More

  ಕಾಮಗಾರಿ ವಿಳಂಬಕ್ಕೆ ಶಾಸಕ ನಾಡಗೌಡ ಸಿಡಿಮಿಡಿ

  ತ್ವರಿತಗತಿಯಲ್ಲಿ ಕೆಲಸ ಮುಗಿಸಿ ಇಲ್ಲವಾದರೆ ಕೆಲಸ ಬಿಟ್ಟು ಮನೆಗೆ ಹೋಗಿ ಎಂದ ಶಾಸಕ ನಾಡಗೌಡ

  ಸಿಂಧನೂರು: ನಗರದ ಬಹುನಿರೀಕ್ಷಿತ ಯೋಜನೆಗಳಾದ ಯುಜಿಡಿ ಮತ್ತು 24/7 ಕುಡಿವ ನೀರು ಯೋಜನೆಯ ಕಾಮಗಾರಿಗಳ ವಿಳಂಬಕ್ಕೆ ಸಂಬಂಧಿಸಿದಂತೆ ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡರು.

  ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ವಾರ್ಡ್‌ಗಳಲ್ಲಿ ಕೈಗೊಂಡಿರುವ ಯುಜಿಡಿ ಮತ್ತು ನಿರಂತರ ನೀರು ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಕಾಮಗಾರಿ ಕೈಗೊಂಡು ಆರೇಳು ವರ್ಷಗಳಾದರೂ ಇದುವರೆಗೂ ಪೂರ್ಣಗೊಳ್ಳುತ್ತಿಲ್ಲ. ನಿರಂತರ ನೀರು ಯೋಜನೆ ಮೂಲಕ ಒಂದು ದಿನ ಮಾತ್ರ ನೀರು ಪೂರೈಕೆ ಮಾಡಲಾಗಿದೆ. ನಂತರ ಎಲ್ಲಿಯೂ ನೀರು ಪೂರೈಕೆಯಾಗಿಲ್ಲ. ಇದರಿಂದ ಜನರು ಹಿಡಿಶಾಪ ಹಾಕುತ್ತಿದ್ದಾರೆ. ತ್ವರಿತಗತಿಯಲ್ಲಿ ಕೆಲಸ ಮುಗಿಸುವುದಾದರೆ ಮುಗಿಸಿ, ಇಲ್ಲದಿದ್ದರೆ ಕೆಲಸ ಬಿಟ್ಟು ಮನೆಗೆ ಹೋಗಿ ಎಂದು ದಬಾಯಿಸಿದರು.

  ಕಾಮಗಾರಿ ಪ್ರಗತಿ ಬಗ್ಗೆ ಯುಜಿಡಿ ಹಾಗೂ 24/7 ಕುಡಿವ ನೀರಿನ ಬಗ್ಗೆ ಮಾಹಿತಿ ನೀಡಲು ಸಂಬಂಧಪಟ್ಟ ಅಧಿಕಾರಿ ತೊದಲುತ್ತಿದ್ದಂತೆ ಸಿಟ್ಟಿಗೆದ್ದ ಶಾಸಕರು, ನೀವು ಏನು ಮಾಡುತ್ತಿದ್ದೀರಿ, ಸ್ವಲ್ಪಾದರೂ ಜವಾಬ್ದಾರಿ ಇದೆಯಾ ನಿಮಗೆ ? ಜವಾಬ್ದಾರಿ ಇದ್ದರೆ ಈ ರೀತಿಯ ವರ್ತನೆ ಮಾಡುತ್ತಿರಲಿಲ್ಲ. ಊಟಕ್ಕೆ ಮಾತ್ರ ಕರೆಯಿರಿ, ಕೆಲಸಕ್ಕೆ ಬೇಡ ಎನ್ನುವಂತೆ ನಿಮ್ಮ ಕಾರ್ಯ ವೈಖರಿ ಇದೆ ಎಂದು ಆಕ್ರೋಶ ಹೊರ ಹಾಕಿದರು.

  ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ, ಕೆಯುಐಡಿಎಫ್‌ಸಿ ಎಇಇ ಗಿರೀಶ್ ನಾಯಕ, ನಗರಸಭೆ ಸದಸ್ಯರಾದ ಚಂದ್ರಶೇಖರ ಮೈಲಾರ, ಕೆ.ರಾಜಶೇಖರ, ದಾಸರಿ ಸತ್ಯನಾರಾಯಣ, ವೀರೇಶ ಹಟ್ಟಿ ಅಧಿಕಾರಿಗಳು ಇದ್ದರು.

  ಜಿಎಂಗೆ ಕರೆ, ಅಸಮಾಧಾನ ವ್ಯಕ್ತ : ಯೋಜನೆಗೆ ಸಂಬಂಧಿಸಿದಂತೆ ಜಿಎಂಗೆ ದೂರವಾಣಿ ಮೂಲಕ ಕರೆ ಮಾಡಿದ ಶಾಸಕ ನಾಡಗೌಡ, ಯುಜಿಡಿ ಮತ್ತು ನಿರಂತರ ನೀರು ಯೋಜನೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೆಲಸ ಪೂರ್ಣಗೊಳ್ಳುತ್ತಿಲ್ಲ. ಜ.13 ರಂದು ಬೆಂಗಳೂರಿನಲ್ಲಿ ಸಭೆ ಕರೆದು ಕಾಮಗಾರಿಗಳ ಕುರಿತು ಚರ್ಚಿಸಬೇಕು. ಇಲ್ಲದಿದ್ದರೆ ಇವರನ್ನು ಕಪ್ಪು ಪಟ್ಟಿಗೆ ಸೇರಬೇಕು ಎಂದು ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts