More

    ಕೃಷಿಕರ ಏಳಿಗೆಗೆ ಶ್ರಮಿಸಿದ್ದ ಮಾಜಿ ಪ್ರಧಾನಿ ಚರಣಸಿಂಗ್

    ಸಿರಗುಪ್ಪ: ನಮ್ಮ ದೇಶದ ಮಾಜಿ ಪ್ರಧಾನಿ ಚೌದರಿ ಚರಣಸಿಂಗ್ ಅವರು ರೈತರಿಗೆ ಸಂಬಂಧಿಸಿದ ಅನೇಕ ಉತ್ತಮ ಯೋಜನೆ, ಕಾಯ್ದೆಗಳನ್ನು ಜಾರಿಗೆ ತಂದಿದ್ದರು ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.

    ನಗರದ ಕೃಷಿ ಸಂಶೋಧನ ಕೇಂದ್ರದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರು ಕೃಷಿಯ ಒಳಸುಳಿಗಳನ್ನು ಅರಿತು ಹವಾಮಾನ ಆಧಾರಿತ ಕೃಷಿ ಮಾಡಬೇಕು, ಬೆಳೆದ ಬೆಳೆಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಬೇಕು, ರೈತರು ಉತ್ತಮ ಕೃಷಿಕರಾಗುವ ಜತೆಗೆ, ಮಾರುಕಟ್ಟೆಯನ್ನು ಕಂಡುಕೊಳ್ಳಬೇಕು ಎಂದರು.

    ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ಮಾತನಾಡಿ, ರೈತರು ಅತಿಹೆಚ್ಚು ರಾಸಾಯನಿಕ ಸಿಂಪಡಣೆ ಮತ್ತು ಯೂರಿಯಾ ಬಳಕೆ ಮಾಡಿ ಅನಗತ್ಯ ದುಂದುವೆಚ್ಚ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಬೆಳೆಯುವ ಬೆಳೆಗಳಿಗೆ ಅತಿಹೆಚ್ಚು ಯೂರಿಯಾ ಬಳಕೆಯಾಗುತ್ತಿದೆ. ಇನ್ನಾದರೂ ಜಾಗೃತಗೊಂಡು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ವೆಚ್ಚಕಡಿಮೆ ಮಾಡಿ, ಹೆಚ್ಚಿನ ಬೆಳೆ ಬೆಳೆದು ಉತ್ತಮ ಆದಾಯ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

    ಜಿಲ್ಲಾ ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪಡೆದ ರುದ್ರಮುನಿ, ಶ್ರೀನಿವಾಸರಾಜು, ರಾಮಕೃಷ್ಣ ಮತ್ತು ತಾಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ಪಡೆದ ಶಾನವಾಸಪುರ ಗ್ರಾಮದ ರೈತ ಮಹಿಳೆ ಮೋದಿನ್‌ಬೀ, ಕರ್ಚಿಗನೂರು ಗ್ರಾಮದ ರೈತ ಮಹಿಳೆ ಚನ್ನಮ್ಮ, ಕರೂರು ಗ್ರಾಮದ ರೈತ ಮಹಿಳೆ ಶಾಂತಮ್ಮ, ಬೂದುಗುಪ್ಪ ಗ್ರಾಮದ ರೈತ ಮಹಿಳೆ ರಂಗಮ್ಮ ಅವರನ್ನು ಸನ್ಮಾನಿಸಲಾಯಿತು.

    ಮಣ್ಣು ವಿಜ್ಞಾನಿ ಅಶೋಕ್ ಕುಮಾರ್‌ಗಡ್ಡಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ್, ಆತ್ಮಯೋಜನೆ ಅಧಿಕಾರಿ ಶ್ರೀನಿವಾಸ, ಕೃಷಿ ಅಧಿಕಾರಿಗಳಾದ ಪರಮೇಶ್ವರರೆಡ್ಡಿ, ಸಹಾಯಕ ಕೃಷಿ ಅಧಿಕಾರಿ ಹೇಮ್ಲಾನಾಯ್ಕ, ರೈತ ಮುಖಂಡ ಸಿದ್ದರಾಮನಗೌಡ ಮತ್ತು ವಿವಿಧ ಗ್ರಾಮಗಳ ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts