ಸಿಂಧನೂರು: ಈಗಾಗಲೇ ರೈಲ್ವೆ ಕಾಮಗಾರಿ ನಿಧಾನವಾಗಿ ನಡೆದಿದ್ದು, ಮಾರ್ಚ್ ಅಂತ್ಯಕ್ಕೆ ಎಲ್ಲ ಕಾಮಗಾರಿ ಮುಗಿಸಿ ರೈಲು ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಂಸದ ಕರಡಿ ಸಂಗಣ್ಣ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಶಿವಜ್ಯೋತಿ ನಗರದ ಹತ್ತಿರ ನಡೆದಿರುವ ಮುನಿರಾಬಾದ್ ಮಹೆಬೂಬ ನಗರ ರೈಲ್ವೆ ಕಾಮಗಾರಿ ಮಂಗಳವಾರ ವೀಕ್ಷಿಸಿ ಮಾತನಾಡಿದರು. ರೈಲ್ವೆ ಕಾಮಗಾರಿಗೆ ಯಾವುದೇ ಅನುದಾನದ ಸಮಸ್ಯೆಯಿಲ್ಲ. ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಯಾಗಿದ್ದು, ಚುನಾವಣೆ ವೇಳೆಗೆ ಕಾಮಗಾರಿ ಮುಗಿಸಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಬಾರದು. ಶೇ.70ರಷ್ಟು ಕೆಲಸ ಮುಗಿದಿದ್ದು ಇನ್ನುಳಿದ ಕೆಲಸವನ್ನು ಚುರುಕಿನಿಂದ ಮಾಡಬೇಕು ಎಂದರು. ಎಸ್‌ಡಬ್ಲ್ಯೂಆರ್ ಜೋನ್‌ನ ಡೆಪ್ಯೂಟಿ ಚೀಫ್ ಇಂಜಿನಿಯರ್ ಮೋಹನ್‌ರಾವ್, ರೈಲ್ವೆ ಕಾಮಗಾರಿ ಕುರಿತು ಸಂಸದರಿಗೆ ಮಾಹಿತಿ ನೀಡಿದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಮರೇಗೌಡ ವಿರುಪಾಪುರ, ತಹಸೀಲ್ದಾರ್ ಅರುಣ ದೇಸಾಯಿ, ವಿಶೇಷ ಭೂಸ್ವಾಧೀನಾಧಿಕಾರಿ ಕೆ.ಶ್ರುತಿ, ಬಿಜೆಪಿ ನಗರ ಘಟಕ ಅಧ್ಯಕ್ಷ ನಿರುಪಾದೆಪ್ಪ ಜೋಳದರಾಶಿ ಇತರರಿದ್ದರು.