More

    ಬಂಧ ತೊರೆದು ಸನ್ಯಾಸತ್ವಕ್ಕೆ ಸಾಗಿಸುವ ಅಷ್ಟ ಶ್ರಾದ್ಧ

    ಶಿರಸಿ: ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಶಿಷ್ಯ ಸ್ವೀಕಾರ ಕಾರ್ಯಕ್ರಮದ ಮೂರನೇ ದಿನ ಮಂಗಳವಾರದ ಕಾರ್ಯಕ್ರಮಗಳು ಮಹತ್ವದ್ದಾಗಿವೆ. ಬದುಕಿನ ಎಲ್ಲ ಬಂಧ, ಬಂಧುಗಳನ್ನು ತೊರೆದು ಸನ್ಯಾಸತ್ವದ ಕಡೆ ಸಾಗುವ ಅಷ್ಟಶ್ರಾದ್ಧ ಕಾರ್ಯಕ್ರಮ, ಸಾವಿರ ಗಣಪತ್ಯಥರ್ವಶೀರ್ಷ ಜಪ, ಹವನ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿವೆ.
    ಕಾರ್ಯಕ್ರಮದ ಭಾಗವಾದ ಅಷ್ಟಶ್ರಾದ್ಧ ಮತ್ತು ಫೆ. 21ರಂದು ನಡೆಯುವ ನಾಂದಿ ಶ್ರಾದ್ಧದ ವಿಶೇಷತೆಗಳ ಬಗ್ಗೆ ಸ್ವರ್ಣವಲ್ಲೀ ಸಂಸ್ಥಾನದ ಆಸ್ಥಾನ ವಿದ್ವಾಂಸರಾದ ಬಾಲಚಂದ್ರ ಶಾಸ್ತ್ರಿಗಳು ವಿವರಿಸಿದ್ದಾರೆ. ಮನುಷ್ಯ ತನ್ನ ಜೀವನದಲ್ಲಿ ತನಗೂ ಅರಿವಿರದಂತೆ ಕೆಲ ದೋಷಗಳಿಗೆ ಒಳಗಾಗಿರಬಹುದು. ತನಗೂ ಅರಿವಿರದೇ ಸುಳ್ಳು ಹೇಳಿರಬಹುದು. ಇನ್ನೊಬ್ಬರ ಮನಸಿಗೆ ಗೊತ್ತಿಲ್ಲದೆಯೂ ನೋವು ಮಾಡಿರಬಹುದು. ಹೀಗಾಗಿ, ಹಿಂದಿನ ದೋಷಗಳನ್ನೆಲ್ಲ ಕಳೆದುಕೊಳ್ಳುವ ಸಲುವಾಗಿ, ಆತ್ಮ ಸಂಸ್ಕಾರಕ್ಕಾಗಿ ವ್ಯಕ್ತಿ ತನಗೆ ತಾನೇ ಶ್ರಾದ್ಧ ಮಾಡಿಕೊಳ್ಳುವಿಕೆ ಅಷ್ಟಶ್ರಾದ್ಧ. ಹಿಂದಿನ ಎಲ್ಲ ದೋಷಗಳನ್ನು ಕಳೆದುಕೊಂಡು ಪರಮಾತ್ಮನ ಸನ್ನಿಧಿಗೆ ದೇಹವನ್ನು ಸಿದ್ಧಪಡಿಸಿಕೊಳ್ಳುವ ಕಾರ್ಯ ಈ ಮೂಲಕ ನಡೆಯುತ್ತದೆ. ಇದುವರೆಗೂ ತಾನು ಬಂದ ಗೋತ್ರದ ಎಲ್ಲರನ್ನೂ ಒಮ್ಮೆ ನೆನೆದು, ಶ್ರದ್ಧಾಂಜಲಿ ಪೂರ್ವಕ ನಮಸ್ಕಾರ ಮಾಡಿ ಮುಂದೆ ಸನ್ಯಾಸತ್ವದ ಕಡೆ ಸಾಗುವ ಸಿದ್ಧತೆಗಳು ಮಂಗಳವಾರದ ಕಾರ್ಯಕ್ರಮಗಳ ಮೂಲಕ ನಡೆಯುತ್ತವೆ.
    ಇನ್ನು ಫೆ. 21ರಂದು ನಡೆಯುವ ವೀರಜಾ ಹೋಮದಲ್ಲಿ ಎಲ್ಲ ಕಾಮನೆಗಳನ್ನು, ಅಪೇಕ್ಷೆಗಳನ್ನೂ ಅಗ್ನಿಗೆ ಸಮರ್ಪಣೆ ಮಾಡುವುದಾಗಿದೆ. ರಜಸ್ಸು ಇರದೇ ಪವಿತ್ರಾತ್ಮ ಆಗುವ ಕಾರ್ಯಕ್ರಮ ವೀರಜಾ ಹೋಮ. 22ರಂದು ಸನ್ಯಾಸ ಸ್ವೀಕಾರದ ಸಿದ್ಧತೆಗಾಗಿ ಜಲಾಶಯಗಮನ, ಸಾವಿತ್ರಿ ಪ್ರವೇಶ, ಪ್ರೆಷೋಚ್ಚಾರಣೆ ನಡೆಸಿ ಸನ್ಯಾಸ ಸ್ವೀಕಾರದ ಸಿದ್ಧತೆಯಾಗಿ ಕಾಷಾಯವಸತ್ರ ಧಾರಣೆ ನಡೆಯಲಿದೆ. ಇಲ್ಲಿಯವರೆಗೆ ಸನ್ಯಾಸ ಸ್ವೀಕಾರದ ಸಿದ್ಧತಾ ಕಾರ್ಯಕ್ರಮಗಳ ಭಾಗ ಪೂರ್ಣಗೊಳ್ಳುತ್ತದೆ ಎನ್ನುತ್ತಾರೆ ಅವರು.
    ಕಾಷಾಯ ವಸ್ತ್ರ ಧಾರಣೆಯ ಕಾರ್ಯಕ್ರಮಗಳೂ ವಿಶೇಷವಾಗಿವೆ. ಸನ್ಯಾಸ ಸ್ವೀಕಾರಕ್ಕಾಗಿ ಜುಟ್ಟದ ಆರು ಕೂದಲುಗಳನ್ನು ಸ್ವಯಂ ಕೈನಿಂದ ಹರಿದು ಸನ್ಯಾಸ ಸ್ವೀಕಾರದ ಸಿದ್ಧತೆ ನಡೆಸಿಕೊಳ್ಳುತ್ತಾರೆ. ಬಳಿಕ ಜನಿವಾರ ವಿಸರ್ಜನೆಯ ಕಾರ್ಯಕ್ರಮ ನಡೆಯಲಿದೆ. ಬ್ರಾಹ್ಮಣರು ಧರಿಸಿದ ಜನಿವಾರ ಬದಲಿಸುವ ವೇಳೆ ಕಾಲುಗಳ ಮಾರ್ಗವಾಗಿ ಹಳೆಯ ಜನಿವಾರ ತೆಗೆಯುವ ಪದ್ಧತಿ ಇದೆ. ಆದರೆ, ಸನ್ಯಾಸ ಸ್ವೀಕರಿಸುವವರು ತಲೆಯ ಮೇಲಿನಿಂದ ಜನಿವಾರವನ್ನು ತೆಗೆದು ವಿಸರ್ಜನೆ ಮಾಡುತ್ತಾರೆ. ಬಳಿಕ ಹಳೆಯ ವಸ್ತ್ರ ತ್ಯಜಿಸಿ ಏಳು ಹೆಜ್ಜೆಗಳನ್ನು ನಡೆಯುವ ಮೂಲಕ ಕುಟುಂಬ, ಸಹೋದರರು, ಎಲ್ಲ ಕಾಮನೆಗಳನ್ನು ಬಿಟ್ಟು ಗುರುಗಳು ನೀಡಿದ ಕಾಷಾಯ ವಸ್ತ್ರವನ್ನು ಸ್ವೀಕಾರ ಮಾಡುತ್ತಾರೆ.
    ಭಕ್ತರಿಗೆ 22 ಸಾವಿರ ಲಾಡುಗಳು ಸಿದ್ಧ
    ಶಿಷ್ಯ ಸ್ವೀಕಾರದ ಪ್ರಮುಖ ದಿನಗಳಾದ ಫೆ. 21 ಮತ್ತು 22 ರಂದು 25 ಸಾವಿರಕ್ಕೂ ಅಧಿಕ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ. ಬಂದ ಭಕ್ತರಿಗೆ ಸಿಹಿ ಭೋಜನ ಬಡಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಮಠದ ವ್ಯಾಪ್ತಿಯ 16 ಸೀಮೆಗಳಿಂದ ಆಗಮಿಸಿರುವ ಮಹಿಳೆಯರು ಭಕ್ತರ ಸಲುವಾಗಿ ಈಗಾಗಲೇ 22 ಸಾವಿರ ಲಾಡುಗಳನ್ನು ಸಿದ್ಧಪಡಿಸಿದ್ದಾರೆ. ಭಕ್ತರ ಊಟೋಪಚಾರಕ್ಕಾಗಿ ಅಕ್ಕಿ, ದವಸ, ಧಾನ್ಯಗಳನ್ನು ಶಾಸಕ ಶಿವರಾಮ ಹೆಬ್ಬಾರ ಪೂರೈಸಿದ್ದಾರೆ. ಶಾಸಕ ಭೀಮಣ್ಣ ನಾಯ್ಕ ಸಹ ಊಟೋಪಚಾರಕ್ಕೆ ಕೊಡುಗೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts