More

    ಬೆನ್ನುನೋವು, ಕುತ್ತಿಗೆ ನೋವಿಗೆ ಸರಳ ಪರಿಹಾರಗಳು

    ಬೆನ್ನುನೋವು, ಕುತ್ತಿಗೆ ನೋವಿಗೆ ಸರಳ ಪರಿಹಾರಗಳುಇತ್ತೀಚಿನ ದಿನಗಳಲ್ಲಿ ಬೆನ್ನುನೋವು ಹಾಗೂ ಕುತ್ತಿಗೆನೋವು ಹೆಚ್ಚು ಜನರನ್ನು ಕಾಡುತ್ತಿರುವ ಸಮಸ್ಯೆಗಳಾಗಿವೆ. ದೇಹವನ್ನು ಬಗ್ಗಿಸಿ ಮಾಡುವ ಯಾವ ಕೆಲಸಗಳನ್ನೂ ನಾವು ನೆಚ್ಚಿಕೊಳ್ಳುತ್ತಿಲ್ಲ; ದೇಹವನ್ನು ಹಿಂದೆ ಬಾಗಿಸುವ ಯಾವ ಕಾರ್ಯಗಳೂ ನಮ್ಮಿಂದ ಆಗುತ್ತಿಲ್ಲ. ದೇಹವನ್ನು ಕೇವಲ ಒಂದೇ ಭಂಗಿಯಲ್ಲಿರಿಸಿಕೊಂಡು ಮಾಡುವ ಕಾರ್ಯಗಳು ನಮ್ಮ ದಿನನಿತ್ಯದ ಅಗತ್ಯಗಳಾಗಿವೆ. ನಾವು ಕುಳಿತುಕೊಳ್ಳುವ ಭಂಗಿಯಲ್ಲಿ ಎಡವುತ್ತಿರುವ ಪರಿಣಾಮವೇ ಬೆನ್ನುನೋವು, ಕುತ್ತಿಗೆ ನೋವು, ತನ್ಮೂಲಕ ತಲೆನೋವು. ಆದ್ದರಿಂದ ನಾವು ಕುಳಿತುಕೊಳ್ಳುವ ಭಂಗಿ ಹೇಗಿರಬೇಕೆಂಬ ಅರಿವು ಅಗತ್ಯ.

    ಕುರ್ಚಿಯ ಮೇಲೆ ಕುಳಿತುಕೊಂಡಿರುವಾಗ ಕಾಲುಗಳನ್ನು ಅಥವಾ ಪಾದಗಳನ್ನು ಕತ್ತರಿಯ ಆಕಾರದಲ್ಲಿ (ಅಡ್ಡಲಾಗಿ) ಹಾಕಿಕೊಳ್ಳಬಾರದು. ಕಾಲಿನ ಎರಡೂ ಮಂಡಿಗಳ ಮಧ್ಯದಲ್ಲಿ ಚಿಕ್ಕದಾದ ಅಂತರವಿರಲಿ. ಅಲ್ಲದೆ ಕುರ್ಚಿಯ ಎದುರುಭಾಗ (ಕುಳಿತುಕೊಂಡಿರುವಾಗ ತೊಡೆಯ ಕೆಳಗೆ ಬಂದಿರುತ್ತದೆ) ಮತ್ತು ಮಂಡಿಯ ನಡುವೆಯೂ ಸ್ವಲ್ಪ ಅಂತರವಿರಲಿ. ಕೆಳಬೆನ್ನು ಮತ್ತು ಬೆನ್ನಿನ ಮಧ್ಯಭಾಗಕ್ಕೆ ಕುರ್ಚಿಯ ಸಹಾಯ ಬರುವಂತೆ ಕುರ್ಚಿಯಲ್ಲಿನ ಜಾಗವನ್ನು ಹೊಂದಿಸಿಕೊಳ್ಳಬೇಕು (ದಿಂಬುಗಳ ಸಹಾಯವನ್ನು ಪಡೆದುಕೊಳ್ಳಬಹುದು.) ಪೃಷ್ಠಭಾಗವೂ ಸರಿಯಾಗಿ ಕುರ್ಚಿಯಲ್ಲಿ ಹೊಂದಿಕೆ ಆಗಿರುವುದು ಅವಶ್ಯ. ಭುಜ ಅಗಲವಾಗಿರಬೇಕು. ನೇರವಾಗಿರಬೇಕು. ಜೊತೆಯಲ್ಲಿ ಕತ್ತನ್ನು ಎತ್ತರಿಸಿಕೊಂಡಿರುವುದು, ವಿಶ್ರಾಂತಿದಾಯಕವಾಗಿಯೂ ಇರುವುದು ಒಳ್ಳೆಯದು. ಆದರೆ 45 ನಿಮಿಷಗಳಿಗೂ ಅಧಿಕ ಸಮಯ ಒಂದೇ ಭಂಗಿಯಲ್ಲಿ ಕುಳಿತುಕೊಂಡಿರುವುದನ್ನು ತಪ್ಪಿಸಬೇಕು. ಮಧ್ಯದಲ್ಲಿ ಐದು ನಿಮಿಷವಾದರೂ ಎದ್ದು ಓಡಾಡಬೇಕು. ಪ್ರತಿನಿತ್ಯ ಮುಂದೆ, ಹಿಂದೆ ಬಗ್ಗುವ ವ್ಯಾಯಾಮವನ್ನು ಮಾಡುವುದು ಉತ್ತಮ.

    ಬೆನ್ನುನೋವು, ಕುತ್ತಿಗೆನೋವು, ಭುಜದ ನೋವು ಕಾಡುತ್ತಿದ್ದಲ್ಲಿ ನೋವು ನಿವಾರಣಾ ತೈಲವನ್ನು ಹಚ್ಚಿ ಸ್ವಲ್ಪ ಹೊತ್ತಿನ ನಂತರದಲ್ಲಿ ಬಿಸಿನೀರಿನ ಶಾಖ ತೆಗೆದುಕೊಳ್ಳುವುದರಿಂದ ನೋವು ನಿವಾರಣೆಯಾಗುತ್ತದೆ (ಮಸಾಜ್ ಮಾಡಬಾರದು; ಮಸಾಜ್ ಮಾಡುವುದರಿಂದ ನೋವು ಉಲ್ಬಣವಾಗುವ ಸಾಧ್ಯತೆ ಇರುತ್ತದೆ). ಬೆನ್ನುಹುರಿ ಸ್ನಾನ, ಇಮ್ಮರ್ಶನ್ ಬಾತ್, ಸ್ಟೀಮ್ ಬಾತ್​ನಂತಹ ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದು ಬೆನ್ನುನೋವು ನಿವಾರಣೆಯಲ್ಲಿ ಬಹಳ ಪರಿಣಾಮಕಾರಿ. ಮನೆಯಲ್ಲಿಯೇ ಅಲ್ಟರ್​ನೇಟ್ ಥೆರಪಿ (3 ನಿಮಿಷ ಬಿಸಿನೀರಿನ ಶಾಖ, 3 ನಿಮಿಷ ತಣ್ಣನೆಯ ಶಾಖವನ್ನು) ತೆಗೆದುಕೊಳ್ಳುವುದರಿಂದಲೂ ನೋವು ನಿವಾರಣೆಯಾಗುತ್ತದೆ. ಇದಕ್ಕೆ ಮಂಜುಗಡ್ಡೆಯನ್ನು ಬಳಸಬಹುದು. ಅಕ್ಯುಪಂಕ್ಚರ್ ಚಿಕಿತ್ಸೆ, ಯೋಗ ಚಿಕಿತ್ಸೆ ಫಲದಾಯಕ. ದೇಹದಲ್ಲಿ ಚೆನ್ನಾಗಿ ರಕ್ತಸಂಚಾರವಾಗುವುದರಿಂದ ನೋವು ಬೇಗನೆ ಕಡಿಮೆ ಆಗುತ್ತ ಬರುತ್ತದೆ. ಆಯಸ್ಕಾಂತ ಚಿಕಿತ್ಸೆಯನ್ನೂ ಪಡೆಯಬಹುದು. ದೇಹದಲ್ಲಿ ರಕ್ತಸಂಚಾರವನ್ನು ಹೆಚ್ಚಿಸುವ ಆಹಾರಪದಾರ್ಥಗಳ ಸೇವನೆಯೊಂದಿಗೆ ನೋವುನಿವಾರಣಾ ಗುಣ ಹೊಂದಿರುವ ಆಹಾರಸೇವನೆಯೂ ಮುಖ್ಯ. ಶುಂಠಿ ಕಷಾಯ, ಶುಂಠಿಯನ್ನು ನೋವಿರುವ ಭಾಗದಲ್ಲಿ ಜಜ್ಜಿ ಇರಿಸಿಕೊಳ್ಳುವುದು ನೋವು ಶಮನವಾಗುವಲ್ಲಿ ಪರಿಣಾಮಕಾರಿ. ಬೀಟ್​ರೂಟ್, ಟೊಮ್ಯಾಟೊ ಸೇವನೆಯು ರಕ್ತ ಉತ್ಪತ್ತಿಗೆ ಸಹಕರಿಸುತ್ತವೆ. ಖರ್ಜೂರ, ಒಣದ್ರಾಕ್ಷಿ, ಅಂಜೂರಗಳನ್ನು ಶುದ್ಧ ನೀರಿನಲ್ಲಿ ನೆನೆಸಿ ನಂತರ ಸೇವಿಸುವುದು ಈ ನಿಟ್ಟಿನಲ್ಲಿ ಉಪಯೋಗಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts