More

    ಸಿಂಧನೂರು ತಾಲೂಕಿನಲ್ಲಿ ಕಡಲೆ ಮಾರಾಟಕ್ಕಿಲ್ಲ ನಿರೀಕ್ಷಿತ ಪ್ರತಿಕ್ರಿಯೆ


    ಸಿಂಧನೂರು: ಕಳೆದ ವರ್ಷಕ್ಕಿಂತ ಈ ಬಾರಿ ಪ್ರತಿ ಕ್ವಿಂಟಾಲ್‌ಗೆ 105 ರೂ. ಹೆಚ್ಚಳವಾಗಿದ್ದರೂ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ಕಡಲೆ ಮಾರಾಟಕ್ಕೆ ರೈತರು ಹಿಂದೇಟು ಹಾಕುತ್ತಿದ್ದಾರೆ. ಇದರ ಪರಿಣಾಮ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಕಡಲೆ ಖರೀದಿ ಆಗಿಲ್ಲ. ಖರೀದಿ ಮಾಡಿರುವ ಕಡಲೆಯ ಹಣ ಪಾವತಿಯಲ್ಲಿಯೂ ವಿಳಂಬವಾಗಿದೆ.

    ಮುಕ್ತ ಮಾರುಕಟ್ಟೆ, ಖರೀದಿ ಕೇಂದ್ರದ ದರ ಸಮ

    ಕಡಲೆ ಇಳುವರಿ ಕಡಿಮೆ ಆಗಿದ್ದರಿಂದ ಸಾಕಷ್ಟು ರೈತರು ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ್ದರು. ಆದರೆ, ಮುಕ್ತ ಮಾರುಕಟ್ಟೆ ಮತ್ತು ಖರೀದಿ ಕೇಂದ್ರದಲ್ಲಿನ ದರ ಬಹುತೇಕ ಸಮನಾಗಿದೆ. ಈ ಹಿನ್ನೆಲೆಯಲ್ಲಿ ಫಸಲನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ರೈತರು ಹೆಚ್ಚಿನ ಉತ್ಸಾಹ ತೋರಿದ್ದಾರೆ. ಖರೀದಿ ಕೇಂದ್ರದಲ್ಲಿ ಹಣ ಪಾವತಿ ವಿಳಂಬ ಮತ್ತು ಗುಣಮಟ್ಟದ ಹೆಸರಿನಲ್ಲಿ ಸತಾಯಿಸುತ್ತಿರುವುದೇ ರೈತರ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

    825 ರೈತರು ಕಡಲೆ ಮಾರಾಟಕ್ಕೆ ಹೆಸರು ನೋಂದಣಿ

    ಕಳೆ ಬಾರಿ ಸಮಯಕ್ಕೆ ಸರಿಯಾಗಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಈ ಮೂಲಕ ಕೇಂದ್ರ ಸರ್ಕಾರದ ಬೆಂಬಲ ಬೆಲೆಯಡಿ ಎಫ್‌ಎಕ್ಯೂ ಗುಣಮಟ್ಟದ ಕಡಲೆಯನ್ನು ಪ್ರತಿ ಕ್ವಿಂಟಾಲ್‌ಗೆ 5230 ರೂ.ಗೆ ಖರೀದಿ ಮಾಡಲಾಗಿತ್ತು. ಈ ಬಾರಿ ಬೆಂಬಲ ಬೆಲೆಯನ್ನು 5335 ಕ್ಕೆ ಏರಿಕೆ ಮಾಡಲಾಗಿದೆ. ಆದರೂ, ತಾಲೂಕಿನ ತುರ್ವಿಹಾಳದ ಚೌಡೇಶ್ವರ ರೈತ ಉತ್ಪಾದಕ ಕಂಪನಿಯಲ್ಲಿ ಈವರೆಗೆ 825 ರೈತರು ಕಡಲೆ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಸಿದ್ದು, ಈ ಪೈಕಿ 602 ಜನ ರೈತರು 7950 ಕ್ವಿಂಟಾಲ್ ಕಡಲೆ ಮಾರಾಟ ಮಾಡಿದ್ದಾರೆ.

    ದರ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು

    ಜವಳಗೇರಾದಲ್ಲಿ 1400 ಕ್ವಿಂಟಾಲ್ ಕಡಲೆ ಮಾರಾಟಕ್ಕೆ ರೈತರು ನೋಂದಣಿ ಮಾಡಿಸಿದ್ದು, 1100 ಕ್ವಿಂಟಾಲ್ ಖರೀದಿಯಾಗಿದೆ. ಉಮಲೂಟಿಯ ಪ್ರಾಥಮಿಕ ಪತ್ತಿನ ಸಹಕಾರ ಸಂಘದಲ್ಲಿ 738 ರೈತರ ಪೈಕಿ 544 ರೈತರಿಂದ 7107 ಕ್ವಿಂಟಾಲ್ ಖರೀದಿಯಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಕಡಲೆಗೆ 5200 ರೂಪಾಯಿವರೆಗೆ ಮಾರಾಟವಾಗುತ್ತಿದೆ. ದರ ಇನ್ನೂ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ರೈತರು ಕಡಲೆ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಕೆಲವರು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಖರೀದಿಗೆ ನೀಡಿದ್ದ ಸಮಯ ಮುಗಿಯುತ್ತಾ ಬಂದರೂ ನಿರೀಕ್ಷಿತ ಮಟ್ಟದಲ್ಲಿ ಕಡಲೆ ಖರೀದಿ ಆಗಿಲ್ಲ.
    ಇದನ್ನೂ ಓದಿ: 20ರಿಂದ ಮೇ 15ರವರೆಗೆ ಬೆಂಬಲ ಬೆಲೆಯಡಿ ಕಡಲೆಕಾಳು ಖರೀದಿ

    ಗರಿಷ್ಠ ಮಿತಿ ಕೇವಲ 15 ಕ್ವಿಂಟಾಲ್

    ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಉತ್ತಮ ಇಳುವರಿ ಪಡೆದಿದ್ದರು. ಆದರೆ, ಹಿಂಗಾರು ಹಂಗಾಮಿನಲ್ಲಿ ಸರಿಯಾಗಿ ಮಳೆ ಆಗದ ಪರಿಣಾಮ ಪ್ರತಿ ಎಕರೆಗೆ 2 ರಿಂದ 4 ಕ್ವಿಂಟಾಲ್ ಕಡಲೆ ರಾಶಿ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಕಡಿಮೆ ಇಳುವರಿ ದಾಖಲಾಗಿದೆ. ಕಡಲೆ ಬೆಳೆ ಬಿತ್ತನೆ ಆರಂಭದಲ್ಲಿಯೇ ತಾಲೂಕಿನಲ್ಲಿ ಹೆಚ್ಚಾಗಿ ಮಳೆ ಬಿದ್ದಿದ್ದರಿಂದ ತೇವಾಂಶ ಹೆಚ್ಚಳ, ನೀರಿನ ಕೊರೆತದಿಂದ ರೈತರು ನಷ್ಟ ಅನುಭವಿಸಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ ಪ್ರತಿ ರೈತರಿಗೆ ಗರಿಷ್ಠ 15 ಕ್ವಿಂಟಾಲ್ ಖರೀದಿ ನಿಗದಿ ಮಾಡಿರುವುದು ಕೂಡ ರೈತರು ಕೇಂದ್ರಗಳತ್ತ ಸುಳಿಯದಿರಲು ಕಾರಣವಾಗಿದೆ. ಏ.30 ವರೆಗೆ ಕಡಲೆ ಮಾರಾಟಕ್ಕೆ ಅವಕಾಶ ಇದೆ.

    ಬೆಂಬಲ ಬೆಲೆ ಯೋಜನೆಯಡಿ ಕಡಲೆ ಮಾರಾಟಕ್ಕೆ ನೋಂದಣಿ ಮಾಡಿಸಿದ್ದ ರೈತರಿಂದ ಖರೀದಿಸಲಾಗಿದೆ. ಕೆಲ ರೈತರು ಮಾರುಕಟ್ಟೆಯಲ್ಲಿ ಕಡಲೆ ಮಾರಿದ್ದಾರೆ. ಈ ಬಾರಿ ಇಳುವರಿ ಕಡಿಮೆ ಬಂದಿದ್ದರಿಂದ ನಿರೀಕ್ಷೆಯಂತೆ ಖರೀದಿ ಆಗಿಲ್ಲ. ಖರೀದಿ ಕೇಂದ್ರದಲ್ಲಿ ಕಡಲೆ ಮಾರಾಟ ಮಾಡಿದ ರೈತರ ಖಾತೆಗೆ ಹಣ ಜಮಾ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶೀಘ್ರ ರೈತರ ಖಾತಗೆ ಹಣ ಜಮಾ ಆಗಲಿದೆ.
    ಸುನೀಲ್ ವ್ಯವಸ್ಥಾಪಕ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ, ರಾಯಚೂರು

    ಈ ಬಾರಿ ಕಡಲೆ ಫಸಲು ನಿರೀಕ್ಷೆಯಂತೆ ಬಂದಿಲ್ಲ. ಇಳುವರಿಯೂ ಕುಸಿತಗೊಂಡಿದೆ. ಸರ್ಕಾರದ ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲೇ ದರ ಹೆಚ್ಚಿದೆ. ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದರೆ ಹಣ ಪಾವತಿ ವಿಳಂಬವಾಗುವುದರಿಂದ ರೈತರು ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ.
    ಬಸವರಾಜ ಹಳೆಮನಿ,ರೈತ, ಕಲ್ಮಂಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts