More

    ಸೆ.15ರಂದು ಎಸ್‌ಕೆಡಿಆರ್‌ಡಿಪಿ ಆರೋಗ್ಯ ರಕ್ಷಾ ತುರ್ತು ಸಹಾಯನಿಧಿ ಉದ್ಘಾಟನೆ

    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಸಹಾಯ ಸಂಘಗಳ ಸದಸ್ಯರಿಗೆ ಆರೋಗ್ಯ ರಕ್ಷಾ ಕಾರ್ಯಕ್ರಮದ ತುರ್ತು ಸಹಾಯನಿಧಿ ಉದ್ಘಾಟನೆ ಸೆ.15ರಂದು ನಡೆಯಲಿದೆ.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಮತ್ತು ಕುಟುಂಬ ವರ್ಗದವರಿಗೆ ಅನಾರೋಗ್ಯ ಸಂದರ್ಭ ಒಳರೋಗಿಯಾಗಿ ಆಸ್ಪತ್ರೆ ಚಿಕಿತ್ಸೆ ದೊರಕಿಸಲು ಪ್ರಾರಂಭಿಸಿದ ಸಂಪೂರ್ಣ ಸುರಕ್ಷಾ ಕಾರ್ಯಕ್ರಮ 20 ವರ್ಷದ ಹಿಂದೆ ಪ್ರಾರಂಭಿಸಿ ಯಶಸ್ವಿಯಾಗಿದೆ. ಈ ವರ್ಷ 2022-23ರ ಸಾಲಿಗೆ 8.75 ಲಕ್ಷ ಸದಸ್ಯರು ನೋಂದಣಿಯಾಗಿದ್ದಾರೆ ಎಂದು ವಿಮಾ ವಿಭಾಗದ ಪ್ರಾದೇಶಿಕ ನಿರ್ದೇಶಕ ಪುರುಷೋತ್ತಮ ಪಿ.ಕೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಯಶಸ್ಸು ಗಮನದಲ್ಲಿಟ್ಟುಕೊಂಡು ಯೋಜನೆ ವತಿಯಿಂದ ಸಂಘಗಳ ಸದಸ್ಯರಿಗೆ ಆರೋಗ್ಯ ರಕ್ಷಾ ಆಸ್ಪತ್ರೆ ವೆಚ್ಚದ ವಿಮಾ ಕಾರ್ಯಕ್ರಮ 2021ರಿಂದ ಆರಂಭಿಸಲಾಯಿತು. ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಲ್ಲಿ ಲಭ್ಯವಾಗುವ ವಿಮಾ ಮೊತ್ತ ಕುಟುಂಬವೊಂದಕ್ಕೆ 1.20 ಲಕ್ಷ ರೂ. ಇರುತ್ತದೆ. ಆರೋಗ್ಯ ರಕ್ಷಾ ಯೋಜನೆಯಲ್ಲಿ ಪತಿ -ಪತ್ನಿಯನ್ನು ಸೇರಿಸಿಕೊಂಡು 20,000 ರೂ. ಸೌಲಭ್ಯ ನೀಡಲಾಗುತ್ತದೆ. ಆರೋಗ್ಯ ರಕ್ಷಾ ಕಾರ್ಯಕ್ರಮದಲ್ಲಿ 27.62 ಲಕ್ಷ ಕುಟುಂಬಗಳ 50 ಲಕ್ಷ ಸದಸ್ಯರು ನೋಂದಣಿಯಾಗಿರುತ್ತಾರೆ. ಇವರ ಅಗತ್ಯ ಗಮನದಲ್ಲಿಟ್ಟುಕೊಂಡು 2022-23ರ ಸಾಲಿಗೆ ಆರೋಗ್ಯ ರಕ್ಷಾ ಕಾರ್ಯಕ್ರಮದಲ್ಲಿ ತುರ್ತು ಸಹಾಯನಿಧಿ ಸ್ಥಾಪಿಸಲಾಗಿದೆ. ಇದರಲ್ಲಿ 2.50 ಕೋಟಿ ರೂ. ಮೊತ್ತ ನಿಗದಿಪಡಿಸಿದ್ದು, ಆರೋಗ್ಯ ರಕ್ಷಾ ಫಲಾನುಭವಿಗಳಿಗೆ ತೀವ್ರತರದ ಕಾಯಿಲೆಗಳಾದ ಕ್ಯಾನ್ಸರ್, ಹೃದಯಾಘಾತ, ಕಿಡ್ನಿ ವೈಫಲ್ಯ, ಹೆಡ್ ಇಂಜುರಿ ಮುಂತಾದ ಸಮಸ್ಯೆಗಳಿಗೆ ತಮಗೆ ದೊರೆಯುವ ಆರೋಗ್ಯ ರಕ್ಷಾ ವಿಮೆಗಿಂತ ಹೆಚ್ಚುವರಿ 50,000 ರೂ.ವರೆಗೂ ವಿಮಾ ಮೊತ್ತ ದೊರೆಯುವಂತೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಉದ್ಘಾಟನಾ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸುವರು. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಜನರಲ್ ಮ್ಯಾನೇಜರ್ ಪೀಟರ್ ಚಿತ್ತರಂಜನ್, ಸಹಾಯಕ ಜನರಲ್ ಮ್ಯಾನೇಜರ್ ಕೇಶವ ಮೋಹನ ಭಾಗವಹಿಸುವರು ಎಂದರು.
    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ವಿಮಾ ವಿಭಾಗದ ಯೋಜನಾಧಿಕಾರಿ ಸತೀಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಯೋಜನೆಯಿಂದ ಪ್ರಾಯೋಜಿಸಲಾದ ಸಂಪೂರ್ಣ ಸುರಕ್ಷಾ ಮತ್ತು ಆರೋಗ್ಯ ರಕ್ಷಾ ವಿಮಾ ಕಾರ್ಯಕ್ರಮವನ್ನು ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪನಿ, ನ್ಯಾಷನಲ್ ಇನ್ಶೂರೆನ್ಸ್ ಕಂಪನಿ, ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿ ಮತ್ತು ಯೂನಿವರ್ಸಲ್ ಸ್ಯಾಂಟೋ ಕಂಪನಿಗಳು ಜಂಟಿಯಾಗಿ ವಹಿಸಿಕೊಂಡಿವೆ ಎಂದು ಪುರುಷೋತ್ತಮ ಪಿ.ಕೆ. ತಿಳಿಸಿದರು. ಈ ವರ್ಷ ನೂತನವಾಗಿ ಆರಂಭಗೊಂಡ ತುರ್ತು ಸಹಾಯನಿಧಿ ಕಾರ್ಯಕ್ರಮ ಲೋಕಾರ್ಪಣೆಗೊಳಿಸಲು ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾಗಿರುವ ಸುಚಿತಾ ಗುಪ್ತಾ ಭೇಟಿ ನೀಡುವರು. ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ತುರ್ತು ಸಹಾಯನಿಧಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts