More

    ರಾಷ್ಟ್ರಧ್ವಜ ತಯಾರಿಕೆಯಲ್ಲಿ ಮಹಿಳೆಯರು

    ಸಿರಗುಪ್ಪ: ಅಮೃತ ಸ್ವಾತಂತ್ರೊೃೀತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಡಿ ತಾಲೂಕಿನಲ್ಲಿ 27 ಗ್ರಾಪಂಗಳ ವ್ಯಾಪ್ತಿಯ ಪ್ರತಿ ಮನೆಗೆ ರಾಷ್ಟ್ರಧ್ವಜಗಳನ್ನು ಹಂಚುವ ಉದ್ದೇಶದಿಂದ ಅದರ ತಯಾರಿ ಕೆಲಸದಲ್ಲಿ ಮೂರು ಮಹಿಳಾ ಸಂಘಗಳ ಸದಸ್ಯರು ತೊಡಗಿಸಿಕೊಂಡಿದ್ದಾರೆ.

    ಒಂದು ಗ್ರಾಪಂಗೆ 450 ನಂತೆ 12,150 ಬಾವುಟಗಳ ತಯಾರಿಕೆಯಲ್ಲಿ ಸಂಘದ ಪದಾಧಿಕಾರಿಗಳು ಕೆಲ ದಿನಗಳಿಂದ ತೊಡಗಿದ್ದಾರೆ. ಕರೂರು ಗ್ರಾಮದ ಬಿಂದುಶ್ರೀ ಸಂಜೀವಿನಿ ಮಹಿಳಾ ಒಕ್ಕೂಟದ ಐದು ಸ್ವಸಹಾಯ ಗುಂಪುಗಳ 17 ಸದಸ್ಯರು 12 ಗ್ರಾಪಂಗಳಿಗೆ ವಿತರಿಸಲು ಬೇಕಾದ 5400 ಬಾವುಟಗಳ ತಯಾರಿಕೆ ಕಾರ್ಯದಲ್ಲಿ ನಿರತರಾಗಿದ್ದಾರೆ. ದೇಶನೂರು ಗ್ರಾಮದ ವಿನಾಯಕ ಸಂಜೀವಿನಿ ಗ್ರಾಪಂ ಒಕ್ಕೂಟದ ನಾಲ್ಕು ಸ್ವಸಹಾಯ ಗುಂಪುಗಳ 12 ಮಹಿಳೆಯರು ಎಂಟು ಗ್ರಾಪಂಗಳಿಗೆ ಬೇಕಾದ 3600 ಬಾವುಟಗಳನ್ನು ತಯಾರಿಸುತ್ತಿದ್ದಾರೆ. ಹಚ್ಚೊಳ್ಳಿ ಗ್ರಾಪಂ ಸ್ಫೂರ್ತಿ ಸಂಜೀವಿನಿ ಒಕ್ಕೂಟದ ನಾಲ್ಕು ಸ್ವಸಹಾಯ ಗುಂಪುಗಳ 10 ಸದಸ್ಯರು ಏಳು ಗ್ರಾಪಂಗಳಿಗೆ ವಿತರಿಸಲು ಬೇಕಾದ 3150 ಬಾವುಟಗಳನ್ನು ತಯಾರಿಸುವ ಕಾರ್ಯದಲ್ಲಿದ್ದಾರೆ.

    ಸದಸ್ಯರಿಗೆ ಒಂದು ಬಾವುಟಕ್ಕೆ 10 ರೂ.
    ತಯಾರಿಸಿದ ಬಾವುಟಗಳನ್ನು ಹಂಚಿಕೆ ಮಾಡುವ ಉದ್ದೇಶದಿಂದ ಮಹಿಳಾ ಒಕ್ಕೂಟಗಳ ಸದಸ್ಯರು ಹೆಚ್ಚುವರಿ ಜನರನ್ನು ಸೇರಿಸಿಕೊಂಡು ತಾಪಂ ಅಧಿಕಾರಿಗಳು ನಿಗದಿಪಡಿಸಿದ ಅವಧಿಯೊಳಗೆ ಬಾವುಟಗಳನ್ನು ತಯಾರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಒಂದು ಬಾವುಟವನ್ನು ತಯಾರಿಸಲು 45 ರೂ. ದರ ನಿಗದಿ ಪಡಿಸಿದ್ದು, ಇದರಲ್ಲಿ ಮಹಿಳಾ ಒಕ್ಕೂಟದ ಸದಸ್ಯರಿಗೆ ಒಂದು ಬಾವುಟ ತಯಾರಿಕೆಗೆ 10 ರೂ. ನೀಡಲಾಗುತ್ತಿದೆ. ಮನೆಮನೆಯಲ್ಲಿ ಹಾರಿಸಲು ಬೇಕಾದ ರಾಷ್ಟ್ರೀಯ ಧ್ವಜವನ್ನು ನಮ್ಮ ತಾಲೂಕಿನ ವಿವಿಧ ಮಹಿಳಾ ಸಂಘಗಳ ಸದಸ್ಯರು ತಯಾರಿಸುತ್ತಿದ್ದಾರೆ. 12150 ಧ್ವಜಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ತಾಪಂ ಕಾರ್ಯಕ್ರಮ ವ್ಯವಸ್ಥಾಪಕ ಎ.ಹನುಮನಗೌಡ. ನಮಗೆ ರಾಷ್ಟ್ರಧ್ವಜ ಹೊಲಿದುಕೊಡಲು ಒಂದು ಧ್ವಜಕ್ಕೆ 10 ರೂ. ನೀಡುತ್ತಾರೆ. 12 ಗ್ರಾಪಂಗಳಿಗೆ ಬೇಕಾದ 5400 ಧ್ವಜಗಳನ್ನು ಸಿದ್ಧಪಡಿಸುತ್ತಿದ್ದೇವೆಂದು ಬಿಂದುಶ್ರೀ ಮಹಿಳಾ ಒಕ್ಕೂಟದ ಅಧ್ಯಕ್ಷೆ ಬಸವರಾಜೇಶ್ವರಿ ತಿಳಿಸಿದ್ದಾರೆ.

    ರಾಷ್ಟ್ರಧ್ವಜದ ಮಹತ್ವ ತಿಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಅಭಿಯಾನ ನಡೆಸುತ್ತಿದ್ದು, ಗ್ರಾಪಂಗಳಿಗೆ ಉಚಿತವಾಗಿ ವಿತರಿಸಲಾಗುವುದು. ಈಗಾಗಲೆ ಕೆಲವು ರಾಷ್ಟ್ರಧ್ವಜಗಳು ಸಿದ್ಧವಾಗಿದ್ದು ಆಯಾ ಗ್ರಾಪಂಗಳಿಗೆ ವಿತರಿಸಲಾಗಿದೆ.
    | ಎಂ.ಬಸಪ್ಪ, ತಾಪಂ ಸಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts