More

    ಅಲೆಮಾರಿಗಳಿಗೆ ‘ಸ್ಮಾರ್ಟ್’ ತಾಣ

    ಭರತ್ ಶೆಟ್ಟಿಗಾರ್, ಮಂಗಳೂರು

    ನಗರದಲ್ಲಿ ಸ್ಮಾಟ್‌ಸಿಟಿ ಯೋಜನೆಯಡಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಸ್ ಪ್ರಯಾಣಿಕರ ತಂಗುದಾಣಗಳು ಸೇರಿದಂತೆ ನಗರದ ವಿವಿಧೆಡೆ ಇರುವ ಬಸ್ ತಂಗುದಾಣಗಳು ಮತ್ತೆ ಅಲೆಮಾರಿಗಳು, ಭಿಕ್ಷುಕರ ವಾಸಸ್ಥಾನವಾಗಿ ಬದಲಾಗುತ್ತಿವೆ.

    ಲಾಕ್‌ಡೌನ್ ಅವಧಿಯಲ್ಲಿ ಸ್ವಲ್ಪ ಕಡಿಮೆಯಾಗಿದ್ದ ಈ ಅಲೆಮಾರಿಗಳು ಮತ್ತೆ ಬಸ್ ತಂಗುದಾಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವರಿಗಂತೂ ಬಸ್ ತಂಗುದಾಣಗಳೇ ಮನೆಯಾಗಿದ್ದು, ಅಲ್ಲೇ ಊಟ ಮಾಡಿ, ಅಲ್ಲೇ ಮಲಗುತ್ತಾರೆ. ಇದರಿಂದ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ಮಾರ್ಟ್ ಸಿಟಿಯಡಿ ನಿರ್ಮಿಸಲಾಗಿರುವ ಹೊಸ ಮಾದರಿಯ ತಂಗುದಾಣಗಳು ಅಲೆಮಾರಿಗಳ ನೆಚ್ಚಿನ ಆಯ್ಕೆಯೂ ಆಗಿವೆ.

    ನಗರದ ಕ್ಲಾಕ್‌ಟವರ್-ಕಾರ್‌ಸ್ಟ್ರೀಟ್ ರಸ್ತೆಯ ನೆಹರು ಮೈದಾನದ ಫುಟ್‌ಪಾತ್ ಹಾಗೂ ಇನ್ನೊಂದು ಬದಿಯ ಬಸ್‌ತಂಗುದಾಣಗಳು ನಿರ್ಗತಿಕರು, ಭಿಕ್ಷುಕರು, ಅಲೆಮಾರಿಗಳ ಆವಾಸ ಸ್ಥಾನವಾಗಿತ್ತು. ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ಬಸ್‌ತಂಗುದಾಣ ತೆರವುಗೊಳಿಸಿ, ಫುಟ್‌ಪಾತ್ ಸಹಿತ ಮರು ನಿರ್ಮಿಸಲಾಗಿದೆ. ಹಾಗಾಗಿ ದೂರವಾಗಿದ್ದ ಅಲೆಮಾರಿಗಳು ಮತ್ತೆ ಬಂದಿದ್ದಾರೆ. ಇನ್ನೊಂದೆಡೆ ಸ್ಟೇಟ್‌ಬ್ಯಾಂಕ್‌ನ ಲೇಡಿಗೋಷನ್ ಆಸ್ಪತ್ರೆ ಬದಿಯ ಬಸ್‌ತಂಗುದಾಣ, ಅಂಬೇಡ್ಕರ್ ವೃತ್ತ, ಪದವು ಜಂಕ್ಷನ್, ಮಣ್ಣಗುಡ್ಡೆ ಮೊದಲಾದೆಡೆಗಳಲ್ಲಿ ಬಸ್‌ತಂಗುದಾಣಗಳು ಅಲೆಮಾರಿಗಳ ತಾಣವಾಗಿವೆ.

    ಸ್ಥಳವೆಲ್ಲ ಗಲೀಜು:
    ಬಸ್ ತಂಗುದಾಣದಲ್ಲಿ ಕುಳಿತುಕೊಳ್ಳುವುದು, ಮಲಗುವುದು ಮಾತ್ರವಲ್ಲದೆ, ಯಾರಾದರೂ ಆಹಾರ ನೀಡಿದರೆ ಅಲ್ಲೇ ತಿನ್ನುವುದು, ತ್ಯಾಜ್ಯವನ್ನು ಬಿಸಾಡುವುದು, ಸ್ಥಳದಲ್ಲೇ ಮಲ, ಮೂತ್ರ ವಿಸರ್ಜನೆಯನ್ನೂ ಮಾಡುತ್ತಾರೆ. ಇದರಿಂದ ಬಸ್ಸಿಗೆ ಕಾಯುವವರು ಬಿಸಿಲು, ಮಳೆಗೆ ರಸ್ತೆ ಬದಿಯಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಎದುರಾಗುತ್ತಿದೆ ಎನ್ನುತ್ತಾರೆ ಸಾರ್ವಜನಿಕರು.

    ಪರ ಊರಿನವರು:
    ಹೀಗೆ ತಂಗುದಾಣಗಳಲ್ಲಿ ಬಂದು ವಾಸವಾಗಿರುವ ಬಹುತೇಕರು ಪರವೂರಿನವರು. ದೂರದ ಪ್ರದೇಶಗಳಿಂದ ರೈಲುಗಳಲ್ಲಿ ಬಂದು ಅಲ್ಲಲ್ಲಿ ತಿರುಗಾಡಿಕೊಂಡು ಇರುತ್ತಾರೆ. ಇವರಲ್ಲಿ ಮಾನಸಿಕ ಅಸ್ವಸ್ಥರು, ಮಕ್ಕಳಿಂದ ತಿರಸ್ಕರಿಸಲ್ಪಟ್ಟವರು, ಮನೆ ಬಿಟ್ಟು ಬಂದವರೂ ಇದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಇಂತಹ ನಿರಾಶ್ರಿತರಿಗೆ ಉಳಿದು ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದರೆ ಅಲ್ಲಿ ಸೇರಿಸಿದ ಎರಡು ದಿನದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಮತ್ತೆ ಬೀದಿಬದಿಯಲ್ಲಿ ನೆಲೆಸುತ್ತಾರೆ. ಸರಿಪಡಿಸಲು ಎಷ್ಟು ಪ್ರಯತ್ನ ಮಾಡಿದರೂ ಕೆಲವೊಬ್ಬರು ವ್ಯವಸ್ಥೆಗೆ ಹೊಂದಿಕೊಳ್ಳುವುದಿಲ್ಲ ಎನ್ನುವುದು ಅಧಿಕಾರಿಗಳ ಮಾತು.

    ಅಲೆಮಾರಿಗಳಿಗೆ ವಾಸಕ್ಕಾಗಿ ನಿರಾಶ್ರಿತರ ಕೇಂದ್ರ ವ್ಯವಸ್ಥೆಯಿದ್ದು, ಅವರನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ ದಾಖಲಿಸಲಾಗುತ್ತಿದೆ. ಕೆಲವರು ಅಲ್ಲಿಂದ ತಪ್ಪಿಸಿಕೊಂಡು ಬಂದು ರಸ್ತೆ ಬದಿ, ಬಸ್‌ನಿಲ್ದಾಣ, ತಂಗುದಾಣಗಳಲ್ಲಿ ಕುಳಿತುಕೊಳ್ಳುತ್ತಾರೆ. ಪೊಲೀಸ್ ಇಲಾಖೆ ಸಹಕಾರ ಪಡೆದು ಮತ್ತೆ ಕಾರ್ಯಾಚರಣೆ ನಡೆಸಲಾಗುವುದು.
    ಪ್ರೇಮಾನಂದ ಶೆಟ್ಟಿ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts