More

    ಅಭಯಾರಣ್ಯದ ಮಣ್ಣು ಕಳ್ಳಸಾಗಣೆ

    ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಮೀಸಲು ಅಭಯಾರಣ್ಯದಲ್ಲಿ ಒಂದಲ್ಲಾ ಒಂದು ಅಕ್ರಮಗಳು ನಡೆಯುತ್ತಲೇ ಇವೆ. ಇವುಗಳಿಗೆ ಕಡಿವಾಣ ಹಾಕಬೇಕಾದ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಮಗೆ ಸಂಬಂಧವೇ ಇಲ್ಲವೆಂಬಂತೆ ಮೌನವಾಗಿದ್ದಾರೆ.

    ಕೆಲ ದಿನಗಳ ಹಿಂದಷ್ಟೇ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಗುರುಪುರ ಭಾಗದಲ್ಲಿ ಮರಗಳ ಕಡಿತಲೆ ಮಾಡಿ ಸಾಗಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕುರಿತು ವಿಜಯವಾಣಿ ಪತ್ರಿಕೆ ವರದಿ ಮಾಡಿತ್ತು. ಇದೀಗ ಗರುಪುರ ಸಮೀಪವೇ ಭದ್ರಾ ಅಭಯಾರಣ್ಯದಲ್ಲಿ ಮಣ್ಣು ಕಳ್ಳ ಸಾಗಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ತಣಿಗೆಬೈಲು ವ್ಯಾಪ್ತಿಯ ಭದ್ರಾ ಅಭಯಾರಣ್ಯದಲ್ಲೇ ಒಂದರ ಮೇಲೊಂದು ಅಕ್ರಮ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳುವಲ್ಲಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.
    ಭದ್ರಾ ಅಭಯಾರಣ್ಯ ವ್ಯಾಪ್ತಿಯ ಗುರುಪುರ ಸರ್ವೇ ನಂಬರ್ 8ರಲ್ಲಿ ಅಕ್ರಮವಾಗಿ ನೂರಾರು ಲೋಡ್ ಮಣ್ಣನ್ನು ಸಾಗಿಸಲಾಗಿದೆ. ಯಾವಾಗ ಸ್ಥಳೀಯರು ಇಸದಕ್ಕೆ ವಿರೋಧ ವ್ಯಕ್ತಪಡಿಸಿದರೋ ಆಗ ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕೊರತೆಯಿಂದ ಮಣ್ಣನ್ನು ತೆಗೆದುಕೊಂಡು ಹೋಗಲು ಕೆಲವರು ಮುಂದಾಗಿದ್ದರು. ತಿಳಿಹೇಳಿ ವಾಪಸ್ ಕಳುಹಿಸಲಾಗಿದೆ ಎಂದು ಹೇಳುವ ಮೂಲಕ ಪ್ರಕರಣ ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ.
    ಹುಲಿ ಸಂರಕ್ಷಿತ ಅಭಯಾರಣ್ಯ, ಹುಲಿ ಸಂತತಿ ಸೇರಿ ಇತರೆ ವನ್ಯಜೀವಿಗಳ ಸಂರಕ್ಷಣೆಗೆ ನೂರಾರು ಕೋಟಿ ರೂಪಾಯಿ ಅನುದಾನ ಹರಿದು ಬರುತ್ತದೆ. ಆದರೆ ಇಷ್ಟೊಂದು ಅನುದಾನ ಬಳಸಿಕೊಳ್ಳುವ ಅರಣ್ಯ ಇಲಾಖೆ ಅಭಯಾರಣ್ಯ ಕಾಪಾಡುವಲ್ಲಿ ನಿರ್ಲಕ್ಷೃ ತೋರಿದಂತೆ ಕಾಣುತ್ತದೆ.
    ನಿರಾತಂಕವಾಗಿ ಸಾಗಿದ್ದ ದಂಧೆ: ಭದ್ರಾ ಆಭಯಾರಣ್ಯ ವ್ಯಾಪ್ತಿಯ ಗುರುಪುರ ಅರಣ್ಯದಲ್ಲಿ ಮಣ್ಣನ್ನು ಕಳ್ಳ ಸಾಗಣೆ ಮಾಡುವ ದಂಧೆ ನಿರಾತಂಕವಾಗಿ ನಡೆದಿತ್ತು. ಯಾವಾಗ ಇದೇ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರ ಕಡಿದು ಸಾಗಣೆ ಮಾಡಿರುವ ಪ್ರಕರಣ ಬೆಳಕಿಗೆ ಬಂತೋ ಆಗಲೇ ಮಣ್ಣು ಕಳ್ಳಸಾಗಣೆ ಪ್ರಕರಣವೂ ಬೆಳಕಿಗೆ ಬಂದಿದೆ. ಈಗಾಗಲೇ ನೂರಾರು ಲೋಡ್ ಮಣ್ಣನ್ನು ಸಾಗಿಸಲಾಗಿದೆ. ಆದರೆ ಅದುವರೆಗೆ ಸುಮ್ಮನಿದ್ದ ಅಧಿಕಾರಿಗಳು ಮರ ಕಡಿದ ಪ್ರಕರಣ ಬೆಳಕಿಗೆ ಬಂದ ಬಳಿಕ ಮಣ್ಣು ಕಳ್ಳ ಸಾಗಣೆಗೂ ಬ್ರೇಕ್ ಹಾಕಿದ್ದಾರೆ. ಗುರುಪುರ ಭಾಗದಲ್ಲಿ ಎಲಿಫೆಂಟ್ ಟ್ರಂಚ್ ಹೊಡೆಯಲಾಗುತ್ತಿತ್ತು. ಟ್ರಂಚ್ ಹೊಡೆಯುವಾಗ ತೆಗೆಯುತ್ತಿದ್ದ ಮಣ್ಣನ್ನು ಟ್ರಾೃಕ್ಟರ್‌ನಲ್ಲಿ ತುಂಬಿಕೊಂಡು ಹೋಗಲು ಕೆಲವರು ಮುಂದಾಗಿದ್ದರು. ಇದನ್ನು ತಿಳಿದ ಆರ್‌ಎಫ್‌ಒ ಸ್ಥಳಕ್ಕೆ ತೆರಳಿ ಮಣ್ಣು ತೆಗೆದುಕೊಂಡು ಹೋಗಲು ಬಂದವರಿಗೆ ತಿಳಿಹೇಳಿ ಮಣ್ಣನ್ನು ಅಲ್ಲಿಯೇ ಉಳಿಸಿಕೊಂಡು ಟ್ರಾೃಕ್ಟರ್ ವಾಪಸ್ ಕಳುಹಿಸಿದ್ದಾರೆ ಎಂದು ಹೇಳುವ ಮೂಲಕ ಇಡೀ ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ.
    ಟ್ರಂಚಿಂಗ್‌ಗೆ ಹಿಟಾಚಿ ಬಳಕೆ: ಸಾಮಾನ್ಯವಾಗಿ ಎಲಿಫೆಂಟ್ ಟ್ರಂಚ್ ಹೊಡೆಯಲು ಬಳಸುವುದು ಹಿಟಾಚಿ. ಆದರೆ ಗುರುಪುರ ಕಾಡಿನಲ್ಲಿ ಮಣ್ಣನ್ನು ತೆಗೆದಿರುವುದು ಜೆಸಿಬಿಯಲ್ಲಿ. ಮಣ್ಣನ್ನು ಕಳ್ಳಸಾಗಣೆ ಮಾಡಲಾಗಿದೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಪರಿಸರಾಸಕ್ತರು ದೂರಿದ್ದಾರೆ. ಎಲ್ಲೆಡೆ ಹಿಟಾಚಿಯನ್ನೇ ಬಳಸಿಕೊಂಡು ಎಲಿಫೆಂಟ್ ಟ್ರಂಚ್ ಹೊಡೆಯಲಾಗುತ್ತದೆ. ಆದರೆ ಗುರುಪುರ ಭಾಗದಲ್ಲಿ ಮಾತ್ರ ಜೆಸಿಬಿ ಬಳಸಿಕೊಂಡು ಟ್ರಂಚ್ ಹೊಡೆಯಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಗುರುಪುರ ಭಾಗದ ಅರಣ್ಯದಲ್ಲಿ ಮಣ್ಣು ತೆಗೆದಿರುವ ಜಾಗವಿದೆ. ಅದು ಟ್ರಂಚೋ ಅಥವಾ ಮಣ್ಣನ್ನು ಕಳ್ಳ ಸಾಗಣೆ ಮಾಡಿರುವ ಜಾಗವೋ ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
    ಮೇಲಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು: ತಣಿಗೆಬೈಲು ವ್ಯಾಪ್ತಿಯ ಭದ್ರಾ ಅಭಯಾರಣ್ಯದಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿ ಕೆಳ ಶ್ರೇಣಿಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡರೆ ಸಾಲದು, ಹಿರಿಯ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿ ಸ.ಗಿರಿಜಾಶಂಕರ್ ಒತ್ತಾಯಿಸಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ಬಾರದೆಯೇ 53ಕ್ಕೂ ಹೆಚ್ಚು ಮರಗಳನ್ನು ಕಡಿತಲೆ ಮಾಡಿ ಸಾಗಿಸಲು ಸಾಧ್ಯವಿಲ್ಲ. ಅದೇ ರೀತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಮಣ್ಣನ್ನೂ ಕಳ್ಳಸಾಗಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಎಸಿಎಫ್ ಹಾಗೂ ಆರ್‌ಎಫ್‌ಒ ಅವರನ್ನು ಅಮಾನತು ಮಾಡಿ ವಿಚಾರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
    ಗುರುಪುರ ಭಾಗದ ಅರಣ್ಯದಲ್ಲಿ ಮಣ್ಣನ್ನು ಟ್ರಾೃಕ್ಟರ್‌ನಲ್ಲಿ ತುಂಬಿಕೊಂಡು ಹೋಗಲಾಗುತ್ತಿದೆ ಎಂಬ ಮಾಹಿತಿ ಬಂದಾಕ್ಷಣ ಆರ್‌ಎಫ್‌ಒ ಸ್ಥಳಕ್ಕೆ ತೆರಳಿ ಮಣ್ಣು ಸಾಗಿಸುತ್ತಿದ್ದುದನ್ನು ತಡೆದಿದ್ದಾರೆ. ಮಣ್ಣು ತೆಗೆದುಕೊಂಡು ಹೋಗಲು ಬಂದವರು ಹಾಗೂ ಜೆಸಿಬಿ ಚಾಲಕನಿಗೆ ತಿಳಿಹೇಳಿ ಕಳುಹಿಸಲಾಗಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಡಿಸಿಎಫ್ ಯಶಪಾಲ್ ವಿಜಯವಾಣಿಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts