More

    ಪ್ರಾದೇಶಿಕ ಭಾಷೆ ಸಾಹಿತ್ಯಿಕ ಭಾಷೆಯಾಗಿ ಪರಿವರ್ತಿಸಿ; ಡಾ.ಅಮರೇಶ ನುಗಡೋಣಿ ಕಿವಿಮಾತು

    ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ


    ಸಿಂಧನೂರು: ಸ್ಥಳೀಯ ಪ್ರಾದೇಶಿಕ ಭಾಷೆಯನ್ನೇ ಸಾಹಿತ್ಯದ ಭಾಷೆಯಾಗಿ ಪರಿವರ್ತಿಸುವವನೇ ನಿಜವಾದ ಕಥೆಗಾರ. ಕರುನಾಡ ಕಥಾಕಣಜದಲ್ಲಿ ಅಂಥ ಕಥೆಗಳಿರುವುದು ಹೆಮ್ಮೆಯ ವಿಷಯ ಎಂದು ಕನ್ನಡ ವಿವಿ ಪ್ರಾಧ್ಯಾಪಕ ಡಾ.ಅಮರೇಶ ನುಗಡೋಣಿ ಹೇಳಿದರು.

    ನಗರದ ಸಂಗಮ್ ಪ್ಯಾಲೇಸ್‌ನಲ್ಲಿ ಭಾನುವಾರ ಶ್ರೀ ರುದ್ರಗೌಡ ಪಾಟೀಲ್ ಪ್ರತಿಷ್ಠಾನ ಹಾಗೂ ಆಕ್ಸಫರ್ಡ್ ಫೌಂಡೇಶನ್ ಆಶ್ರಯದಲ್ಲಿ ರಾಜ್ಯ ಮಟ್ಟದ ಮುಕ್ತ ಕಥಾ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಕರುನಾಡ ಕಥಾಕಣಜ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ವಿಶ್ಲೇಷಣೆ ಮಾಡಿ ಮಾತನಾಡಿದರು. ಕಥೆಗಾರ ತನ್ನ ಪ್ರದೇಶದ ಪರಿಸರ, ಭಾಷೆ, ಸಂಸ್ಕೃತಿ ಕುರಿತಾಗಿ ಆಲೋಚಿಸಿ ಪ್ರಾದೇಶಿಕ ಚರಿತ್ರೆ, ಸಂಸ್ಕೃತಿ ಕಥೆಯಲ್ಲಿ ಅನಾವರಣಗೊಳಿಸಿದರೆ ಆ ಕಥೆಯು ಮಹತ್ವ ಪಡೆದುಕೊಳ್ಳತ್ತದೆ. ಆ ಕಥೆಯಲ್ಲಿ ಮನುಷ್ಯನ ನೋವುಗಳು ಅಡಕವಾಗಿರಬೇಕು. ಇಂಥ ಕಥೆ ಬರೆಯುವಾಗ ಆಳವಾಗಿ ಗ್ರಹಿಸುವಿಕೆ ಅಗತ್ಯವಾಗಿರುತ್ತದೆ. ಕಥೆ, ಭಾಷೆ ಮತ್ತು ಪಾತ್ರಗಳು ಈ ಮೂರನ್ನೂ ಯಾರು ಅರಿಯುತ್ತಾರೆಯೋ ಅವರು ಉತ್ತಮ ಕಥೆಗಾರರಾಗಿ ಹೊರ ಹೊಮ್ಮುತ್ತಾರೆ ಎಂದು ತಿಳಿಸಿದರು.

    ಕಿರುಗತೆ, ನೀಳ್ಗತೆ, ಅತಿಸಣ್ಣಕತೆ ಇವು ಮುಖ್ಯವಲ್ಲ. ಕಥೆ ಮುಖ್ಯ. ಅದು ಸಣ್ಣದಿರಲಿ, ದೀರ್ಘವಾಗಿರಲಿ ತನ್ನ ಸತ್ವದಿಂದ ನಿಲ್ಲಬೇಕು. ನಮ್ಮ ಹಿರಿಯ ಕತೆಗಾರರು ಸಣ್ಣಕತೆ ಬರೆದಿದ್ದಾರೆಯೇ ಹೊರತು ಅವುಗಳ ಗಾತ್ರ ಅನುಲಕ್ಷಿಸಿ ಬರೆದಿಲ್ಲ. ರುದ್ರಗೌಡ ಪಾಟೀಲ್ ಸ್ಮರಣಾರ್ಥ ನಡೆದ ಕಥೆ ಸ್ಪರ್ಧೆಗೆ 197 ಕಥೆಗಳು ಬಂದಿರುವುದು ಒಳ್ಳೆಯ ಬೆಳವಣಿಗೆ. ಇದರಲ್ಲಿ ಅತ್ಯುತ್ತಮ ಕಥೆಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಜತೆಗೆ ಮೆಚ್ಚುಗೆ ಕಥೆಗಳನ್ನು ಗುರುತಿಸಲಾಗಿದೆ. ಎಲ್ಲ 16ಕಥೆಗಳನ್ನು ಪುಸ್ತಕ ರೂಪದಲ್ಲಿ ತಂದ ಮೊಟ್ಟ ಮೊದಲ ಕೆಲಸ ಇದಾಗಿದೆ ಎಂದು ಶ್ಲಾಘಿಸಿದರು.

    ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ರಂಭಾಪುರಿ ಶಾಖಾಮಠದ ಶ್ರೀ ಸೋಮನಾಥ ಶಿವಾಚಾರ್ಯಸ್ವಾಮೀಜಿ ಮಾತನಾಡಿ, ರುದ್ರಗೌಡ ಪ್ರತಿಷ್ಠಾನದಿಂದ ಅತ್ಯುತ್ತಮ ಕೆಲಸವಾಗಿದೆ. ಇಂತಹ ಇನ್ನೂ ಅತ್ಯುತ್ತಮ ಕೆಲಸಗಳನ್ನು ಈ ಸಂಸ್ಥೆ ಮಾಡಲಿ ಎಂದು ಹಾರೈಸಿದರು. ಆಕ್ಸ್‌ಫರ್ಡ್ ಫೌಂಡೇಶನ್ ಅಧ್ಯಕ್ಷ ಎನ್.ಸತ್ಯನಾರಾಯಣ ಶ್ರೇಷ್ಠಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಪ್ರಮುಖರಾದ ಲಕ್ಷ್ಮೀದೇವಿ ರುದ್ರಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಡಾ.ಚನ್ನನಗೌಡ ಆರ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ಕರ್ನಾಟಕ ಲಲಿತ ಅಕಾಡೆಮಿ ಮಾಜಿ ಸದಸ್ಯ ದೇವೆಂದ್ರ ಹುಡಾ ಇದ್ದರು. ಕಥಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts