More

    ಸ್ಮಾರ್ಟ್ ಸಿಟಿಯಿಂದ ಕಸಾಯಿಖಾನೆ ಔಟ್

    ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಕುದ್ರೋಳಿಯಲ್ಲಿ 15 ಕೋಟಿ ರೂ. ವೆಚ್ಚದ ಕಸಾಯಿಖಾನೆ ನಿರ್ಮಿಸುವ ಪ್ರಸ್ತಾವನೆಯನ್ನು ಈಗ ಕೈಬಿಡಲಾಗಿದೆ.
    ಹಿಂದಿನ ಮೈತ್ರಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಯು.ಟಿ.ಖಾದರ್ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ ಶಿಫಾರಸು ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕಸಾಯಿಖಾನೆಯನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರ ಮಾಡಬೇಕು ಎಂದು ಬಿಜೆಪಿ ನಾಯಕರು ಯೋಜನೆಯನ್ನು ಬಲವಾಗಿ ವಿರೋಧಿಸಿದ್ದರು. ಆದರೆ ಮಂಗಳೂರು ಸ್ಮಾರ್ಟ್ ಸಿಟಿ ಬೋರ್ಡ್ ತರಾತುರಿಯಿಂದ ಕಸಾಯಿಖಾನೆ ಅಭಿವೃದ್ಧಿಯನ್ನು ಸೇರ್ಪಡೆ ಮಾಡಿ, ಸಮಗ್ರ ಯೋಜನಾ ವರದಿಯನ್ನೂ ಸಿದ್ಧಪಡಿಸಿತ್ತು. ಆದರೆ ಈಗ ಬಿಜೆಪಿ ಆಡಳಿತದ ಬೋರ್ಡ್ ಯೋಜನೆ ಕೈಬಿಡುವ ನಿರ್ಣಯ ಕೈಗೊಂಡಿದೆ.

    ವಿಹಿಂಪ ಪ್ರತಿಭಟನೆ: ಕುದ್ರೋಳಿಯ ಕಸಾಯಿಖಾನೆಗೆ 15 ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಿದ ಸಚಿವ ಯು.ಟಿ. ಖಾದರ್ ವಿರುದ್ಧ ಹಿಂದೂ ಸಂಘಟನೆಗಳ ವತಿಯಿಂದ ಪ್ರತಿಭಟನಾ ಸಭೆ ನಡೆದಿತ್ತು. ಕೇವಲ 40 ಸೆಂಟ್ಸ್ ಜಾಗದಲ್ಲಿರುವ ಕಸಾಯಿಖಾನೆ ಅಭಿವೃದ್ಧಿಗೆ 15 ಕೋಟಿ ರೂ.ಅನುದಾನ ನೀಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ವಿಹಿಂಪ ಮತ್ತು ಬಜರಂಗದಳ ನಾಯಕರು ಘೋಷಿಸಿದ್ದರು.

    ಬಿಜೆಪಿ ವಿರೋಧ: 2018ರ ಅಕ್ಟೋಬರ್‌ನಲ್ಲಿ ನಡೆದ ಸ್ಮಾರ್ಟ್ ಸಿಟಿ ಬೋರ್ಡ್ ಸಭೆಯಲ್ಲಿ ಕಸಾಯಿಖಾನೆಗೆ 15 ಕೋಟಿ ರೂ. ನೀಡುವ ನಿರ್ಣಯ ದೃಢೀಕರಿಸಲಾಗಿತ್ತು. ನಿರ್ದೇಶಕರ ಪೈಕಿ ಬಿಜೆಪಿ ಸದಸ್ಯ ಪ್ರೇಮಾನಂದ ಶೆಟ್ಟಿ ಮಾತ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಕಾಂಗ್ರೆಸ್ ಸದಸ್ಯರು ನಿರ್ಣಯದ ಪರವಾಗಿದ್ದರು. ಬಳಿಕ ಪ್ರಸ್ತಾವನೆ ಕೇಂದ್ರದ ನಗರಾಭಿವೃದ್ಧಿ ಸಚಿವಾಲಯದ ಮುಂದಿದೆ, ಸಾಧ್ಯವಾದರೆ ಸಂಸದರು ಅದನ್ನು ನಿಲ್ಲಿಸಲಿ ಎಂದು ಯು.ಟಿ.ಖಾದರ್ ಸವಾಲು ಹಾಕಿದ್ದರು.

    15 ಕೋಟಿ ರೂ. ವೆಚ್ಚದಲ್ಲಿ ಕುದ್ರೋಳಿಯ ಕಸಾಯಿಖಾನೆ ಅಭಿವೃದ್ಧಿ ಪಡಿಸಲು ಹಿಂದಿನ ಸರ್ಕಾರ ಮುಂದಾಗಿತ್ತು. ಕಸಾಯಿಖಾನೆಯನ್ನು ನಗರದ ಹೊರ ವಲಯಕ್ಕೆ ಸ್ಥಳಾಂತರ ಮಾಡುವ ಪ್ರಸ್ತಾವನೆ ಇದೆ. ಹಾಗಾಗಿ ಸ್ಮಾರ್ಟ್ ಸಿಟಿ ಯೋಜನೆಯ ಪ್ರಸ್ತಾವನೆಯನ್ನು ಸದ್ಯ ಕೈಬಿಡಲಾಗಿದೆ.
    – ಡಿ.ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts