More

    ಹೂಳು ತುಂಬಿ ಗಬ್ಬೆದ್ದು ನಾರುವ ಚರಂಡಿ

    ಕೊಳ್ಳೇಗಾಲ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಗೆ ಸೇರಿದ 2 ಬದಿಗಳ ಚರಂಡಿಯಲ್ಲಿ ಸಂಪೂರ್ಣವಾಗಿ ಹೂಳು ತುಂಬಿಕೊಂಡು ಗಬ್ಬು ನಾರುತ್ತಿದ್ದು, ಸರಾಗವಾಗಿ ನೀರು ಹರಿಯದಾಗಿದೆ.

    ನಗರಸಭೆಯ 6ನೇ ವಾರ್ಡಿಗೆ ಸೇರಿದ ಅಂಬೇಡ್ಕರ್ ರಸ್ತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲೊಂದಲ್ಲದೆ, ನಗರಸಭೆ ಕಚೇರಿಗೆ ಮುಖ್ಯ ಸಂಪರ್ಕ ಕಲ್ಪಿಸುವ ರಸ್ತೆಯೂ ಆಗಿದೆ. ಈ ನಡುವೆ ಗೀತಾಭವನ್ ಹೊಟೇಲ್ ಮುಂಭಾಗದಿಂದ ಇದೇ ಸಾಲಿನಲ್ಲಿ ಹಾದುಹೋಗುವ ಚರಂಡಿ ನಗರಸಭೆ ಕಚೇರಿವರೆಗೂ 500 ಮೀಟರ್ ಉದ್ದಕ್ಕೆ ಹೂಳು ತುಂಬಿದೆ.

    ಗೀತಾಭವನ್ ಎದುರಿನಲ್ಲಿರುವ ಅಂಜುಮಾನ್ ಇಸ್ಲಾಮಿಯ ಕಾಂಪ್ಲೆಕ್ಸ್ ತಿರುವಿನ ಮುಂಭಾಗದಿಂದ ಪೂರ್ವಾಭಿಮುಖವಾಗಿ ಸಾಕಮ್ಮಾಸ್ ಕಾಫಿ ಪುಡಿ ಅಂಗಡಿವರೆಗೆ ಸಂಪೂರ್ಣವಾಗಿ 400 ಮೀಟರ್ ಉದ್ದದ ಚರಂಡಿಯಲ್ಲಿ ಹೂಳು ತುಂಬಿಕೊಂಡಿದ್ದು, ಚರಂಡಿ ನೀರು ಕಪ್ಪು ಬಣ್ಣಕ್ಕೆ ಪರಿವರ್ತನೆಗೊಂಡು ಗಬ್ಬು ನಾರುತ್ತಿದೆ. ಪರಿಣಾಮ, ಈ ಭಾಗದ ಅಂಗಡಿಯವರು ಹಾಗೂ ರಸ್ತೆ ಬಳಕೆದಾರರು ಮೂಗು ಮುಚ್ಚಿಕೊಂಡು ನಿತ್ಯ ಕಾಲ ಕಳೆಯುವಂತಾಗಿದೆ.

    ರಸ್ತೆಗೆ ಬಂದು ಚರಂಡಿ ನೀರು: ಮಾ.6ರಂದು ಸಂಜೆ ಪಟ್ಟಣದಲ್ಲಿ ಮುಕ್ಕಾಲುಗಂಟೆ ತಂಪೆರೆದ ಮಳೆಗೆ ಅಂಬೇಡ್ಕರ್ ರಸ್ತೆ ಸಂಪೂರ್ಣ ತ್ಯಾಜ್ಯ ನೀರಿನಿಂದ ಆವೃತಗೊಂಡು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟಾಯಿತು. ರಸ್ತೆಯಿಂದ ಚರಂಡಿಗೆ ಹರಿಯಬೇಕಾದ ಮಳೆ ನೀರು, ಚರಂಡಿಯಲ್ಲಿ ಗಬ್ಬು ನಾರುತ್ತಿದ್ದ ತ್ಯಾಜ್ಯವನ್ನೆಲ್ಲ ಹೊತ್ತು ರಸ್ತೆಗೆ ತಂದು ಬಿಟ್ಟಿದ್ದ ಪರಿಣಾಮ ಸಾರ್ವಜನಿಕ ಸಂಚಾರಕ್ಕೆ ತೊಂದರೆ ಎದುರಾಗಿತ್ತು. ಈ ವೇಳೆ ಆಶ್ಚರ್ಯಗೊಂಡ ರಸ್ತೆ ಬದಿಯ ಅಂಗಡಿ ನಿವಾಸಿಗಳು ಕೇವಲ ಮುಕ್ಕಾಲು ಗಂಟೆ ಮಳೆಗೆ ಪರಿಸ್ಥಿತಿ ಹೀಗಾದರೆ, ಮುಂದೆ ದಿನವಿಡೀ ಮಳೆಯಾದರೆ ಪರಿಸ್ಥಿತಿ ಇನ್ನೇನಾಗಬಹುದು ಎಂದು ಗಾಬರಿಗೊಂಡರಲ್ಲದೆ, ಈ ಕೂಡಲೇ ನಗರಸಭೆ ಆಡಳಿತ ರಸ್ತೆ ಬದಿಯಲ್ಲಿರುವ ಚರಂಡಿ ಹೂಳು ತೆಗೆಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

    ರಸ್ತೆ ಮಧ್ಯಕ್ಕೆ ಬಂದ ಪಾದಚಾರಿಗಳು: ಅಂಬೇಡ್ಕರ್ ರಸ್ತೆ ಸಂಪೂರ್ಣ ಅವ್ಯವಸ್ಥೆ ಆಗರವಾಗಿದೆ. ಮಸೀದಿ ವೃತ್ತದಿಂದ ನಗರಸಭಾ ಕಚೇರಿವರೆಗಿನ ರಸ್ತೆ ಪಾದಚಾರಿ ಮಾರ್ಗ ಪ್ರಸ್ತುತ ಸಾರ್ವಜನಿಕರಿಗೆ ಲಭ್ಯವಿಲ್ಲ. ಅದನ್ನು ಬೀದಿ ಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ. ಬಾಳೆಹಣ್ಣು, ನಿಂಬೆಹಣ್ಣ, ತರಕಾರಿಗಳ ಹತ್ತಾರು ಕೈಗಾಡಿಗಳು ಸೇರಿದಂತೆ ಇತರ ವ್ಯಾಪಾರಸ್ಥರು ತಮ್ಮದೇ ಸ್ವಂತ ಜಾಗ ಎಂಬಂತೆ ನಿತ್ಯ ಬೆಳಗ್ಗೆಯಿಂದ ಸಂಜೆವರೆಗೆ ಹಿಡಿದಿಟ್ಟುಕೊಂಡಿದ್ದಾರೆ. ಪರಿಣಾಮ, ರಸ್ತೆ ಬದಿಯಲ್ಲಿ ಸಂಚರಿಸಬೇಕಾದ ಜನರು ರಸ್ತೆ ಮಧ್ಯಕ್ಕೆ ಅನಿವಾರ್ಯವಾಗಿ ಬಂದು ಸಂಚರಿಸುತ್ತಾರೆ. ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಸರ್ಕಸ್ ಮಾಡುತ್ತಿದ್ದಾರೆ. ಇದನ್ನು ನಗರಸಭಾ ಅಧಿಕಾರಿಗಳು ಕಣ್ಣಾರೇ ಕಂಡರೂ ತಮಗೂ ಇದಕ್ಕೂ ಏನು ಸಂಬಂಧವಿಲ್ಲ ಎಂಬಂತೆ ತೆರಳುತ್ತಾರೆ. ಇತ್ತ ಪೊಲೀಸರೂ ನಗರಸಭೆಗೆ ಬೇಡದ ವಿಚಾರ ನಮಗೇಕೆ ಎನ್ನುವಂತಿರುವುದು ಸಾರ್ವಜನಿಕ ವಲಯದಲ್ಲಿ ವಿಭಿನ್ನ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

    ನಗರಸಭೆ ಕಚೇರಿ ಮುಂಭಾಗದ ಅಂಬೇಡ್ಕರ್ ರಸ್ತೆ ಬದಿಯ ಚರಂಡಿಗಳಲ್ಲಿ ಅಗಾಧವಾಗಿ ಹೂಳು ತುಂಬಿದೆ. ಇದನ್ನು ತೆಗೆಸದಿದ್ದಲ್ಲಿ ಮಳೆ ನೀರು ರಸ್ತೆ ಮತ್ತು ಅಂಗಡಿ ಮುಂಗಟ್ಟುಗಳಿಗೆ ನುಗ್ಗಲಿದೆ.
    ವಿ.ಶ್ರೀನಿವಾಸಮೂರ್ತಿ, ವರ್ತಕ, ಅಂಬೇಡ್ಕರ್ ರಸ್ತೆ, ಕೊಳ್ಳೇಗಾಲ

    ಅಂಬೇಡ್ಕರ್ ರಸ್ತೆ ಬದಿಯ ಚರಂಡಿ ಹೂಳೆತ್ತಿಸುವ ವಿಚಾರ ಮತ್ತು ರಸ್ತೆ ಪಾದಚಾರಿ ಬೀದಿಬದಿ ವ್ಯಾಪಾರಿಗಳಿಂದ ಅತಿಕ್ರಮಣದ ಕುರಿತು ಕೂಡಲೇ ಚೆಲುವ ಚಾಮರಾಜನಗರ ಕಾರ್ಯಪಡೆ ಕಾರ್ಯಾಚರಣೆ ನಡೆಸಿ ತೆರವಿಗೆ ಕ್ರಮವಹಿಸಲಾಗುವುದು.
    ಕೆ.ಸುರೇಶ್, ಯೋಜನಾ ನಿರ್ದೇಶಕ, ಜಿಲ್ಲಾ ನಗರಾಭಿವೃದ್ಧಿ ಕೋಶ, ಚಾಮರಾಜನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts