More

    ಸ್ನೇಹಸಿಂಚನ ಶಾಲಾ ವಾರ್ಷಿಕೋತ್ಸವ ಸಮಾರಂಭ

    ಕೆ.ಎಂ.ದೊಡ್ಡಿ: ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಹೆಚ್ಚುತ್ತಿರುವುದು ಒಂದೆಯಾದರೆ, ಗಂಡು ಮಕ್ಕಳು ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು ಮತ್ತೊಂದೆಡೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ವಿಷಾದಿಸಿದರು.

    25ನೇ ವರ್ಷದ ಬೆಳ್ಳಿಹಬ್ಬ ಹಿನ್ನೆಲೆಯಲ್ಲಿ ಇಲ್ಲಿನ ಸ್ನೇಹ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ನೇಹಸಿಂಚನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಆಗುತ್ತಿರುವುದರಿಂದ ಹೆಣ್ಣು ಸಂತತಿ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಗಂಡು ಮಕ್ಕಳು ಪಾಲಕರನ್ನು ಹೊರಹಾಕುತ್ತಿರುವುದು ಆತಂಕಕಾರಿ ವಿಚಾರ. ಆದರೆ ಹೆಣ್ಣುಮಕ್ಕಳು ಪಾಲಕರನ್ನು ಪ್ರೀತಿ ಮತ್ತು ವಿಶ್ವಾಸದಿಂದ ಕಾಣುತ್ತಿದ್ದು, ಇಂತಹ ಸನ್ನಿವೇಶದಲ್ಲೂ ಹೆಣ್ಣು ಭ್ರೂಣಹತ್ಯೆ ನಡೆಯುತ್ತಿರುವುದು ತಲೆ ತಗ್ಗಿಸುವ ವಿಚಾರ. ಹೆಣ್ಣು-ಹೆಣ್ಣಿಗೆ ಶತ್ರು ಎಂಬಂತೆ ಹೆಣ್ಣು ಮಕ್ಕಳ ಹತ್ಯೆ ಮಾಡುತ್ತಿರುವುದು ವಿಪರ್ಯಾಸ. ಇಂತಹ ಘಟನೆಯಿಂದ ಜಿಲ್ಲೆ ತಲೆತಗ್ಗಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಖಾಸಗಿ ವಿದ್ಯಾಸಂಸ್ಥೆಗಳನ್ನು ಕಟ್ಟುವುದು ಸುಲಭದ ಮಾತಲ್ಲ. ಗುಣಾತ್ಮಕ ಶಿಕ್ಷಣ ನೀಡಿದಾಗ ಮಾತ್ರ ಶಿಕ್ಷಣ ಸಂಸ್ಥೆಗಳು ನಿಲ್ಲುತ್ತವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಪರ್ಧಾತ್ಮಕ ಮನೋಭವದಿಂದ ಸರ್ಕಾರಿ ಶಾಲೆಗಳ ಜವಾಬ್ದಾರಿ ಹೆಚ್ಚುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಲ್ಲದಿದ್ದರೆ, ಸರ್ಕಾರ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

    ಸರ್ಕಾರದ ಕಾನೂನಿನಿಂದ ಶಿಕ್ಷಕರು ವಿದ್ಯಾರ್ಥಿಗಳನ್ನು ಶಿಕ್ಷಿಸಲು ಆಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳ ನಡವಳಿಕೆ ಬದಲಾಗಿ ಮಕ್ಕಳು ಅಡ್ಡದಾರಿ ಹಿಡಿಯುತಿದ್ದಾರೆ. ಈ ನಡುವೆ ಹಿರಿಯರು, ಶಿಕ್ಷಕರ ಮೇಲಿನ ಗೌರವ ಕಡಿಮೆಯಾಗುತ್ತಿದ್ದು, ಸಂಬಂಧಗಳ ಬೆಲೆ ತಿಳಿದುಕೊಳ್ಳುವ ಆಸಕ್ತಿ ಇಲ್ಲವಾಗಿದೆ ಎಂದ ಬೇಸರ ವ್ಯಕ್ತಪಡಿಸಿದರು.

    ಉದ್ಯೋಗ ಗಳಿಸಲು ಮಾತ್ರ ಶಿಕ್ಷಣ ಎಂಬಂತಾಗಿದ್ದು, ಇದು ಹೀಗೇ ಮುಂದುವರಿದಲ್ಲಿ ಸಂಸ್ಕೃತಿಗೆ ದೊಡ್ಡ ಪೆಟ್ಟು ಬೀಳಲಿದೆ. ಇನ್ನಾದರೂ ಪಾಲಕರು ಎಚ್ಚೆತ್ತು ಮಕ್ಕಳ ಮೇಲೆ ಹಿಡಿತ ಸಾಧಿಸಬೇಕು ಎಂದು ಸಲಹೆ ನೀಡಿದರು.

    ಇದೇ ವೇಳೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಐಪಿಎಸ್ ಅಧಿಕಾರಿ ಪೃಥ್ವಿಕ್ ಶಂಕರ್, ರಾಷ್ಟ್ರಮಟ್ಟದ ಈಜು ಸ್ಪರ್ಧೆ ವಿಜೇತೆ ಕು.ಹಶಿಖಾ ರಾಮಚಂದ್ರ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ನೇಹ ಸಂಸ್ಥೆಯ ಸಂಸ್ಥಾಪಕ ಡಿ.ದಾಸೇಗೌಡ ವಹಿಸಿದ್ದರು. ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪುಟ್ಟರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್. ಕಾಳೀರಯ್ಯ, ಸಂಸ್ಥೆ ಅಧ್ಯಕ್ಷೆ ಶಶಿಕಲಾ ದಾಸೇಗೌಡ, ಮುಖ್ಯ ಶಿಕ್ಷಕಿ ಅನಿತಾ ಯೋಗೇಂದ್ರ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts