More

    ಸಿಂಧನೂರು ಆಸ್ಪತ್ರೆಗೆ ಬೇಕಿದೆ ಸೂಕ್ತ ಚಿಕಿತ್ಸೆ

    ಸಿಂಧನೂರು: ಪ್ರತಿನಿತ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ಸಾವಿರಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಯಲ್ಲಿನ ಸೌಲಭ್ಯ ಕೊರತೆಯಿಂದ ಪರದಾಡುವಂತಾಗಿದೆ.

    100 ಹಾಸಿಗೆಯ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ವೈದ್ಯರ ಕೊರತೆ ಇತ್ತು. ಪ್ರಸ್ತುತ ಪಿಜಿಷನ್, ಚರ್ಮ, ಕಣ್ಣು, ಕಿವಿ, ಮೂಗು, ದಂತ, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞ, ಮೂಳೆ ತಜ್ಞ ಒಟ್ಟು 10 ಜನ ವೈದ್ಯರು ನೇಮಕವಾಗಿದ್ದು, ಬಹುತೇಕ ಹುದ್ದೆಗಳು ಭರ್ತಿಯಾಗಿವೆ. ಆದರೆ, ತೀರ ಅಗತ್ಯವಿರುವ ವೈದ್ಯರ ಕೊರತೆ ಇದೆ. ವೆಂಟಿಲೇಟರ್, ಐಸಿಯು, ಪ್ರಯೋಗಾಲಯಗಳ ಕಾರ್ಯನಿರ್ವಹಣೆ ಸಮಸ್ಯೆ ಇದೆ. ಪ್ರತಿ ದಿನ 1 ಸಾವಿರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಸೌಲಭ್ಯ ಮಾತ್ರ ಅಷ್ಟಕ್ಕಷ್ಟೇ ಎನ್ನುವಂತಾಗಿದೆ. ಮುಖ್ಯವೈದ್ಯಾಧಿಕಾರಿಗಳು ಆದಷ್ಟು ಶುಚಿತ್ವ, ಸೌಲಭ್ಯ ಒದಗಿಸಲು ಮುಂದಾದರೂ, ಚಿಕಿತ್ಸೆ ಪಡೆಯುವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸೌಕರ್ಯ ಕೊರತೆ ಎದ್ದು ಕಾಣುತ್ತಿದೆ.

    ನಾಯಿಕೊಡೆಯಂತೆದ್ದ ಖಾಸಗಿ ಲ್ಯಾಬ್‌ಗಳು: ಆಸ್ಪತ್ರೆಯ ಮೂಲೆಯೊಂದರ ಕೊಠಡಿಯಲ್ಲಿ ಲ್ಯಾಬ್ ಇದೆ. ಹೆಸರಿಗಷ್ಟೇ ಹೈಟೆಕ್ ಪ್ರಯೋಗಾಲಯ. ಆದರೆ ನಿತ್ಯ ಚಿಕಿತ್ಸೆಗೆ ಬರುವ ಶೇ.90 ರಷ್ಟು ರೋಗಿಗಳಿಗೆ ಇಲ್ಲಿ ರಕ್ತ ಪರೀಕ್ಷೆ ಮಾತ್ರ ಮಾಡುತ್ತಿದ್ದು ಉಳಿದಂತೆ ಯಾವುದೇ ಪರೀಕ್ಷೆಗಳನ್ನು ಕೈಗೊಳ್ಳವುದಿಲ್ಲ. ಮೂತ್ರಪಿಂಡ, ಲಿವರ್ ಹಾಗೂ ಕೊಲೆಸ್ಟ್ರಾಲ್ ಲಿಕ್ವಿಡ್ ಪ್ರೊಫೈಲ್ ಹಾಗೂ ಮಧುಮೇಹ ಪರೀಕ್ಷೆಗಾಗಿ ನಗರದಲ್ಲಿ ನಾಯಿಕೊಡೆಗಳಂತೆ ತಲೆಎತ್ತಿರುವ ಖಾಸಗಿ ಪ್ರಯೋಗಾಲಯಗಳಲ್ಲಿ ದುಪ್ಪಟ್ಟು ಹಣತೆತ್ತು ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಬಡ ರೋಗಿಗಳ ಪಾಲಿಗೆ ಸರ್ಕಾರಿ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ. ಆಸ್ಪತ್ರೆ ಎಕ್ಸರೇ ಮಿಷನ್ ಕೂಟ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂಬ ದೂರುಗಳಿವೆ. ಬ್ಲಡ್ ಬ್ಯಾಂಕ್ ಕೂಡ ಇಲ್ಲ. ಇದರಿಂದ ಜನರು ಹೆಚ್ಚಿನ ಹಣ ತೆತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಜ್ವರ ಇತರ ಕಾಯಿಲೆಗೆ ರಕ್ತ ಪರೀಕ್ಷೆ ಕಡ್ಡಾಯ ಮಾಡಿಸಬೇಕಿದ್ದು ಕೆಲ ಖಾಸಗಿ ಲ್ಯಾಬ್‌ಗಳಲ್ಲಿ ಹಳೆಯ ಮಷಿನ್‌ಗಳಿದ್ದರೂ ಜನರಿಂದ ದುಪ್ಪಟ್ಟು ಹಣ ಪಡೆದು, ರಕ್ತ ಪರೀಕ್ಷೆಯ ತಪ್ಪು ವರದಿ ನೀಡಿ ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡಲಾಗುತ್ತಿದೆ ಎಂಬುದು ನಾಗರಿಕರ ಗಂಭೀರ ಆರೋಪವಾಗಿದೆ.

    ಸ್ವಚ್ಛತೆ ಇಲ್ಲದ ಶೌಚಗೃಹ: ಆಸ್ಪತ್ರೆಯ ಶೌಚಗೃಹಗಳ ಶುಚಿತ್ವ ಮರೀಚಿಕೆಯಾಗಿದೆ. ಡ್ರೈನೆಜ್ ಇಲ್ಲದೆ ಅಶುಚಿತ್ವ ತಾಡವಾಡುತ್ತಿರುವುದು ಮುಖ್ಯವೈದ್ಯಾಧಿಕಾರಿಗಳಿಗೆ ತಲೆಬಿಸಿ ಮಾಡಿದೆ. ಶೌಚಗೃಹಕ್ಕೆ ಪೈಪ್ ಅಳವಡಿಗೆ ಇಲ್ಲದಿರುವುದು ದುರ್ನಾತಕ್ಕೆ ಕಾರಣವಾಗಿದೆ. ಈ ಬಗ್ಗೆ ಮುಖ್ಯವೈದಾಧಿಕಾರಿಗಳು ಸಂಬಂಧಿಸಿದವರ ಗಮನಕ್ಕೆ ತಂದಿದ್ದರೂ ಪ್ರಯೋಜನ ಶೂನ್ಯವಾಗಿದೆ.

    ವೈದ್ಯ, ಸಿಬ್ಬಂದಿ ಕೊರತೆ: ಆಸ್ಪತ್ರೆಯಲ್ಲಿ ಈಗಿರುವ ವೈದ್ಯರ ಜತೆಗೆ ಇನ್ನಷ್ಟು ವೈದ್ಯರ ಅಗತ್ಯವಿದ್ದು, ಐಸಿಯು ವಿಭಾಗಕ್ಕೂ ಸಿಬ್ಬಂದಿ ಬೇಕಿದೆ. 10 ನರ್ಸಿಂಗ್, ಡಿ ಗ್ರೂಪ್ ಸಿಬ್ಬಂದಿ ಅವಶ್ಯವಿದ್ದು ಇದುವರೆಗೆ ಬೇಡಿಕೆ ಈಡೇರಿಲ್ಲ. ಹಾಲಿ ವೈದ್ಯರು, ಸಿಬ್ಬಂದಿಗೆ ಆಸ್ಪತ್ರೆ ವ್ಯಾಪ್ತಿಯಲ್ಲಿ ವಸತಿ ಗೃಹಗಳಿಲ್ಲ. ಇದರಿಂದ ವೈದ್ಯರು ಇಲ್ಲಿ ಬರಲು ಹಿಂಜರಿಯುವಂತಾಗಿದೆ.

    ತಾಲೂಕು ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಬಂದು ಹೋಗುತ್ತಾರೆ. ತಜ್ಞ ವೈದ್ಯರು ಇದ್ದರೂ ರೋಗಿಗಳು ಚಿಕಿತ್ಸೆಗೆ ಬಂದಾಗ ಲಭ್ಯವಿರುವುದಿಲ್ಲ. ಇದರಿಂದ ತುರ್ತು ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆ ಮೇಲ್ದರ್ಜೆಗೇರಿಸುವ ಅಗತ್ಯವೂ ಇದೆ. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಿದೆ.
    ನಾಗರಾಜಗೌಡ ಬಗ್ಗೂರ, ಸಿಂಧನೂರು ನಿವಾಸಿ

    ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳಲ್ಲೇ ಜನರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಸೇರಿ ಇನ್ನೂ 10 ಜನ ಸಿಬ್ಬಂದಿ ಬೇಕಿದೆ. ಈ ಹಿಂದೆ ಇದ್ದ ಸಮಸ್ಯೆ ಸರಿಪಡಿಸಲಾಗಿದೆ. ಆಸ್ಪತ್ರೆಗೆ ಬರುವರ ಸಂಖ್ಯೆ ಹೆಚ್ಚಿರುವುದರಿಂದ ಇನ್ನಷ್ಟು ಸೌಲಭ್ಯ ಒದಗಿಸಿದರೆ ಹೆಚ್ಚಿನ ಅನಕೂಲವಾಗಲಿದೆ.
    ಡಾ.ನಾಗರಾಜ ಕಾಟ್ವಾ, ಮುಖ್ಯವೈದ್ಯಾಧಿಕಾರಿ, ಸಿಂಧನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts