More

    ಭತ್ತ ಖರೀದಿ ಕೇಂದ್ರಗಳನ್ನು ಶೀಘ್ರ ಆರಂಭಿಸಲಿ; ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯ

    ಸಿಂಧನೂರು: ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಕೂಡಲೇ ಆರಂಭಿಸಬೇಕು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಒತ್ತಾಯಿಸಿದರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ 4.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆ ಬೆಳೆಯಲಾಗಿದೆ. ಈಗಾಗಲೇ ಶೇ.30 ಭತ್ತ ಕಟಾವು ಆಗಿದೆ. ಮಳೆ ಬಂದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಆದರೆ, ರೈತರ ಗೋಳು ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲ. ಶಾಸಕ ವೆಂಕಟರಾವ್ ನಾಡಗೌಡ ಜನತಾ ಜಲಧಾರೆ ರಥಯಾತ್ರೆ ಹೆಸರಿನಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಭತ್ತ ಖರೀದಿ ಕೇಂದ್ರ ಆರಂಭಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ಜಿಲ್ಲಾಧಿಕಾರಿ ಗಮನ ಸೆಳೆದಿಲ್ಲ ಎಂದು ದೂರಿದರು.

    ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ರಾಸಾಯನಿಕ ಗೊಬ್ಬರಗಳ ಬೆಲೆಗಳನ್ನು ಹೆಚ್ಚಿಸಿದೆ. ಆದರೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಫಸಲು ಕಟಾವು ಆಗುವ ಒಂದು ತಿಂಗಳ ಮೊದಲೇ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು. ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು. ಕಡಿಮೆ ದರಕ್ಕೆ ಭತ್ತ ಖರೀದಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಂಪನಗೌಡ ಬಾದರ್ಲಿ ಒತ್ತಾಯಿಸಿದರು.

    ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಾಫರ್ ಅಲಿ ಜಾಗೀರದಾರ್, ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸದಸ್ಯ ಶೇಖರಪ್ಪ ಗಿಣಿವಾರ, ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡರ, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಖಾಜಿ ಮಲಿಕ್, ವೆಂಕಟರಾವ ಬಂಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts