More

    ಜನರ ಅರ್ಜಿಗಳ ಪರಿಶೀಲಿಸಿ ಪರಿಹರಿಸಲು ಕ್ರಮ

    ಸಿರಗುಪ್ಪ: ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ತಿಳಿಸಿದರು.

    ತೆಕ್ಕಲಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನತಾದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಸೇವೆ ಪಡೆಯಲು ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರದ ಆದೇಶದಂತೆ ಜನತಾದರ್ಶನ ಏರ್ಪಡಿಸಲಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲವಾಗಿದ್ದು, ಪ್ರತಿಯೊಬ್ಬರೂ ಸದ್ಬಳಕೆ ಮಾಡಿಕೊಳ್ಳಬೇಕು ಎಂದ ಅವರು, ಜನತಾದರ್ಶನ ಪ್ರತಿ ತಾಲೂಕಿನಲ್ಲಿ ತಿಂಗಳಿಗೆ ಎರಡು ಬಾರಿ ಹೋಬಳಿ ಮತ್ತು ಗ್ರಾಮ ಮಟ್ಟದಲ್ಲಿ ನಡೆಯಲಿದ್ದು, ಯಾವುದೇ ವೈಯಕ್ತಿಕ ಅಥವಾ ಸಾಮುದಾಯಿಕ ಸಮಸ್ಯೆಗಳಿದ್ದರೂ ನೇರವಾಗಿ ದೂರು ಸಲ್ಲಿಸಬಹುದಾಗಿದೆ ಎಂದರು.

    ತೆಕ್ಕಲಕೋಟೆ ಕೋಟೆಯ ಪಕ್ಕದ ತರಕಾರಿ ಮಾರುಕಟ್ಟೆಯ ಗುಡಿಸಲಿನಲ್ಲಿ ಜೂಜಾಟ ನಡೆಯುತ್ತಿದ್ದು ಕ್ರಮವಹಿಸಬೇಕು. ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಬಸ್ ನಿಲ್ಲಿಸುವಂತೆ ಮನವಿ, ಮದ್ಯ ಅಕ್ರಮ ಮಾರಾಟ ತಡೆಯಲು, ನಿವೇಶನ ರಹಿತರಿಗೆ ವಸತಿ, ಕಾಲುವೆಗೆ ಸಮರ್ಪಕವಾಗಿ ನೀರು ಹರಿಸಬೇಕು. ಸಾರ್ವಜನಿಕ ಶೌಚಗೃಹಗಳಿಗೆ ಬೇಡಿಕೆ, ಶಾಲಾ ಕೊಠಡಿಗಳ ನಿರ್ಮಾಣ, ಹೊಲಗಳಿಗೆ ತೆರಳಲು ದಾರಿ ನಿರ್ಮಾಣ, ಕುಡಿವ ನೀರಿನ ಕೆರೆ ನಿರ್ವಹಣೆ ಮತ್ತು ಹೊಸಕೆರೆ ನಿರ್ಮಾಣದ ಬೇಡಿಕೆ, ಗೃಹಲಕ್ಷ್ಮೀ ಸೌಲಭ್ಯ ವಂಚಿತರ ಮನವಿ, ಕೋಟೆ ಅಭಿವೃದ್ಧಿ, ವಸ್ತು ಸಂಗ್ರಹಾಲಯ ನಿರ್ಮಾಣ, ಅಂಗನವಾಡಿ ಕೇಂದ್ರದಲ್ಲಿ ಮೂಲಸೌಕರ್ಯ, ರೈತರಿಂದ ಜಮೀನಿಗೆ ಸಂಬಂಧಿಸಿದಂತೆ ವಿವಿಧ ದಾಖಲೆಗಳ ಸರಿಪಡಿಸುವುದು, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು, ಹಳೇಕೋಟೆ ಗ್ರಾಮದ ಹತ್ತಿರ ಗಣಿಗಾರಿಕೆ, ರಾಘವೇಂದ್ರ ರೈಸ್ ಮಿಲ್‌ನಿಂದ ಹಾರು ಬೂದಿಯಿಂದ ತೊಂದರೆ, ಗುಂಡಿಗನೂರು-ಮುದ್ದಟನೂರು ಗ್ರಾಮದಲ್ಲಿ ಸ್ಮಶಾನಕ್ಕೆ ಭೂಮಿ ನೀಡುವುದು, ಶಾಲಾ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು ಸೇರಿದಂತೆ ಒಟ್ಟು 154 ಅರ್ಜಿಗಳು ಸಲ್ಲಿಕೆಯಾದವು. ಕೆಲವನ್ನು ಸ್ಥಳದಲ್ಲಿಯೇ ಪರಿಹರಿಸಲಾಯಿತು.

    ಶಾಸಕ ಬಿ.ಎಂ.ನಾಗರಾಜ, ಸಹಾಯಕ ಆಯುಕ್ತ ಹೇಮಂತಕುಮಾರ್, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ತಹಸೀಲ್ದಾರ್ ಎಚ್.ವಿಶ್ವನಾಥ, ತಾಪಂ ಇಒ ಪವನ್‌ಕುಮಾರ್, ಮುಖ್ಯಾಧಿಕಾರಿ ಪರಶುರಾಮನಾಯಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts