮುನ್ನ ಮುಗಿಸಲು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಚರಂಡಿಗೆ ಕೊಳಚೆ ನೀರು ಸೇರುವುದು ನಿಲ್ಲಬೇಕು ಎಂಬುದು ಯೋಜನೆಯ ಮುಖ್ಯ ಉದ್ದೇಶ.
    ಡಾ. ನವೀನ್ ಭಟ್, ಜಿಪಂ ಸಿಇಒ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts