More

    ಮಳೆಗಾಲದಲ್ಲಿ ಕೆಸರು, ಈಗ ಧೂಳಿನ ಮಜ್ಜನ

    ಲಕ್ಷ್ಮೇಶ್ವರ: ಲಕ್ಷ್ಮೇಶ್ವರ-ಗದಗ ಸಂರ್ಪಸುವ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಇದರಿಂದ ವಾಹನ ಸವಾರರಿಗೆ ಮಳೆಗಾಲದಲ್ಲಿ ಕೆಸರಿನ ಸ್ನಾನವಾದರೆ, ಈಗ ಧೂಳಿನ ಮಜ್ಜನವಾಗುತ್ತಿದೆ.

    ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಮಿತಿಮೀರಿ ಎಂ ಸ್ಯಾಂಡ್, ಜಲ್ಲಿಕಲ್ಲು ಸಾಗಿಸುವ ಟಿಪ್ಪರ್​ಗಳಿಂದ ರಸ್ತೆ ಹಾಳಾಗಿ ಹೋಗಿದ್ದು, ತಗ್ಗು-ಗುಂಡಿಗಳು ಉಂಟಾಗಿವೆ. ವಾಹನಗಳು ಸಂಚರಿಸಿದಾಗ ವಿಪರೀತ ಧೂಳು ಮೇಲೇಳುತ್ತಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲದೆ, ಪಕ್ಕದ ಜಮೀನುಗಳಲ್ಲಿನ ಜೋಳ, ಹತ್ತಿ, ಕಡಲೆ ಮತ್ತಿತರ ಬೆಳೆಗಳು ಹಾಳಾಗುತ್ತಿವೆ.

    ಗದಗ-ಲಕ್ಷ್ಮೇಶ್ವರ ಮಧ್ಯೆ 35 ಕಿಮೀ ಅಂತರವಿದೆ. ರಸ್ತೆ ಬಹುತೇಕ ಹದಗೆಟ್ಟಿದ್ದರಿಂದ 50 ನಿಮಿಷದಲ್ಲಿ ತಲುಬೇಕಾದವರು 2 ಗಂಟೆ ತೆಗೆದುಕೊಳ್ಳುವಂತಾಗಿದೆ. ಬಸ್, ಲಾರಿ, ಟಿಪ್ಪರ್ ಹೇಗೋ ಸಾಗುತ್ತವೆ. ಕಾರ್, ಬೈಕ್ ಸವಾರರು ಹರಸಾಹಸ ಮಾಡಬೇಕಾಗಿದೆ. ಲಕ್ಷ್ಮೇಶ್ವರ- ದೇವಿಹಾಳ, ಲಕ್ಷ್ಮೇಶ್ವರ- ಮುಕ್ತಿಮಂದಿರ, ಸೂರಣಗಿ- ಬಾಲೆಹೊಸೂರ, ಲಕ್ಷ್ಮೇಶ್ವರ-ನೆಲೂಗಲ್, ಸೂರಣಗಿ-ಅಂಕಲಿ, ಗೋನಾಳ-ಶಿಗ್ಲಿ, ಲಕ್ಷ್ಮೇಶ್ವರ- ಯತ್ನಳ್ಳಿ, ಮಾಢಳ್ಳಿ, ಯಳವತ್ತಿ ಸೇರಿದಂತೆ ತಾಲೂಕಿನ ರಸ್ತೆಗಳೆಲ್ಲ ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ.

    ಲಕ್ಷ್ಮೇಶ್ವರ ತಾಲೂಕಿನ ರಸ್ತೆಗಳೆಲ್ಲ ಹಾಳಾಗಿವೆ. ಪ್ರತಿ ವರ್ಷ ರಸ್ತೆಗಳ ಗುಂಡಿ ಮುಚ್ಚಲು ಹಾಗೂ ದುರಸ್ತಿಗಾಗಿ ಕೋಟ್ಯಂತರ ರೂ. ವಿನಿಯೋಗಿಸುತ್ತಿದೆ. ಆದರೆ, ಮಿತಿಮೀರಿ ಮರಳು, ಖಡಿ, ಎಂ ಸ್ಯಾಂಡ್ ಸಾಗಿಸುವ ಟಿಪ್ಪರ್​ಗಳ ಸಂಚಾರದಿಂದ ಹಾಗೂ ಕಳಪೆ ಕಾಮಗಾರಿಯಿಂದ ಸರ್ಕಾರದ ಹಣ ಪೋಲಾಗುತ್ತಿದೆ. ಪದೇಪದೆ ಗುಂಡಿ ಮುಚ್ಚುವ ಬದಲು ಮರು ನಿರ್ವಿುಸಬೇಕು.

    | ವಿರೂಪಾಕ್ಷ ಆದಿ, ಲಕ್ಷ್ಮೇಶ್ವರ ರೈತ

    ಅತಿಯಾದ ಮಳೆ, ಭಾರಿ ವಾಹನ ಸಂಚಾರದಿಂದ ಹದಗೆಟ್ಟ ಲಕ್ಷ್ಮೇಶ್ವರ-ಗದಗ ರಸ್ತೆ ಸೇರಿ ಇತರ ಪ್ರಮುಖ ರಸ್ತೆಗಳ ದುರಸ್ತಿ ಕೈಗೊಳ್ಳಲಾಗಿದೆ. ಲಕ್ಷ್ಮೇಶ್ವರದಿಂದ 2 ಕಿಮೀ ರಸ್ತೆ ಮರು ಡಾಂಬರೀಕರಣ ಕಾಮಗಾರಿ ಸದ್ಯದಲ್ಲೇ ಪ್ರಾರಂಭಿಸಲಾಗುವುದು. ತಾಲೂಕಿನಲ್ಲಿ ಹದಗೆಟ್ಟ ಎಲ್ಲ ರಸ್ತೆಗಳ ದುರಸ್ತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    | ರಾಜೇಂದ್ರ ಡಿ.ಬಿ, ಪಿಡಬ್ಲ್ಯುಡಿ ಸಹಾಯಕ, ಕಾರ್ಯನಿರ್ವಾಹಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts