More

    ಕಡಲ ಕಿನಾರೆ ಸಿಂಗಾಪುರದಲ್ಲಿ ಕೇಬಲ್ ಕಾರ್ ಕಮಾಲ್; ಜಗತ್ತನ್ನೇ ಸೂಜಿಗಲ್ಲಿನಂತೆ ಸೆಳೆಯುತ್ತಿದೆ ದ್ವೀಪರಾಷ್ಟ್ರ 

    ವಿಶ್ವ ಭೂಪಟದಲ್ಲಿ ಅಂಗೈ ಅಗಲದಷ್ಟಿರುವ, ವಾಸ್ತವದಲ್ಲಿ ಬೆಂಗಳೂರಿಗಿಂತ ಚಿಕ್ಕದಾದ, ‘ಕಡಲ ಕಿನಾರೆ’ ಎಂಬ ಖ್ಯಾತಿಯ ಸಿಂಗಾಪುರ, ಇಂದು ಪ್ರವಾಸೋದ್ಯಮದಲ್ಲಿ ಜಗತ್ತನ್ನೇ ಸೂಜಿಗಲ್ಲಿನಂತೆ ಸೆಳೆದಿದೆ.

    ಸ್ವಾತಂತ್ರ ದೇಶವಾಗಿ 50 ವರ್ಷಗಳ ಸಂಭ್ರಮ ಕಂಡಿರುವ ಸಿಂಗಾಪುರ, 3 ದಶಕ ಗಳ ಹಿಂದೆ ಎದುರಿಸಿದಷ್ಟು ನಿರುದ್ಯೋಗ, ವಸತಿ, ಗಡಿಭದ್ರತೆ ಸಮಸ್ಯೆಗಳನ್ನು ಬಹುಶಃ ಬೇರಾವುದೇ ದ್ವೀಪರಾಷ್ಟಗಳು ಎದುರಿಸಿಲ್ಲ. ಸಮಸ್ಯೆಗಳನ್ನೇ ಸವಾಲಿನ ಮೆಟ್ಟಿಲಾಗಿಸಿಕೊಂಡ ಸಿಂಗಾಪುರ, ಇಂದು ಅಭಿವೃದ್ಧಿಯಲ್ಲಿ ಜಗತ್ತಿಗೆ ಕನ್ನಡಿ ಹಿಡಿಯುವಷ್ಟು ಎತ್ತರಕ್ಕೆ ಬೆಳೆದಿದೆ. ಸಿಂಗಾಪುರಕ್ಕೆ ಪ್ರತಿವರ್ಷ ಬರುವ ಪ್ರವಾಸಿಗರಲ್ಲಿ ಭಾರತೀಯರಿಗೆ ಅಗ್ರಸ್ಥಾನ. ಭಾರತದೊಂದಿಗೆ ಪ್ರವಾಸೋದ್ಯಮ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಯಾಗಿಸಲು ‘ಒನ್ ಫಾಬೆರ್ ಗ್ರೂಪ್’ ಹಲವು ಯೋಜನೆಗಳನ್ನು ರೂಪಿಸಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

    ಕೇಬಲ್ ಕಾರು: ಕೇಬಲ್ ಕಾರಿನ ಪಯಣ ಇಲ್ಲದೆ ಸಿಂಗಾಪುರ ಪ್ರವಾಸ ಪೂರ್ಣಗೊಳ್ಳುವುದಿಲ್ಲ. ಕೊಲ್ಲಿ ರಾಷ್ಟ್ರದೊಳಗೆ ಒಂದು ತುದಿಯಿಂದ ಮತ್ತೊಂದು ತುದಿಗೆ ವೇಗವಾಗಿ ಸಂಪರ್ಕ ಕಲ್ಪಿಸುವ ಕೇಬಲ್ ಕಾರು ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಫ್ಯಾಬೆರ್ ಗ್ರೂಪ್, ಆಕರ್ಷಕ ಪ್ಯಾಕೇಜ್​ಗಳನ್ನು ಕಲ್ಪಿಸುತ್ತಿದೆ ಎನ್ನುತ್ತಾರೆ ಒನ್ ಫ್ಯಾಬೆರ್ ಗ್ರೂಪ್ ನಿರ್ದೇಶಕ (ಬಿಜಿನೆಸ್) ಪ್ಯಾಟ್ರಿಕ್ ಲೀ. ಭಾರತದ ಹಲವು ಪ್ರಮುಖ ಮಹಾನಗರಗಳಿಂದ ನೇರವಾಗಿ ಸಿಂಗಪುರಕ್ಕೆ ವಿಮಾನ ಸಂಪರ್ಕ ಕಲ್ಪಿಸಿರುವುದು ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡಿದೆ ಎಂದು ಹೇಳುತ್ತಾರೆ ಒನ್ ಫಾಬೆರ್ ಗ್ರೂಪ್ ಹಿರಿಯ ನಿರ್ದೇಶಕಿ (ಮಾರ್ಕೆಟಿಂಗ್) ಟ್ರಸ್ಸೀ ಲೂಯಿ.

    ಒಂದಿಷ್ಟು ಇತಿಹಾಸ

    ಪುಟ್ಟ ದ್ವೀಪರಾಷ್ಟ್ರ ಸಿಂಗಾಪುರ 1965ರಲ್ಲಿ ಮಲೇಷ್ಯಾದಿಂದ ಪ್ರತ್ಯೇಕಗೊಂಡ ಮೇಲೆ ಸಾಕಷ್ಟು ಅಭಿವೃದ್ಧಿ ಕಂಡಿದೆ. ಸದ್ಯ 4.5 ದಶಲಕ್ಷ ಜನಸಂಖ್ಯೆ ಹೊಂದಿದೆ. ಒಂದು ಕಾಲಕ್ಕೆ ಬೆಸ್ತರ ಹಳ್ಳಿಯಾಗಿದ್ದ ಸಿಂಗಾಪುರಕ್ಕೆ ಬಂದ ಚೀನಿಯರು, ಮಲಯರು ಹಾಗೂ ಭಾರತೀ ಯರು ಆಧುನಿಕ ನಗರವನ್ನಾಗಿ ರೂಪಿಸಿದ್ದಾರೆ. ಒಂದರ್ಥದಲ್ಲಿ ಸಿಂಗಾಪುರವು ಸರ್ವಧರ್ಮ ಸಮನ್ವಯ ಕೇಂದ್ರ. ಇಂಗ್ಲಿಷ್, ಮಲಯ್, ಮ್ಯಾಂಡರಿನ್ ಹಾಗೂ ತಮಿಳು ಇಲ್ಲಿನ ಅಧಿಕೃತ ಭಾಷೆಗಳಾಗಿದ್ದರೂ ಇಂಗ್ಲಿಷ್ ಭಾಷೆ ಸಾರ್ವಜನಿಕ ಮಾನ್ಯತೆ ಪಡೆದಿದೆ.

    ಸಿಂಗಾಪುರದಲ್ಲಿನ ಕನ್ನಡಿಗರ ಆಶಯ

    ಸಿಂಗಾಪುರದ ಶಾಲೆಗಳಲ್ಲಿ ಮಕ್ಕಳು ಕಡ್ಡಾಯವಾಗಿ ತಮ್ಮ ಮಾತೃಭಾಷೆಯನ್ನು ಪ್ರೌಢಶಾಲಾ ಅಥವಾ ‘ಎ’ ಹಂತದವರೆಗೆ ಒಂದು ಪ್ರಮುಖ ವಿಷಯವಾಗಿ ಕಲಿಯುತ್ತಾರೆ. ಕೆಲವರ್ಷಗಳ ಹಿಂದೆ ಭಾರತೀಯ ಭಾಷೆಗಳಾದ ಹಿಂದಿ, ಪಂಜಾಬಿ, ಗುಜರಾತಿ, ಉರ್ದು ಹಾಗೂ ಬಂಗಾಲಿಯನ್ನು ಮಾತೃಭಾಷೆಯಾಗಿ ಪರಿಗಣಿಸಿಸಲಾಗಿದೆ. ಮುಂದೊಂದು ದಿನ ಕನ್ನಡಕ್ಕೂ ಇದೇ ಸ್ಥಾನ ದೊರೆಯಲಿ ಎಂಬುದು ಇಲ್ಲಿ ನೆಲೆಸಿರುವ ಕನ್ನಡಿಗರೆಲ್ಲರ ಆಶಯವಾಗಿದೆ.

    | ಶಿವಾನಂದ ತಗಡೂರು ಸಿಂಗಾಪುರ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts