More

    ಕಾಲುವೆಗಳಲ್ಲಿ ಹೂಳು, ಬೆಳೆಗಿಲ್ಲ ನೀರು!

    ನರಗುಂದ: ಸರ್ಕಾರ ಪ್ರತಿವರ್ಷ ಕೋಟ್ಯಂತರ ರೂ. ಅನುದಾನವನ್ನು ಕಾಲುವೆ ದುರಸ್ತಿಗೆ ಬಿಡುಗಡೆ ಮಾಡುತ್ತದೆ. ಆದರೆ, ಅಸಮರ್ಪಕ ನಿರ್ವಹಣೆಯಿಂದಾಗಿ ತಾಲೂಕಿನ ಬಹುತೇಕ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿವೆ. ಇದರಿಂದ ಸಮಯಕ್ಕೆ ಸರಿಯಾಗಿ ಬೆಳೆಗಳಿಗೆ ನೀರು ದೊರಕದೆ ರೈತರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

    ಸವದತ್ತಿ ತಾಲೂಕಿನ ಮುನವಳ್ಳಿ ಬಳಿ 1972ರಲ್ಲಿ ನಿರ್ವಣವಾಗಿರುವ ಮಲಪ್ರಭಾ ಡ್ಯಾಂ 37.73 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ. ನರಗುಂದ ಹಾಗೂ ರೋಣ ತಾಲೂಕಿನ ರೈತರ ಜಮೀನುಗಳಿಗೆ ನೀರು ಪೂರೈಸುವ ಪ್ರಮುಖ ಉದ್ದೇಶದಿಂದ ಈ ಡ್ಯಾಂ ಅನ್ನು ನಿರ್ವಿುಸಲಾಗಿದೆ. ಇದುವರೆಗೆ ಕೇವಲ 6 ಬಾರಿ ಮಾತ್ರ ಜಲಾಶಯ ಭರ್ತಿಯಾಗಿದೆ. ಪ್ರತಿವರ್ಷ ಸಂಗ್ರಹಗೊಂಡ 18 ರಿಂದ 20 ಟಿಎಂಸಿ ನೀರನ್ನು ಮಲಪ್ರಭಾ ಎಡದಂಡೆ ಕಾಲುವೆ ಮೂಲಕ ಸವದತ್ತಿ, ರಾಮದುರ್ಗ, ಬದಾಮಿ ತಾಲೂಕಿನ ಒಟ್ಟು 52,136 ಹೆಕ್ಟೇರ್ ಜಮೀನುಗಳಿಗೆ ಹರಿಸಲಾಗುತ್ತದೆ. ಬಲದಂಡೆ ಕಾಲುವೆಗಳ ಮೂಲಕ ನರಗುಂದ, ನವಲಗುಂದ ಮತ್ತು ರೋಣ ತಾಲೂಕಿನ ಒಟ್ಟು,142 ಕಿಮೀ ವ್ಯಾಪ್ತಿಯ 1,39,921 ಹೆಕ್ಟೇರ್ ಭೂಮಿಗೆ ಮಲಪ್ರಭೆ ನೀರುಣಿಸುತ್ತದೆ. ನ.10ರಿಂದ ಹರಿಬಿಡಲಾದ ನೀರು ಇದುವರೆಗೂ ರೈತರ ಜಮೀನು ತಲುಪಿಲ್ಲ. ಕೆಲವು ರೈತರಿಗಷ್ಟೇ ದೊರೆತಿರುವ ಅಲ್ಪ ಪ್ರಮಾಣದ ನೀರು ಬೆಳೆಗಳಿಗೆ ಸಾಕಾಗುತ್ತಿಲ್ಲ. ಇದರಿಂದ ಮೊಳಕೆಯೊಡೆದ ಬೆಳೆಗಳು ವಿವಿಧ ರೋಗ ಬಾಧೆಗೆ ತುತ್ತಾಗಿ ಕಮರುತ್ತಿವೆ.

    ಮಲಪ್ರಭಾ ಬಲದಂಡೆ ಕಾಲುವೆ, ನರಗುಂದ ಶಾಖಾ ಕಾಲುವೆಗಳು 30 ವರ್ಷ ಹಳೆಯದಾಗಿವೆ. ನೀರು ಹರಿಸಿದ ಸಂದರ್ಭದಲ್ಲಿ ಈ ಕಾಲುವೆಗಳು ಒಡೆದು ಅಪಾರ ಪ್ರಮಾಣದ ನೀರು ಹಳ್ಳಕ್ಕೆ ಸೇರುತ್ತದೆ. ಹೀಗಾಗಿ, ಸಿದ್ದರಾಮಯ್ಯ ಸರ್ಕಾರದಲ್ಲಿ 964 ಕೋಟಿ ರೂ. ವೆಚ್ಚದಲ್ಲಿ ಕಾಲುವೆಗಳನ್ನು ನವೀಕರಣಗೊಳಿಸಿದೆ. ಆದರೆ, ಕಾಮಗಾರಿ ಕಳಪೆಯಾಗಿದ್ದು, ಸಿಮೆಂಟ್ ಸಂಪೂರ್ಣ ಕಿತ್ತು ಹೋಗಿದೆ.

    ಇನ್ನುಳಿದ ಕಾಲುವೆಗಳ ದುರಸ್ತಿಗೆ ಸಾವಿರ ಕೋಟಿ ರೂ.ಗಳ ಅನುದಾನ ಬಿಡುಗಡೆಗೊಳಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಳೆದ ವರ್ಷ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಬಳಿ ಭೂಮಿಪೂಜೆ ನೆರವೇರಿಸಿದ್ದಾರೆ.

    ಪ್ರತಿವರ್ಷ ಸರ್ಕಾರ ಕಾಲುವೆಗಳ ನಿರ್ವಹಣೆಗೆ ಅಂದಾಜು 40 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡುತ್ತದೆ. ಪ್ರತಿ ಹೆಕ್ಟೇರ್ ಅಳತೆ ಕಾಲುವೆ ಸ್ವಚ್ಛತೆಗಾಗಿ 400 ರೂ. ನೀಡಲಾಗುತ್ತದೆ. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಎಲ್ಲಿ ಕಾಲುವೆಗಳನ್ನು ಸ್ವಚ್ಛಗೊಳಿಸಿದ್ದಾರೆ ಎಂಬುವುದನ್ನು ಹುಡುಕಬೇಕು. 23ನೇ ಬ್ಲಾಕ್​ನಲ್ಲಿ ವಿಪರೀತ ಮುಳ್ಳು ಕಂಟಿಗಳು ಬೆಳೆದು ನಿಂತಿರುವುದರಿಂದ ನಮ್ಮ ಜಮೀನಿಗೆ ಇನ್ನೂ ನೀರು ಬಂದಿಲ್ಲ.

    | ವಿಜಯ ಕೋತಿನ, ಕುರುಗೋವಿನಕೊಪ್ಪ ಗ್ರಾಮದ ರೈತ

    ಮುಖ್ಯ ಕಾಲುವೆ ದುರಸ್ತಿ, ಅಭಿವೃದ್ಧಿ ಕಾರ್ಯಗಳು ನಮ್ಮ ವ್ಯಾಪ್ತಿಗೊಳಪಟ್ಟಿವೆ. ಉಪ ಹಂಚಿಕೆ ಕಾಲುವೆಗಳ ದುರಸ್ತಿ, ನಿರ್ವಹಣೆ ಕಾಮಗಾರಿ ನೀರು ಬಳಕೆದಾರರ ಸಂಘದ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ, ಆ ಭಾಗದ ಕಾಲುವೆಗಳನ್ನು ನವೋದಯ ನೀರು ಬಳಕೆದಾರರ ಸಂಘದವರು ದುರಸ್ತಿಗೊಳಿಸಿಕೊಳ್ಳಬೇಕು.

    | ಶರಣು ಗೋಗೇರಿ, ನೀರಾವರಿ ಇಲಾಖೆ ಎಇಇ, ಶಿರಸಂಗಿ ವಿಭಾಗ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts