More

    ಕಸದ ತೊಟ್ಟಿಯಾದ ಕುಣಿಗಲ್ ತಾಲೂಕಿನ ಸಿಂಗಾರಿಕಟ್ಟೆ

    ಕುಣಿಗಲ್/ಹುಲಿಯೂರುದುರ್ಗ: ನಾಡಪ್ರಭು ಕೆಂಪೇಗೌಡರು ಆಳ್ವಿಕೆಯ ಕಾಲದಲ್ಲಿ ಆಪ್ತರಾದ ಶೃಂಗಾರಮ್ಮಎಂಬುವವರಿಗೆ ಬಳುವಳಿಯಾಗಿ ನೀಡಿದ್ದ ಶೃಂಗಾರ ಸಾಗರದ ಸಿಂಗಾರಿಕಟ್ಟೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.

    ಶೃಂಗಾರ ಸಾಗರದ ಅರ್ಧ ಭಾಗ ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ, ಇನ್ನರ್ಧ ಹಳೆವೂರು ಗ್ರಾಪಂಗೆ ಸೇರುತ್ತಿದ್ದು, ಹೊಂದಾಣಿಕೆ ಕೊರತೆಯಿಂದ ಕೆರೆ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹುಲಿಯೂರು ದುರ್ಗದಲ್ಲಿ ಉತ್ಪತ್ತಿಯಾಗುವ ಕೋಳಿ, ಮಾಂಸ ಮತ್ತು ಆಸ್ಪತ್ರೆ ತ್ಯಾಜ್ಯ ಸುರಿಯಲಾಗುತ್ತಿದ್ದು, ಜತೆಗೆ ಕೊಳಚೆ ನೀರನ್ನೂ ಕಟ್ಟೆಗೆ ಹರಿಯಬಿಡಲಾಗಿದೆ.

    ನೀರು ಪಾಚಿ ಕಟ್ಟಿಕೊಂಡು ಗಬ್ಬು ನಾರುತ್ತಿದೆ. ರಸ್ತೆಯಲ್ಲಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿಯೂ ನಿರ್ಮಾಣವಾಗಿದೆ. ಅಲ್ಲದೆ ಸುತ್ತಮುತ್ತಲ ಪರಿಸರದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕವಿದೆ. ಸಾರ್ವಜನಿಕರು ಕೆರೆ ಸ್ವಚ್ಛಗೊಳಿಸುವಂತೆ ಸಾಕಷ್ಟು ಬಾರಿ ಎರಡೂ ಗ್ರಾಪಂಗಳ ಜನಪ್ರತಿನಿಧಿಗಳು ಹಾಗೂ ಪಿಡಿಒಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

    ಸಿಂಗಾರಿ ಕಟ್ಟೆ ಮುಚ್ಚಲು ಕುತಂತ್ರ : ಶೃಂಗಾರ ಸಾಗರದ ಸಿಂಗಾರಿಕಟ್ಟೆ ನೀರನ್ನು ಜನ ಈ ಹಿಂದೆ ಕುಡಿಯಲು ಬಳಸುತ್ತಿದ್ದರು. ದಿನ ಕಳೆದಂತೆ ಕೆರೆ ಕಟ್ಟೆಯಾಗಿ ಮಾರ್ಪಟ್ಟಿದೆ. ಹುಲಿಯೂರುದುರ್ಗ ಬೆಳೆದಂತೆ ಇಲ್ಲಿನ ಭೂಮಿಗೂ ಭರ್ಜರಿ ಬೆಲೆ ಬಂದಿರುವುದನ್ನು ಬಂಡವಾಳ ಮಾಡಿಕೊಂಡಿರುವ ಪ್ರಭಾವಿಗಳು ಸದ್ದಿಲ್ಲದೆ ಕೆರೆ ಮುಚ್ಚಲು ಹೊರಟಿದ್ದಾರೆ. ತ್ಯಾಜ್ಯದ ಜತೆಗೆ ಕಲ್ಲುಗಳನ್ನೂ ಹಾಕುತ್ತಿದ್ದಾರೆ. ಗ್ರಾಪಂ ಅಧಿಕಾರಿಗಳೇ ರಸ್ತೆ ಬದಿ ಇದ್ದ ಕಲ್ಲು ಗುಂಡುಗಳನ್ನು ಕಟ್ಟೆಗೆ ತಳ್ಳಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ನೀರಿನ ಮೂಲ ಸಂರಕ್ಷಿಸಬೇಕಾದ ಅಧಿಕಾರಿಗಳು ತ್ಯಾಜ್ಯ ತಂದು ಸುರಿಯುವವರಿಗೆ ಒಂದೇ ಒಂದು ನೋಟಿಸ್ ಕೂಡ ನೀಡಿಲ್ಲ.

    ಗ್ರಾಪಂಗೆ ಸಾಕಷ್ಟು ಬಾರಿ ಕಟ್ಟೆ ಸ್ವಚ್ಛ ಮಾಡಲು ಮನವರಿಕೆ ಮಾಡಿಕೊಟ್ಟರೂ ಗಮನಹರಿಸಿಲ್ಲ. ಕಟ್ಟೆ ಕಸದ ತೊಟ್ಟಿಯಾಗಲು ಅಧಿಕಾರಿಗಳೇ ಕಾರಣಕರ್ತರು. ಆಡಳಿತ ಹಾಗೂ ಅಧಿಕಾರಿಗಳು ಜಡ್ಡುಗಟ್ಟಿದ್ದಾರೆ. ಹೀಗಾಗಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ಮಾಡಲು ಸಿದ್ಧತೆ ನಡೆಸಿದ್ದೇವೆ.
    ನಟರಾಜು ಹುಲಿಯೂರುದುರ್ಗ ನಿವಾಸಿ

    ಕಟ್ಟೆಗೆ ತ್ಯಾಜ್ಯ ಹಾಕದಂತೆ ನಾಮಫಲಕ ಹಾಕಿದ್ದರೂ ಹುಲಿಯೂರು ದುರ್ಗದ ಜನ ಮಾಂಸ ತ್ಯಾಜ್ಯ ಸೇರಿ ಇನ್ನಿತರ ತ್ಯಾಜ್ಯ ಸುರಿಯುತ್ತಾರೆ. ವರದರಾಜ ಸ್ವಾಮಿ ಜಾತ್ರಾ ಮಹೋತ್ಸವ ಇರುವ ಕಾರಣ ಸದ್ಯಕ್ಕೆ ಸ್ವಚ್ಛತೆಗೆ ಸಾಧ್ಯವಿಲ್ಲ.
    ಮಂಜುನಾಥ್ ಹಳೇವೂರು ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts