More

    ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸಿ

    ಎಚ್.ಡಿ.ಕೋಟೆ: ಶಿಕ್ಷಣದ ವ್ಯಾಪಾರೀಕರಣ, ನಿರುದ್ಯೋಗ, ಬೆಲೆ ಏರಿಕೆ, ರೈತ, ಕಾರ್ಮಿಕ ವಿರೋಧಿ ಹಾಗೂ ಇನ್ನಿತರ ಜನವಿರೋಧಿ ನೀತಿಗಳ ವಿರುದ್ಧ ಜನರ ಹೋರಾಟಕ್ಕೆ ಮುಂದಾಗಬೇಕು ಎಂದು ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದ ಮೈಸೂರು ಜಿಲ್ಲಾ ಕಾರ್ಯದರ್ಶಿ ಬಿ.ರವಿ ಕರೆನೀಡಿದರು.

    ಪಟ್ಟಣದ ಹಳೇ ತಾಲೂಕು ಕಚೇರಿ ಬಳಿ ಎಸ್.ಯು.ಸಿ.ಐ. ಕಮ್ಯೂನಿಸ್ಟ್ ಪಕ್ಷದ ವತಿಯಿಂದ ದೇಶವ್ಯಾಪಿ ಜನರ ಜ್ವಲಂತ ಸಮಸ್ಯೆಗಳ ವಿರುದ್ಧ ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

    ಶಿಕ್ಷಣ, ಆರೋಗ್ಯ ರಂಗಗಳು ಖಾಸಗೀಕರಣಗೊಂಡು, ಜನರ ಕೈಗೆ ಎಟುಕದಂತಾಗಿದೆ. ವಿದ್ಯಾವಂತರಾಗಿದ್ದರೂ ಉದ್ಯೋಗ ಸಿಗದೆ ಯುವಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ದಿನನಿತ್ಯ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಜನಸಾಮಾನ್ಯರ ಬದುಕನ್ನು ದುರ್ಬರಗೊಳಿಸಿದೆ. ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರ ಬದುಕು ಕೂಡ ಸಂಕಷ್ಟಮಯವಾಗಿದೆ. ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ 2 ವರ್ಷಗಳು ಕಳೆದರೂ ಯಾವುದೇ ಕ್ರಮಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯ ಸರ್ಕಾರವಾಗಲಿ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುತ್ತಿಲ್ಲ. ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಸರ್ಕಾರಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕೆ ಜನ ಹೋರಾಟವೇ ಏಕೈಕ ಪರಿಹಾರ ಎಂದು ಹೇಳಿದರು.

    ವಿವಿಧ ಬೇಡಿಕೆಗಳು: ಬೆಲೆ ಏರಿಕೆ ತಡೆಗಟ್ಟಬೇಕು, ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟ ವ್ಯವಸ್ಥೆಯನ್ನು ಸರ್ಕಾರ ನಿರ್ವಹಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ತಕ್ಷಣವೇ ಹಿಂಪಡೆಯಬೇಕು. ಶಿಕ್ಷಣದ ಖಾಸಗೀಕರಣ, ವ್ಯಾಪಾರೀಕರಣ ಮತ್ತು ಕೇಸರಿಕರಣ ನಿಲ್ಲಿಸಬೇಕು. ಎಲ್ಲರಿಗೂ ಕಾಯಂ ಉದ್ಯೋಗಗಳನ್ನು ಒದಗಿಸಬೇಕು. ಉದ್ಯೋಗ ನೀಡುವತನಕ ನಿರುದ್ಯೋಗ ಭತ್ಯೆ ನೀಡಬೇಕು. ಸರ್ಕಾರ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ನೀಡಬೇಕು. ಆರೋಗ್ಯ ವಲಯದ ಖಾಸಗೀಕರಣ ನಿಲ್ಲಿಸಬೇಕು. ವಿದ್ಯುತ್ ಕಾಯ್ದೆ-2022 ರದ್ದುಗೊಳಿಸಬೇಕು. ಸ್ಮಾರ್ಟ ಮೀಟರ್ ಅಳವಡಿಕೆ ನಿಲ್ಲಿಸಬೇಕು. ಅರಣ್ಯ ಸಂರಕ್ಷಣಾ ಕಾಯ್ದೆ-2022 ರದ್ದು ಮಾಡಬೇಕು ಸೇರಿದಂತೆ ಪ್ರಮುಖ ಹಕ್ಕೊತ್ತಾಯಗಳಿರುವ ಪತ್ರಕ್ಕೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಾಗೂ ಸಂತೆಯ ಆವರಣದಲ್ಲಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಯಿತು.

    ಎಸ್.ಯು.ಸಿ.ಐ.(ಸಿ) ಪಕ್ಷದ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಪಿ.ಎಸ್.ಸಂಧ್ಯಾ, ಸುನೀಲ್, ಹರೀಶ್ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts