More

    ಹಿಂಗಾರು ಬೆಳೆಗೆ ಇಬ್ಬನಿ ಕೊರತೆ

    ಶಿಗ್ಗಾಂವಿ: ಈ ಬಾರಿ ರಾಜ್ಯಾದ್ಯಂತ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದೇ ರೈತ ಸಮುದಾಯ ತೀವ್ರ ಸಂಕಷ್ಟ ಅನುಭವಿಸಿದೆ. ಬಿತ್ತನೆ ಮಾಡಿದ ಬೆಳೆಗಳು ಕೈ ಸೇರಿಲ್ಲ. ಇದೀಗ ಹಿಂಗಾರು ಮಳೆಯ ಜತೆ ಡಿಸೆಂಬರ್ ತಿಂಗಳು ಶುರುವಾದರೂ ಚಳಿ ವಾತಾವರಣ, ಇಬ್ಬನಿಯೂ ಇಲ್ಲದೆ ಅನ್ನದಾತರು ಕಂಗಾಲಾಗುವಂತೆ ಮಾಡಿದೆ.

    ಹಿಂಗಾರಿನ ಬೆಳೆಗಳಿಗೆ ಹೆಚ್ಚಿನ ಮಳೆಯ ಅಗತ್ಯವಿಲ್ಲ. ಬದಲಿಗೆ ಇಬ್ಬನಿ, ಉತ್ತಮವಾದ ಚಳಿ ಬಿಟ್ಟರೆ ಇಳುವರಿ ಬರುತ್ತವೆ. ಆದರೆ, ನವೆಂಬರ್ ಕಳೆದು ಡಿಸೆಂಬರ್ ಬಂದರೂ ಚಳಿ ಶುರುವಾಗಿಲ್ಲ. ಇದರಿಂದ ಕಡಲೆ, ಜೋಳ, ಗೋಧಿ, ಕುಸುಬಿ ಸೇರಿದಂತೆ ಇತರೆ ಬೆಳೆಗಳಿಗೆ ಕೀಟಬಾಧೆ ಆವರಿಸಿದೆ.

    ತಾಲೂಕಿನಲ್ಲಿ ಒಟ್ಟಾರೆಯಾಗಿ 9 ಸಾವಿರ ಹೆಕ್ಟೇರ್ ಹಿಂಗಾರು ಬಿತ್ತನೆಯಾಗಿದೆ. ಅದರಲ್ಲಿ 5354 ಹೆಕ್ಟೇರ್ ಬಿಳಿಜೋಳ, 827 ಹೆಕ್ಟೇರ್ ಕಡಲೆ, 1477 ಹೆಕ್ಟೇರ್ ನೀರಾವರಿ ಗೋವಿನಜೋಳ, 45 ಹೆಕ್ಟೇರ್ ನೀರಾವರಿ ಶೇಂಗಾ, 85 ಹೆಕ್ಟೇರ್ ಸೋಯಾಬೀನ್ ಸೇರಿದಂತೆ ಹುರಳಿ, ಉದ್ದು, ಅಲಸಂದಿ, ಕುಸಬಿ ಬಿತ್ತನೆಯಾಗಿದೆ. ನೀರಾವರಿ ಹೊರತುಪಡಿಸಿ ಒಣ ಬೇಸಾಯದ ಕುಸುಬಿ, ಕಡಲೆ, ಬಿಳಿ ಜೋಳ ಮಳೆ ಹಾಗೂ ತೇವಾಂಶದ ಕೊರತೆ ಜತೆಗೆ ಇಬ್ಬನಿ ಇಲ್ಲದೆ ಕುಂಠಿತಗೊಂಡಿವೆ ಎಂದು ಶಿಗ್ಗಾಂವಿ ಸಹಾಯಕ ಕೃಷಿ ಅಧಿಕಾರಿ ಸುರೇಶ ಬಾಬುರಾವ್ ದೀಕ್ಷಿತ್ ತಿಳಿಸಿದ್ದಾರೆ.

    ತಾಲೂಕಿನ ಶಿಗ್ಗಾಂವಿ, ಬಂಕಾಪುರ, ದುಂಡಸಿ ಈ ಮೂರು ಹೋಬಳಿಗಳಲ್ಲಿ ರೈತರು ಬಿತ್ತನೆ ಮಾಡಿರುವ ಬಿಳಿಜೋಳಕ್ಕೆ ಸುಳಿ ರೋಗದ ಜತೆಗೆ ಲದ್ದಿಹುಳ ಕಾಟ ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬಿತ್ತನೆ ಮಾಡಿದ್ದಾರೆ. ಆದರೆ, ತೇವಾಂಶ ಇಲ್ಲದೆ ಬೆಳೆ ಒಣಗಲಾರಂಭಿಸಿವೆ. ಇದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದು, ಸರ್ಕಾರ ಕೂಡಲೇ ಬರ ಪರಿಹಾರ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

    ಮುಂಗಾರು ಬರ ಆವರಿಸಿತ್ತು. ಹಿಂಗಾರು ಬೆಳೆಗಳು ಕೂಡ ಕೈಕೊಟ್ಟಿವೆ. ದನ ಕರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಸರ್ಕಾರ ಕೂಡಲೇ ಮೇವಿನ ವ್ಯವಸ್ಥೆ ಮಾಡಬೇಕು ಹಾಗೂ ರೈತರಿಗೆ ಬರ ಪರಿಹಾರ ನೀಡಬೇಕು.

    | ಶಂಕರಗೌಡ ಪಾಟೀಲ, ರಾಜ್ಯ ರೈತ ಸಂಘ, ಹಸಿರು ಸೇನೆ ತಾಲೂಕು ಉಪಾಧ್ಯಕ್ಷ

    ಬೆಳೆ ಸಮೀಕ್ಷೆ ಪ್ರಕಾರ ತಾಲೂಕಿನ ರೈತರಿಗೆ ಸದ್ಯದ ಪರಿಸ್ಥಿತಿಗೆ ಯಾವುದೇ ಮೇವಿನ ಕೊರತೆಯಾಗದು. 40 ವಾರಗಳಿಗೆ ಆಗುವಷ್ಟು ರೈತರ ಬಳಿ ಮೇವು ಸಂಗ್ರಹಣೆಯಾಗಿದೆ. ಮುಂದಿನ ದಿನಗಳಲ್ಲಿ ಮೇವಿನ ಕೊರತೆಯಾಗದಂತೆ ಮುಂಜಾಗ್ರತೆಯಾಗಿ ಬಿಳಿಗೋವಿನಜೋಳ, ಜೋಳ, ಸಜ್ಜೆ ಬೀಜಗಳನ್ನು ಮೇವಿಗಾಗಿ ಮಿನಿ ಕಿಟ್ ರೂಪದಲ್ಲಿ 453 ಪ್ಯಾಕೆಟ್​ಗಳನ್ನು ರೈತರಿಗೆ ವಿತರಿಸಲಾಗಿದೆ. ಮುಂದಿನ ವಾರದಲ್ಲಿ ಇನ್ನೂ 443 ಪ್ಯಾಕೆಟ್ ಧಾನ್ಯಗಳು ಸರ್ಕಾರದಿಂದ ಬರಲಿದೆ. ಹೆಚ್ಚುವರಿಯಾಗಿ 2700 ಪ್ಯಾಕೆಟ್ ಬೀಜಗಳ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

    | ರಾಜೇಂದ್ರ ಅರಳೇಶ್ವರ, ತಾಲೂಕು ಸಹಾಯಕ ಪಶು ವೈದ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts