More

    ಶಿರಸಿಯಲ್ಲಿ ಜೈನ ಸಮಾಜದಿಂದ ಮೌನ ಪ್ರತಿಭಟನೆ

    ಶಿರಸಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ನಡೆದ ಪಪೂ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಖಂಡಿಸಿ ಜೈನ ಸಮುದಾಯದವರು ಗುರುವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ಶ್ರೀಧರ ಮಂದಲಮನಿ ಅವರಿಗೆ ಮನವಿ ಸಲ್ಲಿಸಿದರು.

    ಸೋದೆ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಬಸ್ತಿಗಲ್ಲಿಯಿಂದ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಝುೂ ಸರ್ಕಲ್ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

    ಪ.ಪೂ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ಋಷಿ-ಮುನಿಗಳು, ತೀರ್ಥಂಕರರು ನಮ್ಮ ದೇಶದ ಆದರ್ಶಪ್ರಾಯರು. ನಮ್ಮ ದೇಶದಲ್ಲಿ ಇವರನ್ನು ಅತ್ಯಂತ ಪೂಜನೀಯ ಸ್ಥಾನದಲ್ಲಿ ಕಾಣುತ್ತೇವೆ. ಆದರ್ಶ ತತ್ವದಡಿ ನಮ್ಮ ಸಂವಿಧಾನ ನಿಂತಿದ್ದು, ನಮ್ಮ ರಾಜ್ಯದಲ್ಲಿ ಋಷಿ, ಮುನಿಗಳಿಗೆ, ಮಹಾನ್ ವ್ಯಕ್ತಿಗಳಿಗೆ, ಸಾಧು-ಸಂತರಿಗೆ ರಕ್ಷಣೆ ಇಲ್ಲದಂತಾಗಿರುವುದು ದುರದೃಷ್ಟಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

    ಇತ್ತೀಚೆಗೆ ನಡೆದ ಪಪೂ ಕಾಮಕುಮಾರನಂದಿ ಮಹಾರಾಜರ ಕೊಲೆಯನ್ನು ಸಮಸ್ತ ಜೈನ ಸಮುದಾಯ ಖಂಡಿಸುತ್ತದೆ. ಅಹಿಂಸಾ ಧರ್ಮದ ತಳಹಳದಲ್ಲಿ ಎಲ್ಲ ಧರ್ಮವೂ ಇದೆ. ಆದರೆ, ಇಂದು ಸಾಧು-ಸಂತರಿಗೆ ರಕ್ಷಣೆ ಇಲ್ಲದಂತಾಗಿದೆ. ಸ್ವಾಮೀಜಿ ಏಕಾಂತದಲ್ಲಿರುವಾಗ ವಿದ್ಯುತ್ ಶಾಕ್ ನೀಡಿ, ವಿಕೃತವಾಗಿ ಕೊಲೆ ಮಾಡಿದ್ದಾರೆ. ಅಹಿಂಸಾ, ಶಾಂತಿ ಪ್ರಿಯರಾಗಿರುವ ಜೈನ ಸಮುದಾಯದ ಸ್ವಾಮೀಜಿ ಕೊಲೆಯನ್ನು ವಿರೋಧಿಸುತ್ತದೆ. ಪೊಲೀಸ್ ಇಲಾಖೆ ಅಧಿಕಾರಿಗಳು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಯಾರ ಒತ್ತಡಕ್ಕೆ ಮಣಿಯದೇ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

    ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ಶ್ರೀಧರ ಮಂದಲಮನಿ ಮನವಿ ಸ್ವೀಕರಿಸಿ ಮಾತನಾಡಿ, ಈ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

    ಪ್ರತಿಭಟನಾ ಮೆರವಣಿಗೆಯಲ್ಲಿ ಮಹಾವೀರ ಆಲೂರು, ದೇವರಾಜ ಕೆಲ್ಲ, ಅರವಿಂದ ಬಳೆಗಾರ ಬನವಾಸಿ, ಚಂದ್ರರಾಜ ಜೈನ ಸೋಂದಾ, ಪ್ರಕಾಶ ಕಕೋಳ್ಳಿ, ಸೋಂದಾ ಗ್ರಾಪಂ ಅಧ್ಯಕ್ಷೆ ಮಮತಾ ಜೈನ, ಬಾಹುಬಲಿ ಜೈನ, ಜಯಪಾಲ್ ಧಾರವಾಡ, ಬಾಹುಬಲಿ ಅಜ್ಜರಣಿ, ಅಶೋಕ ರಿತ್ತಿ, ವಿಕ್ರಂ ಧಾರವಾಡ, ಜಿನದತ್ತ ಜೈನ, ಲಕ್ಷ್ಮೀಪತಿ ಇಂದ್ರ ಸೇರಿ ನೂರಾರು ಜನರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts