More

    ಯುಟಿಪಿ ಕಾಲುವೆಯಲ್ಲಿ ಗಿಡಗಂಟಿ

    ಗುತ್ತಲ: ಕಳೆದ 2 ವರ್ಷಗಳಿಂದ ತುಂಗಾ ಮೇಲ್ದಂಡೆ ಯೋಜನೆಯ (ಯುಟಿಪಿ) ಕಾಲುವೆಗಳು ಸ್ವಚ್ಛಗೊಳ್ಳದ ಕಾರಣ ಪ್ರಸಕ್ತ ವರ್ಷ ರೈತರ ಜಮೀನುಗಳಿಗೆ ನೀರು ತಲುಪುವುದು ಅನುಮಾನವಾಗಿದೆ.

    ಗುತ್ತಲ ಹೋಬಳಿಯ ಕೂರಗುಂದ ಗ್ರಾಮದಿಂದ ಟಾಟಾ ಮಣ್ಣೂರ ಗ್ರಾಮದ ವರೆಗೆ ಅಂದಾಜು 13600 ಹೆಕ್ಟೇರ್ ಜಮೀನಿಗೆ ಯುಟಿಪಿ ಕಾಲುವೆ ನೀರು ತಲುಪುತ್ತಿತ್ತು. ಆದರೆ, ಕಾಲುವೆಗುಂಟ ಜಾಲಿ ಗಿಡಗಳು ಬೆಳೆದು, ಅಪಾರ ಪ್ರಮಾಣದ ಹೂಳು ತುಂಬಿಕೊಂಡಿದ್ದರಿಂದ ನೀರು ಹರಿಯದ ಸ್ಥಿತಿ ನಿರ್ವಣವಾಗಿದೆ.

    ಯುಟಿಪಿ ಕಾಲುವೆ ನೀರನ್ನೇ ನೆಚ್ಚಿಕೊಂಡು ಸಾವಿರಾರು ರೈತರು ಬೆಳೆ ಬೆಳೆಯುತ್ತಿದ್ದಾರೆ. ಈಗಾಗಲೇ ಶೇ.85ರಷ್ಟು ರೈತರು ಬಿತ್ತನೆ ಮಾಡಿದ್ದಾರೆ. ಸಕಾಲಕ್ಕೆ ಮಳೆ ಬಾರದಿದ್ದರೆ ಕಾಲುವೆ ನೀರನ್ನು ಬಳಸಿಕೊಳ್ಳುತ್ತಿದ್ದ ರೈತರಲ್ಲಿ ಈಗ ಆತಂಕ ಮೂಡಿದೆ. ಅಲ್ಲದೆ, ಪ್ರತಿವರ್ಷ ರೈತರು ಬಳಸದೆ ಇರುವ ಕಾಲುವೆ ನೀರು ವಿವಿಧ ಗ್ರಾಮಗಳ ಕೆರೆ ಸೇರುತ್ತಿತ್ತು. ಆದರೆ, ಕಾಲುವೆಗಳಲ್ಲಿ ಹೂಳು ತುಂಬಿರುವ ಕಾರಣ ನೀರು ಹರಿಯುವಿಕೆ ವಿಳಂಬವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

    ಕಳೆದ ಸೋಮವಾರದಿಂದಲೇ ತುಂಗಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕಾಲುವೆ ಸ್ವಚ್ಛತೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ತಿಂಗಳಾಂತ್ಯಕ್ಕೆ ಜಮೀನಿಗಳಿಗೆ ನೀರು ಬರುವುದೋ ಇಲ್ಲವೋ ಎಂಬ ಅನುಮಾನ ರೈತರದ್ದಾಗಿದೆ.

    ಜು. 5ರಿಂದ ತುಂಗಾ ಕಾಲುವೆಗಳಿಗೆ ನೀರು ಬಿಡಲಾಗುತ್ತಿದೆ. 500 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ರೈತರ ಬೇಡಿಕೆ ಹಾಗೂ ಮಳೆ ಆಧರಿಸಿ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲಾಗುವುದು.

    | ಎಸ್. ರಮೇಶ, ಅಧೀಕ್ಷಕ ಇಂಜಿನಿಯರ್, ಯುಟಿಪಿ ಯೋಜನೆ, ಶಿವಮೊಗ್ಗ

    ಕಾಲುವೆಗಳ ಸ್ವಚ್ಛತೆಗಾಗಿ ಟೆಂಡರ್ ಕರೆಯಲಾಗಿದೆ. ಅಲ್ಲದೆ, ಈಗಾಗಲೇ ಕೆಲವೆಡೆ ಕಾಲುವೆಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಕಾಲುವೆಗೆ ನೀರು ಬರುವ ಮುನ್ನವೇ ಸ್ವಚ್ಛತೆ ಕಾರ್ಯ ಪೂರ್ಣಗೊಳ್ಳಲಿದೆ.

    | ಜಿ.ಆರ್. ಕೊಟ್ರೇಶಿ, ಕಾರ್ಯನಿರ್ವಾಹಕ ಇಂಜಿನಿಯರ್, ರಾಣೆಬೆನ್ನೂರ.

    ಕಾಲುವೆಗಾಗಿ ನೀಡಿದ ಜಮೀನಿನ ಪರಿಹಾರವೂ ಬಂದಿಲ್ಲ. ಕಾಲುವೆಗಳಲ್ಲಿ ಹೂಳು ತುಂಬಿರುವ ಕಾರಣ ಜಮೀನಿಗೆ ನೀರೂ ಸಹ ಬರುತ್ತಿಲ್ಲ. ಈ ವರ್ಷವಾದರೂ ಕಾಲುವೆ ದುರಸ್ತಿ ಮಾಡಬೇಕು.

    | ಶಿವಾನಂದ ಕಾಗಿನೆಲ್ಲಿ, ರೈತ, ಗುತ್ತಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts