More

    ನೀರಿನ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಸೋಮಲಿಂಗಪ್ಪ ಎಚ್ಚರಿಕೆ

    ಸಿರಗುಪ್ಪ: ಕೇವಲ ಸಂಬಳಕ್ಕಾಗಿ ಕೆಲಸಮಾಡಬೇಡಿ, ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ ಎಂದು ಅಧಿಕಾರಿಗಳಿಗೆ ಶಾಸಕ ಎಂ.ಎಸ್. ಸೋಮಲಿಂಗಪ್ಪ ಹೇಳಿದರು.

    ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷೆ ಕೆ.ಲಕ್ಷ್ಮೀಮಾರುತಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಬಜೆಟ್ ಮಂಡನೆ ಮತ್ತು ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಆರ್ಥಿಕವಾಗಿ ಪಪಂ ಹಿಂದುಳಿದಿದೆ. ಅಧಿಕಾರಿಗಳು ತೆರಿಗೆ ಸಂಗ್ರಹಣೆಗೆ ಆದ್ಯತೆ ನೀಡಿದರೆ ಜನರಿಗೆ ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ. ಬೇಸಿಗೆ ಆರಂಭವಾಗಿದ್ದು, ಎಲ್ಲೂ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.

    ಎಸ್.ಸಿದ್ದೇಶ್ವರ ಮಾತನಾಡಿ, ಕೆರೆಯಲ್ಲಿ ಸಾಕಷ್ಟು ನೀರಿದ್ದರೂ 10 ದಿನಕ್ಕೊಮ್ಮೆ ಸರಬರಾಜು ಮಾಡಲಾಗುತ್ತಿದೆ. ಬೇಸಿಗೆ ಬಂದರೆ ಎಷ್ಟು ದಿನಕ್ಕೆ ಒಮ್ಮೆ ನೀರು ಬಿಡುತ್ತೀರೆಂದು ವಾರ್ಡ್ ಜನ ಕೇಳುತ್ತಿದ್ದಾರೆ. ಇದಕ್ಕೆ ಉತ್ತರಿಸುವವರು ಯಾರು ಎಂದು ಪ್ರಶ್ನಿಸಿದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದಾಗಿ ನೀರು ಬಿಡಲು ತೊಂದರೆಯಾಗುತ್ತಿತ್ತು. ಈ ಕಾರ್ಯವೀಗ ಮುಗಿದಿದ್ದು, ಇನ್ನುಮುಂದೆ ಸಕಾಲಕ್ಕೆ ನೀರು ಬಿಡಲಾಗುವುದು ಎಂದು ಮುಖ್ಯಾಧಿಕಾರಿ ಎಂ. ಅನಿಲ್‌ಕುಮಾರ್ ತಿಳಿಸಿದರು.

    ಗ್ರಾಮದಲ್ಲಿ 24/7 ಶುದ್ಧ ಕುಡಿವ ನೀರಿನ ಪೈಪ್ ಅಳವಡಿಕೆ ಕಾರ್ಯ ಕಳೆದ ಮೂರು ವರ್ಷದಿಂದ ನಡೆಯುತ್ತಲೇ ಇದೆ. ಹೊಸದಾಗಿ ನಿರ್ಮಿಸಿರುವ ಸಿಸಿ ರಸ್ತೆಗಳನ್ನು ಪೈಪ್ ಅಳವಡಿಕೆಗಾಗಿ ಹಾಳು ಮಾಡಲಾಗುತ್ತಿದೆ. ಈ ಕಾಮಗಾರಿ ಮುಗಿಯುವುದು ಯಾವಾಗ ಎಂದು ಸಹಾಯಕ ಅಭಿಯಂತರ ಮಲ್ಲಿಕಾರ್ಜುನ್‌ರನ್ನು ಸದಸ್ಯರು ಪ್ರಶ್ನಿಸಿದರು. ಶಾಸಕರು ಮಧ್ಯ ಪ್ರವೇಶಿಸಿ, ಒಂದೊಂದು ವಾರ್ಡ್‌ನಲ್ಲಿ ಕಾಮಗಾರಿ ಪೂರ್ಣಗೊಳಿಸಿ ನಂತರ ಬೇರೆ ವಾರ್ಡ್‌ಗೆ ಹೋಗಬೇಕು. ಊರ ತುಂಬೆಲ್ಲ ರಸ್ತೆ ಅಗೆದರೆ ಸರ್ಕಾರದ ಹಣ ಹಾಳಾಗುತ್ತದೆ. ಸರಿಯಾದ ಕ್ರಮದಲ್ಲಿ ಪೈಪ್ ಅಳವಡಿಸುವಂತೆ ಗುತ್ತಿಗೆದಾರರಿಗೆ ತಿಳಿಸಿ ಎಂದು ಸೂಚಿಸಿದರು.

    14 ಲಕ್ಷ ರೂ. ಉಳಿತಾಯ ಬಜೆಟ್
    14.62 ಕೋಟಿ ರೂ. ನಿರೀಕ್ಷಿತ ಆದಾಯ, 14.48 ಕೋಟಿ ರೂ.ವೆಚ್ಚ ಒಟ್ಟು 14 ಲಕ್ಷ ರೂ. ಉಳಿತಾಯ ಬಜೆಟ್ ಆಗಿದೆ ಎಂದು ಮುಖ್ಯಾಧಿಕಾರಿ ಎಂ. ಅನಿಲ್‌ಕುಮಾರ್ ಸಭೆಯಲ್ಲಿ ತಿಳಿಸಿದರು. ಉಪಾಧ್ಯಕ್ಷ ವಿ. ಮಂಜು, ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts