More

    ಸಾಸ್ವೆಹಳ್ಳಿ ಯೋಜನೆ ಪರಿಷ್ಕರಣೆಗೊಳ್ಳಲಿ

    ಸಿರಿಗೆರೆ: 120 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪರಿಷ್ಕೃತಗೊಳ್ಳದೇ ಉದ್ದೇಶಿತ ಕಾರ್ಯ ಯಶಸ್ವಿ ಆಗುವುದಿಲ್ಲ ಎಂದು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ನ್ಯಾಯಪೀಠದಲ್ಲಿ ಶುಕ್ರವಾರ ಕರೆಯಲಾಗಿದ್ದ ಸ್ವಾಸ್ವೆಹಳ್ಳಿ ಏತನೀರಾವರಿ ಕುರಿತು ವಿಶೇಷ ಸಭೆಯಲ್ಲಿ ಮಾತನಾಡಿ, ಶಿವಮೊಗ್ಗ, ಹೊನ್ನಾಳಿ, ಮಾಯಕೊಂಡ, ಚನ್ನಗಿರಿ, ಹೊಳಲ್ಕೆರೆ ಮತ್ತು ಚಿತ್ರದುರ್ಗ ತಾಲೂಕುಗಳ 120 ಕೆರೆಗಳಿಗೆ ನೀರು ತುಂಬಿಸಲು ಜನವರಿ 2017ರಂದು ಆರಂಭಗೊಂಡಿದ್ದ ಯೋಜನೆ ಫೆಬ್ರವರಿ 2020ರೊಳಗೆ ಮುಗಿಯಬೇಕಾಗಿತ್ತು ಎಂದರು.

    ಆದರೆ, ಇಲ್ಲಿಯವರೆಗೂ ಮುಗಿದಿಲ್ಲ. ಇದಕ್ಕೆ ಮುಖ್ಯ ಕಾರಣ ಪರಿಷ್ಕೃತ ಯೋಜನೆ ರೂಪಿಸದೇ ಇರುವುದು ಎಂದು ಬೇಸರಿಸಿದರು.

    ಆರಂಭದಲ್ಲಿ 120 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಅದಕ್ಕನುಗುಣವಾಗಿ ಜಾಕ್‌ವೆಲ್ ಗಾತ್ರ ಪಂಪ್‌ಸೆಟ್ ಪ್ರಮಾಣ ಹಾಗೂ ಪೈಪ್‌ಗಳ ಗಾತ್ರ ನಿಗದಿಯಾಗಿತ್ತು. ಆದರೆ, ಬಳಿಕ ಕೆರೆಗಳ ಸಂಖ್ಯೆ 170ಕ್ಕೆ ಏರಿಕೆ ಆಗಿದೆ ಎಂದರು.

    ಇದರಿಂದ ಜಾಕ್‌ವೆಲ್ ವಿಸ್ತೀರ್ಣ, ಮೋಟಾರ್ ಪಂಪ್ ಗಾತ್ರವನ್ನು ಬದಲಿಸಬೇಕಾಗಿರುವುದು ಅಗತ್ಯ. ಯೋಜನೆಗೆ ಸೇರಬೇಕಾದ ಕೆರೆಗಳು ಎಷ್ಟು ಎಂಬುದನ್ನು ನಿಗದಿ ಪಡಿಸದೆ ಯೋಜನೆ ಯಶಸ್ವಿಯಾಗುವುದಿಲ್ಲ. ಆದ್ದರಿಂದ ಅದಕ್ಕಾಗಿ ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ವ್ಯಾಪ್ತಿಗೆ ಬರುವ ಸಂಸದರು ಮತ್ತು ಶಾಸಕರ ಸಭೆಯನ್ನು ಶೀಘ್ರ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಯೋಜನೆ ವ್ಯಾಪ್ತಿಗೆ ಸೇರಿರುವ ಕೆರೆಗಳ ಪಟ್ಟಿಯನ್ನು ನೀರಾವರಿ ನಿಗಮದಿಂದ ಪಡೆದು ಸಂಬಂಧಿಸಿದ ಸಂಸದರು ಮತ್ತು ಶಾಸಕರಿಗೆ ಒದಗಿಸಲಾಗುವುದು. ಪರಿಷ್ಕೃತ ಯೋಜನೆಗೆ ಅಗತ್ಯವಾದ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲು ಸಂಸದರು ಮತ್ತು ಶಾಸಕರು ಒತ್ತಡ ತರಬೇಕು ಎಂದು ತಿಳಿಸಿದರು.

    ಮಾಜಿ ಶಾಸಕ ಶಾಂತನಗೌಡ, ಅನಿತ್‌ಕುಮಾರ್, ಮುತ್ತುಗದೂರು ರುದ್ರಪ್ಪ, ಸಾಸಲು ದೇವರಾಜು, ಓಂಕಾರಪ್ಪ, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಮುಖ್ಯ ಇಂಜಿನಿಯರ್ ಯತೀಶ್ ಚಂದ್ರ, ನಿರ್ವಾಹಕ ಇಂಜಿನಿಯರ್ ಮಲ್ಲಪ್ಪ, ಇಂಜಿಯರ್ ಚಂದ್ರಶೇಖರಯ್ಯ, ವಿಜಯಕುಮಾರ್, ರಾಜೇಂದ್ರ ಪ್ರಸಾದ್ ಹಾಗೂ ನೂರಾರು ಸಂಖ್ಯೆಯ ರೈತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts