More

    ಎಸ್ಸೆಸ್ಸೆಲ್ಸಿ ಪರೀಕ್ಷೆ ಶಿಸ್ತುಬದ್ಧವಾಗಿರಲಿ, ಅಧಿಕಾರಿಗಳಿಗೆ ಶಾಸಕ ವೆಂಕಟರಾವ ನಾಡಗೌಡ ಸೂಚನೆ

    ಸಿಂಧನೂರು: ಕೋವಿಡ್-19 ಮಾರ್ಗಸೂಚಿ ಅನುಸರಿಸಿ ಶಿಸ್ತುಬದ್ಧ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಬೇರಿದ್ದು, ಯಾವುದೇ ಅವಘಡಕ್ಕೆ ಅವಕಾಶ ಕೊಡಬಾರದು ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

    ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತ, ಶಿಕ್ಷಣ ಇಲಾಖೆ ನೇತೃತ್ವದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜು.19 ಮತ್ತು 22ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರ್ಕಾರ ಆದೇಶಿಸಿದ್ದು, ಕೋವಿಡ್ ಮಾರ್ಗಸೂಚಿ ಅನುಸರಿಸಲು ಸೂಚನೆ ನೀಡಿದೆ. ಈ ಬಗ್ಗೆ ನಾವು ಬಹಳ ಎಚ್ಚರಿಕೆ ವಹಿಸಿ ಪರೀಕ್ಷೆ ಯಶಸ್ವಿಗೊಳಿಸಬೇಕು. ಗ್ರಾಮೀಣ ಪ್ರದೇಶದಿಂದ ವಿದ್ಯಾರ್ಥಿಗಳನ್ನು ಕರೆತರಲು ಬಸ್ ಸೌಕರ್ಯ, ಪರೀಕ್ಷಾ ಕೇಂದ್ರದಲ್ಲಿ ಕುಡಿವ ನೀರಿನ ವ್ಯವಸ್ಥೆ ಶಿಕ್ಷಣ ಇಲಾಖೆ ಮಾಡಿಕೊಳ್ಳಬೇಕು. ಆಯಾ ಶಾಲಾ ಮುಖ್ಯಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿ ಒಬ್ಬ ವಿದ್ಯಾರ್ಥಿಯೂ ಪರೀಕ್ಷೆಯಿಂದ ವಂಚಿತಗೊಳ್ಳದಂತೆ ಎಚ್ಚರ ವಹಿಸಬೇಕು ಎಂದರು.

    ನಗರದ ಖಜಾನೆ ಇಲಾಖೆಯಿಂದ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗುವ ಸಂದರ್ಭ ಕೂಡ ಕಾಳಜಿ ವಹಿಸಬೇಕು. ಯಾವುದೇ ರೀತಿಯಲ್ಲಿ ಪ್ರಶ್ನೆಪತ್ರಿಕೆ ಲೀಕ್ ಆಗಬಾರದು. ಮೊಬೈಲ್ ಸ್ಕ್ವಾಡ್ ನೋಡಿಕೊಳ್ಳಬೇಕು. ತಹಸೀಲ್ದಾರ್, ತಾಪಂ ಇಒ ಹಾಗೂ ಬಿಇಒ ಪರೀಕ್ಷೆ ಯಶಸ್ವಿಗೊಳಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.

    ಬಿಇಒ ಶರಣಪ್ಪ ವಟಗಲ್ ಮಾತನಾಡಿ, ತಾಲೂಕಿನಲ್ಲಿ 5686 ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿದ್ದು, ನಗರದಲ್ಲಿ 11 ಹಾಗೂ ಗ್ರಾಮೀಣ ಪ್ರದೇಶದಲ್ಲಿ 24 ಪರೀಕ್ಷಾ ಕೇಂದ್ರ ಗುರುತಿಸಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸ್ಯಾನಿಟೈಸ್ ಮಾಡಿಸಲಾಗುವುದು. ದೈಹಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗುವುದು. ಕೋವಿಡ್-19 ಲಕ್ಷಣ ಕಂಡು ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಸಲಾಗುವುದು. ನಮಗೆ ಬೇಕಾಗುವಷ್ಟು ಬಸ್‌ಗಳನ್ನು ಒದಗಿಸಲು ಕೆಎಸ್‌ಆರ್‌ಟಿಸಿಗೆ ಮಾಹಿತಿ ನೀಡಲಾಗಿದೆ. ಪೊಲೀಸ್ ಸಹಕಾರವನ್ನೂ ಕೇಳಲಾಗಿದೆ ಎಂದರು.

    ತಹಸೀಲ್ದಾರ ಮಂಜುನಾಥ ಭೋಗಾವತಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಥರ್ಮಲ್ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು. ಸೋಂಕಿತ ಮಕ್ಕಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಬೇಕು. ಬಸ್‌ಗಳನ್ನು ಪರೀಕ್ಷೆ ದಿನದಂದು ಬೆಳಗ್ಗೆ 6 ಗಂಟೆಗೆ ಕಳಿಸಿಕೊಡಲಾಗುವುದು. ಶಿಕ್ಷಕರು ಕಾಳಜಿ ವಹಿಸಿ ತಮ್ಮ ತಮ್ಮ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಬೇಕು. ಜು.18, 19, 21 ಹಾಗೂ 22 ರಂದು ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿಸಬೇಕು. ನಗರದಲ್ಲಿ ನಗರಸಭೆಯವರು, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂನವರು ಸ್ಯಾನಿಟೈಸ್ ಮಾಡಿಸಲು ಕ್ರಮಕೈಗೊಳ್ಳಬೇಕು ಎಂದರು.

    ಕೋವಿಡ್ ನೋಡಲ್ ಅಧಿಕಾರಿ ಡಾ.ಜೀವನೇಶ್ವರ, ತಾಪಂ ಇಒ ಪವನಕುಮಾರ, ಸಾರಿಗೆ ವ್ಯವಸ್ಥಾಪಕ ಪ್ರಕಾಶ, ಖಜಾನೆ ಇಲಾಖೆ ಸಿಬ್ಬಂದಿ ಹನುಮಂತಪ್ಪ ನಾಯಕ ಇದ್ದರು.

    ಎಎಸ್‌ಐಗಳ ಗದರಿಸಿದ ಶಾಸಕ
    ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವಸಿದ್ಧತಾ ಸಭೆಗೆ ಡಿಎಸ್‌ಪಿ ಮತ್ತು ಸಿಪಿಐ ಬರದೇ ಎಎಸ್‌ಐಗಳು ಬಂದಿದ್ದಕ್ಕೆ ಕಿಡಿಕಾರಿದ ಶಾಸಕ ವೆಂಕಟರಾವ ನಾಡಗೌಡ, ಅವರನ್ನು ಗದರಿಸಿದರು. ಈ ಸಭೆ ಎಷ್ಟು ಮುಖ್ಯಎನ್ನುವುದು ನಿಮಗೆ ಗೊತ್ತಿಲ್ಲವೇ? ಇದು ಹುಡುಕಾಟದ್ದಲ್ಲ. ಇಂಥ ಸಭೆಗೆ ಕರೆದ್ರೂ ಪ್ರಮುಖರು ಬರದಿದ್ದರೆ ಹೇಗೆ? ನೀವೂ ಸರಿಯಾದ ಸಮಯಕ್ಕೆ ಬಂದಿಲ್ಲ. ಈ ಬೇಜಾವಾಬ್ದಾರಿ ಸರಿಯಲ್ಲ. ಎಸ್‌ಪಿಗೆ ದೂರು ಕೊಡುತ್ತೇನೆ ಎಂದರು. ಸಭೆಗೆ ತಡವಾಗಿ ಬಂದ ತಾಪಂ ಇಒರನ್ನೂ ತರಾಟೆಗೆ ತೆಗೆದುಕೊಂಡು, ಸಭೆ ಇದ್ದರೂ ಏನು ಮಾಡಲು ಹೋಗಿದ್ದಿರಿ ಎಂದು ದಬಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts